ಮುಂಬೈ: ಇಲ್ಲಿನ ಮಾಂಖುರ್ಡ್ ಪ್ರದೇಶದಲ್ಲಿ ಭಾರೀ ಮಳೆಯ ನಡುವೆ ಮೂರು ಅಂತಸ್ತಿನ 'ಚಾಲ್' (ಹಳೆಯ ಮಾದರಿಯ ವಸತಿ ಸಂಕೀರ್ಣ) ಭಾಗಶಃ ಕುಸಿದು ಬಿದ್ದಿದ್ದು, ಕನಿಷ್ಠ ನಾಲ್ಕರಿಂದ ಐದು ಜನರು ಅವಶೇಷಗಳಡಿ ಸಿಲುಕಿರುವ ಆತಂಕ ಎದುರಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಭಾನುವಾರ ರಾತ್ರಿ ತಿಳಿಸಿದ್ದಾರೆ.
ಜನತಾ ನಗರದ ಹನುಮಾನ್ ಮಂದಿರದ ಹಿಂಭಾಗದಲ್ಲಿರುವ 'ಚಾಲ್ ನಂಬರ್ 5' ರಲ್ಲಿ ಭಾನುವಾರ (ಜು.5) ರಾತ್ರಿ 8.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮೂರು ಅಂತಸ್ತಿನ ಈ ಕಟ್ಟಡದ ಎರಡು ಮೂರು ಮನೆಗಳು ಕುಸಿದು ಬಿದ್ದಿದ್ದು, ಮುಂಬೈ ಅಗ್ನಿಶಾಮಕ ದಳ (MFB), ಪೊಲೀಸ್, ಬಿಎಂಸಿ (BMC) ವಾರ್ಡ್ ಕಚೇರಿ ಸಿಬ್ಬಂದಿ ಮತ್ತು '108' ಆಂಬ್ಯುಲೆನ್ಸ್ ಸೇವೆಗಳ ಮೂಲಕ ಸ್ಥಳದಲ್ಲಿ ಜಂಟಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

