ಮುಂಬಯಿ ಎನ್ನುವುದು ಒಂದು ಮಹಾಲೋಕ. ಇಲ್ಲಿನ ಬದುಕಿನ ಆದ್ಯಂತಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆಂದರೆ ಅದೊಂದು ಭ್ರಮೆಯೇ ಆಗಿರುವುದು. ನಿಸರ್ಗ, ಆರ್ಥಿಕತೆ ಮತ್ತು ರಹಸ್ಯಲೋಕಗಳ ಸಂಗಮವಾದ ಯಕ್ಷಲೋಕವೇ ಮೈದಳೆದಂತೆ ಇರುವ ಮುಂಬಯಿ ಯಕ್ಷರ ಹಾಗೂ ಅವರ ದೊರೆ ಕುಬೇರನ ಕೃಪೆಯಿಂದಲೋ ಎಂಬಂತೆ ಉದ್ಯೋಗ, ವ್ಯಾಪಾರ, ಕನಸು ಮತ್ತು ಅವಕಾಶಗಳೆಂಬ ನಿಧಿಗಳ ಆಗರವಾಗಿದೆ.
ಬದುಕು ಒಡ್ಡುವ ಬವಣೆಗಳಿಗೆ ಬೆನ್ನು ಹಾಕದೇ ಎದುರಿಸುವ ನಗರವಾಗಿದೆ. ಇಲ್ಲಿನ ಭೌಗೋಳಿಕ ಪರಿಸರವು ಎಷ್ಟು ಸಂಕೀರ್ಣವಾಗಿದೆಯೋ ಅದಕ್ಕಿಂತ ಎಷ್ಟೋ ಪಟ್ಟು ಇಲ್ಲಿನ ಜನರ ಮನೋಲೋಕವು ವಿಲಕ್ಷಣವಾಗಿದೆ. ಸಂಕೀರ್ಣ ಸಂಸ್ಕೃತಿಯೊಂದಿಗೆ ವಲಸಿಗರಿಗಾಗಿ ಬಂದ ಮನುಷ್ಯನು ಹೊಂದಿಕೊಳ್ಳುವಾಗ ರೂಪಿಸಿಕೊಳ್ಳುವ ನಡಾವಳಿಗಳು ಬೆರೆತು ವಿಶಿಷ್ಟವಾದ ಮುಂಬಯಿ ಲೋಕವು ಸೃಷ್ಟಿಯಾಗಿದೆ.
ಇಲ್ಲಿ ಇದ್ದಾನೆಂದರೆ ಆತ ಗೆದ್ದವನೇ. ಇಂತಹ ನೆಲದಲ್ಲಿ ತಮ್ಮ ಮೂಲ ಮಣ್ಣಿನ ಮೆದುತ್ವವನ್ನು ಅನುಭವಿಸಲು ನೆಲಸಿಗರು ಹಲವು ವಿಧಗಳಲ್ಲಿ ಹೆಣಗಾಡುತ್ತಾರೆ. ಅಂತಹ ಪ್ರಯತ್ನದಲ್ಲಿ ಹುಟ್ಟಿಸಿಕೊಂಡದ್ದು ಇಲ್ಲಿನ ಕಲಾಲೋಕ.
ಹಲವು ಆಕ್ರಮಣಗಳಿಗೆ ಗುರಿಯಾದ ಮುಂಬಾಪುರಿಯು ಬಹು ವಿಧದ ಸಂವೇದನೆಗಳನ್ನು ತಿಂದುಂಡು ಗಟ್ಟಿಯಾಗಿ ನಿಂತಿದೆ. ಜನರ ವಿಚಾರಗಳು, ಭಾವನೆಗಳು, ಭಯ, ಭೀಬತ್ಸಕ ಸನ್ನಿವೇಶಗಳು ಆದರ್ಶ, ಔದಾರ್ಯ, ಅಂಜಿಕೆ, ಅಲಂಕಾರಗಳು ಇಲ್ಲಿ ಅನವರತ ಕಾರ್ಯ ನಿರ್ವಹಿಸುತ್ತವೆ. ಇವೆಲ್ಲದರ ನಿರ್ವಹಣೆಯ ನಡೆಯಲ್ಲಿ ನಮ್ಮ ಕನ್ನಡ ಕಲೆಯು, ಕಲಿಕೆಯು ಬೇಕೆನಿಸಿದರೆ ಅದು ಅಂತರಾಳದ ಆಕಾಂಕ್ಷೆಯೇ ಆಗಿರುತ್ತದೆ.
ಇದನ್ನು ಈಡೇರಿಸುವಲ್ಲಿ ಬಹುಪಾಲು ನಮ್ಮ ನಾಡಿನ ಮೂಲ ಗುಣಮುಖವಾಗಿ ಬೆಳೆದ ಯಕ್ಷಗಾನ ಕಲೆಯದು ಎಂಬುದಕ್ಕೆ ಇಲ್ಲಿ ನಡೆಯುವ ಯಕ್ಷಗಾನ ಚಟುವಟಿಕೆಗಳೇ ಸಾಕ್ಷಿ. ನಗರದ ನಿಬಿಡ ಜನಾರಣ್ಯದಲ್ಲಿ ಒಂದೂವರೆ ಶತಮಾನಕ್ಕೂ ಹಿಂದೆಯೇ ಯಕ್ಷಗಾನದ ಗೆಜ್ಜೆನಾದವು ಮೊಳಗಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಬಣ್ಣದ ವೇಷ ಭೂಷಣ, ಸಾಹಿತ್ಯ, ಹಾಡು, ಕುಣಿತ ಪುರಾಣಾದಿಗಳಿಂದ ಮೂಡಿ ಬರುವ ಮಾತಿನಾಟಗಳ ಮೂಲಕ ಮನೆಗೆಲ್ಲುವ ಯಕ್ಷಗಾನ ಕಲೆಯು ಅನೇಕ ಮುಂಬಯಿ ಕನ್ನಡಿಗರ ಮೆಚ್ಚಿನ ಹವ್ಯಾಸವೂ ಆಗಿದೆ.
ಯಕ್ಷಗಾನವು ಕರ್ನಾಟಕದ ದಕ್ಷಿಣ ಕನ್ನಡ, ಉತ್ತರ ಕನ್ನಡ ಎನ್ನುವ ಸ್ಥಳೀಯತೆಯ ಆಧಾರದ ಮೇಲೆ ರೂಢಿಸಿಕೊಂಡ ಕೆಲವು ಭಿನ್ನತೆಗಳಿಂದಾಗಿ ತೆಂಕುತಿಟ್ಟು ಬಡಗುತಿಟ್ಟು, ಬಡಾ ಬಡಗು ತಿಟ್ಟು ಎನ್ನುವ ಹೆಸರನ್ನು ಪಡೆದರೂ ಅಸ್ವಾದನೆಯ ಹಂತದಲ್ಲಿ ಅದು ಅಭಿನ್ನವಾಗಿಯೇ ಉಳಿಯುತ್ತದೆ.
ಯಕ್ಷಗಾನ ಕಲೆಯ ಉಗಮವಾದ ಕುರುಹುಗಳನ್ನು ಅಧ್ಯಯನಕಾರರು ಪ್ರಾಚೀನ ಕೃತಿಗಳಲ್ಲಿಯೇ ಗುರುತಿಸಿದ್ದಾರೆ. ಭೀಮರಾವ ಚಿಟಗುಪ್ಪಿಯವರು "ಯಕ್ಷಗಾನವು ಶಾಸ್ತ್ರೀಯ ಕಲೆಯಾಗಿದ್ದು, ಕಾಲ ಪ್ರಭಾವದಿಂದ ಇದು ಜನಪದವಾಗಿದೆ.' ಎಂಬುದಾಗಿ ಗುರುತಿಸಿದ್ದಾರೆ. ಸಂಪೂರ್ಣವಾಗಿ ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳನ್ನು ಅಳವಡಿಸಿಕೊಂಡಿದ್ದರೂ ಪ್ರಕೃತಿಯ ಕಾವಲುಗಾರರು ಎಂದು ಪರಿಗಣಿಸಿರುವ ಯಕ್ಷರು ಹಾಡುವ ಹಾಡು ಎನ್ನುವ ಅರ್ಥದಲ್ಲಿ ಗ್ರಹಿಸಿದರೆ ಇದು ಜಾನಪದದ ಸಹಜತೆಗೆ ಬಹಳ ಹತ್ತಿರವಾಗಿರುವ ಕಲೆಯಾಗಿದೆ. ಇದರಿಂದಾಗಿಯೇ ಮುಂಬಯಿಯ ಯಾಂತ್ರಿಕ ಬದುಕಿಗೆ ಯಕ್ಷಗಾನದ ಸೆಳೆತವೇನೋ.
ಬಯಲಾಟದ ಪರಂಪರೆಯಿಂದ ರೂಪುಗೊಂಡ ಯಕ್ಷಗಾನವು ತನ್ನ ಮೂಲ ಸಾಂಸ್ಕೃತಿಕ ಸ್ವರೂಪವನ್ನು ಉಳಿಸಿಕೊಂಡೇ ಮಹಾನಗರದ ಆಧುನಿಕ ಪ್ರದರ್ಶನ ವೇದಿಕೆಗಳಿಗೂ ಪ್ರವೇಶಿಸಿದೆ. ಹತ್ತೊಂಬತ್ತನೆಯ ಶತಮಾನದ ನಲವತ್ತರ ದಶಕದಲ್ಲಿಯೇ ಮುಂಬಯಿಯಲ್ಲಿ ಕೋಟೆಯ ಪರಿಸರದಲ್ಲಿ ಬಯಲಾಟಗಳು ಪ್ರದರ್ಶನಗೊಂಡ ಮಾಹಿತಿಗಳಿವೆ. ಕರ್ಕಿಯ ಹಾಸ್ಯಗಾರ ಮನೆತನದ ದಶಾವತಾರ ಮೇಳವು ಮರಾಠಿ ರಂಗಭೂಮಿಯ ಹುಟ್ಟಿಗೆ ಕಾರಣವಾಗಿರುವುದಷ್ಟೇ ಅಲ್ಲದೆ ಹಾಯಿ ಹಡಗಿನ ಮೂಲಕ ಮುಂಬಯಿ ತಲುಪಿ ಅಲ್ಲಿಂದ ಬಡೋದೆಗೆ ಹೋಗಿ ಪ್ರದರ್ಶನಗಳನ್ನು ಕೊಟ್ಟಿರುವುದು ಐತಿಹಾಸಿಕವಾಗಿ ಮಹತ್ವದ ಸಂಗತಿ. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರು ಮುಂಬಯಿಯಲ್ಲಿ ಛಾಪಖಾನೆಯನ್ನು ಆರಂಭಿಸಿ ಅನೇಕ ಯಕ್ಷಗಾನ ಪ್ರಸಂಗಗಳನ್ನು ಸಂಪಾದಿಸಿ ಪ್ರಕಟಿಸಿದರು.
ಹಿರಿಯ ತುಳು ಕನ್ನಡಿಗರನೇಕರು ಕಷ್ಟ ನಷ್ಟಗಳೆಂದು ನೋಡದೆ ಕಲೆಯ ಮೇಲಿನ ಅಭಿರುಚಿ ಅಭಿಮಾನದಿಂದ ತಮ್ಮ ಉದ್ಯೋಗದ ಜತೆಗೆ ಅನೇಕ ಪ್ರಸಂಗ ರಚನೆಗಳನ್ನು ಮಾಡಿ, ಮೇಳಗಳನ್ನು ಹುಟ್ಟುಹಾಕಿ, ಪ್ರದರ್ಶನಗಳನ್ನು, ತರಬೇತಿಯನ್ನು ನೀಡಿ ಅನೇಕ ಕಲಾವಿದರನ್ನು ಅರಳಿಸಿ ಕಲೆಯನ್ನು ಪೋಷಿಸಿದ್ದಾರೆ.
ಹದಿನೈದು ಯಕ್ಷಗಾನ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ ಶ್ರೇಯಸ್ಸು, ಮುಂಬಯಿ ಕನ್ನಡಿಗರದು. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಯಕ್ಷಗಾನ ಕುರಿತಾದ ಮೂರು ಅಧ್ಯಯನಗಳಾಗಿವೆ, ಮಹತ್ವದ ದಾಖಲೆಯ ಕೃತಿಗಳು ರಚನೆಯಾಗಿವೆ, ವಿದ್ವಾಂಸರಿಂದ ಉಪನ್ಯಾಸಗಳು ನಡೆದಿವೆ.
ಕಲಾಪೋಷಕ ಸಂಸ್ಥೆಗಳು ದಾನಿಗಳ ಸಹಕಾರದಿಂದ ಸಕಲ ಆಯೋಜನೆಯ ಜವಾಬ್ದಾರಿಯನ್ನು ಹೊತ್ತು ತಾಯ್ನಾಡಿನ ಮೇಳಗಳು, ಅನೇಕ ಕಲಾವಿದರು, ಹಿಮ್ಮೇಳದವರನ್ನು ಬರಮಾಡಿಕೊಂಡು ಮುಂಬಯಿಯ ಯುವ ಪೀಳಿಗೆಯನ್ನೂ ಅದರೊಂದಿಗೆ ಜೋಡಿಸುವ ಪ್ರಯತ್ನದಲ್ಲಿವೆ.
ಮುಂಬಯಿ ಜನರು ತಾಳಮದ್ದಲೆ ಪ್ರಿಯರು. ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಹೊಸಬರಿಗೂ ಅವಕಾಶ ಕಲ್ಪಿಸಿಕೊಡುತ್ತಿರುವುದು ಪ್ರಶಂಸನೀಯವಾದ ಬೆಳವಣಿಗೆಯಾಗಿದೆ. ಇತ್ತೀಚೆಗೆ ತೆಂಕುಬಡಗಿನ ಕಲಾವಿದರು ಸೇರಿ ಆಡುವ ಕೂಡಾಟಗಳೂ ಮುಂಬಯಿ ನೆಲದಲ್ಲಿ ಹೊಸ ಪರಂಪರೆಯನ್ನು ನಿರ್ಮಿಸಿವೆ.
ರಾತ್ರಿಯಿಡೀ ನಡೆಯುತ್ತಿದ್ದ ಸಾಂಪ್ರದಾಯಿಕ ಆಟಗಳು ಮೂರು ಗಂಟೆಗಳ ಸಣ್ಣಾಟದ ರೂಪಕ್ಕೆ ಬಂದಿವೆ. ಮಹಿಳಾ ತಂಡಗಳು ಉತ್ಸಾಹದಿಂದ ತೊಡಗಿಕೊಂಡಿವೆ. ಕನ್ನಡ ಯಕ್ಷಗಾನವು ಮರಾಠಿ ಭಾಷೆಯಲ್ಲಿಯೂ ಮಿಂಚಿರುವುದು ಒಂದು ಅಪೂರ್ವ ಸಾಧನೆ. ಈ ಅಪ್ಪಟ ಕನ್ನಡ ಕಲೆಯ ವೇಷ- ವರ್ಣಿಕೆ, ಹಿಮೆ¬¾àಳದ ನಾದ, ಗೆಜ್ಜೆಯ ಸದ್ದು, ರಂಗದ ಹೊಳಪು, ಮಾತಿನ ಮಂಟಪ ಇವೆಲ್ಲವೂ ಇಲ್ಲಿನ ಪ್ರಬಲವಾದ ಕನ್ನಡ ಸಂಘಟನೆಯ, ಕಲಾವಿದರ ಅಪಾರವಾದ ಶ್ರಮ, ದಮ ತಪಸ್ಸಿನ ಫಲವಾಗಿವೆ. ಮುಂಬಯಿಯ ವಿವಿಧತೆಯ ವನದಲ್ಲಿ ಯಕ್ಷಗಾನವು ನಿತ್ಯ ನೂತನವಾಗಿ ಕನ್ನಡ ಬಾವುಟವನ್ನು ಹಾರಿಸಿದೆ. ಇದೇ ನಮ್ಮ ನಾಡಿನ ಹಿರಿಮೆಯೂ ಆಗಿದೆ.
*ಕಲಾ ಭಾಗ್ವತ್

