Dailyhunt Logo
  • Light mode
    Follow system
    Dark mode
    • Play Story
    • App Story
ಮುಂಬಯಿಯಲ್ಲ. ಬೊಂಬಾಯಿ!  -ನೆನಪುಗಳ ಹಾದಿಯಲ್ಲೊಂದು ಭಾವನಾತ್ಮಕ ಪಯಣ

ಮುಂಬಯಿಯಲ್ಲ. ಬೊಂಬಾಯಿ! -ನೆನಪುಗಳ ಹಾದಿಯಲ್ಲೊಂದು ಭಾವನಾತ್ಮಕ ಪಯಣ

ಅಂದು ಬೊಂಬಾಯಿಯಲ್ಲಿ ವೇಗ ಇತ್ತು, ಆದರೆ ಮನುಷ್ಯರ ನಡುವೆ ಆತ್ಮೀಯತೆಯೂ ಇತ್ತು. ಸಮಯದ ಕೊರತೆಯಿದ್ದರೂ ಜನರ ಮುಖದಲ್ಲಿ ನಗು ಇತ್ತು. ಚಹಾ ಅಂಗಡಿಯ ಮುಂದೆ ನಿಂತು ಕುಡಿದ ಒಂದು ಕಪ್‌ ಚಹಾದಲ್ಲಿ ಸ್ನೇಹ ಹುಟ್ಟುತ್ತಿತ್ತು. ಲೋಕಲ್‌ ರೈಲಿನಲ್ಲಿ ಪ್ರತಿದಿನ ಭೇಟಿಯಾಗುತ್ತಿದ್ದ ಅಪರಿಚಿತರು ಪರಿಚಿತರಾಗುತ್ತಿದ್ದರು.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನಸ್ಸು ಜನರಲ್ಲಿ ಇತ್ತು. ಆ ಮಾನವೀಯತೆಯೇ ಬೊಂಬಾಯಿಯ ನಿಜವಾದ ಸೌಂದರ್ಯ.

2009ನೇ ವರ್ಷ. ಹತ್ತನೇ ತರಗತಿಯ ಪರೀಕ್ಷೆ ಮುಗಿದಿತ್ತು. ಕೈಯಲ್ಲಿ ಯಾವುದೇ ದೊಡ್ಡ ಪದವಿ ಇರಲಿಲ್ಲ, ಜೇಬಿನಲ್ಲಿ ಹಣ ಇರಲಿಲ್ಲ, ಬದುಕಿನ ಬಗ್ಗೆ ಸ್ಪಷ್ಟ ನಿಲುವಿರಲಿಲ್ಲ. ಆದರೆ ಹೃದಯದೊಳಗೊಂದು ನಂಬಿಕೆ ಮಾತ್ರ ಗಟ್ಟಿಯಾಗಿತ್ತು. "ಕಷ್ಟಪಟ್ಟು ದುಡಿದರೆ ಬದುಕು ಬದಲಾಗುತ್ತದೆ.' ಆ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು, ಊರನ್ನು, ಮನೆಯವರನ್ನು, ಬಾಲ್ಯದ ನೆನಪುಗಳನ್ನು ಹಿಂದೆ ಬಿಟ್ಟು ನಾನು ಬೊಂಬಾಯಿಯ ರೈಲು ನಿಲ್ದಾಣದಲ್ಲಿ ಮೊದಲ ಹೆಜ್ಜೆ ಇಟ್ಟೆ.

ಆ ದಿನ ಇಂದು ಕೂಡ ಕಣ್ಣ ಮುಂದೆ ನಿಂತಂತಿದೆ. ಸಾವಿರಾರು ಜನರ ಓಡಾಟ, ಲೋಕಲ್‌ ರೈಲಿನ ಗದ್ದಲ, ಅಪರಿಚಿತ ಮುಖಗಳು, ಅಪರಿಚಿತ ಭಾಷೆ... ಆ ಮಹಾನಗರದ ಮಧ್ಯೆ ನಿಂತಿದ್ದ ನಾನು ಮಾತ್ರ ಊರಿನಿಂದ ಬಂದ ಒಬ್ಬ ಸಾಮಾನ್ಯ ಹುಡುಗ. ಮನ ಸ್ಸಿನ ಒಂದು ಮೂಲೆಯಲ್ಲಿ ಭಯವಿತ್ತು, ಮತ್ತೂಂದು ಮೂಲೆಯಲ್ಲಿ ಭರವಸೆಯಿತ್ತು. ಊರಿನ ಪರಿಚಿತರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡು, ರಾತ್ರಿ ಶಾಲೆಗೆ ಹೋಗಿ ಓದಬೇಕು ಎಂಬ ಕನಸಿನೊಂದಿಗೆ ನನ್ನ ಹೊಸ ಬದುಕು ಆರಂಭವಾಯಿತು.

ಎಲ್ಲೆಲ್ಲೂ ನಮ್ಮವರೇ!

ಆಗಿನ ಬೊಂಬಾಯಿ ಇಂದಿನ ಮುಂಬಯಿಗಿಂತ ತುಂಬಾ ವಿಭಿನ್ನ. ಹೋಟೆಲ್‌, ಕ್ಯಾಂಟೀನ್‌, ಬೇಕರಿ, ಸಣ್ಣ ವ್ಯಾಪಾರ ಸಂಸ್ಥೆಗಳು ಎಲ್ಲೆಡೆಯೂ ನಮ್ಮ ಕರಾವಳಿ ಭಾಗದವರದ್ದೇ ಸದ್ದು. ಉಡುಪಿ, ಕುಂದಾಪುರ, ಕಾರ್ಕಳ, ಮಂಗಳೂರು ಭಾಗದ ಸಾವಿರಾರು ಯುವಕರು ತಮ್ಮ ಕನಸುಗಳನ್ನು ಹೊತ್ತು ಬೊಂಬಾಯಿಗೆ ಬರುತ್ತಿದ್ದರು. ಅವರ ಬೆವರು, ತ್ಯಾಗ, ಹೋರಾಟಗಳ ಮೇಲೆ ಅನೇಕ ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಂಡವು.

ನನ್ನ ಮೊದಲ ಐದು ವರ್ಷಗಳು ಸಿಎಸ್‌ಟಿ ಸುತ್ತ ಮುತ್ತಲೇ ಕಳೆದುಹೋಯಿತು. ಆ ಸಮಯದಲ್ಲಿ ನನ್ನ ಜಗತ್ತು ತುಂಬಾ ಚಿಕ್ಕದಾಗಿತ್ತು. ಕ್ಯಾಂಟೀನ್‌ ಕೆಲಸ, ರಾತ್ರಿ ಶಾಲೆ, ಮುಂಬಯಿ ಸೆಂಟ್ರಲ್‌ ಲೈಬ್ರರಿ ಮತ್ತು ಸಿಎಸ್‌ಟಿ ರೈಲು ನಿಲ್ದಾಣ. ಬೆಳಿಗ್ಗೆ ಕೆಲಸ, ರಾತ್ರಿ ಓದು-ಇದೇ ನನ್ನ ದಿನಚರಿ. ದಿನವಿಡೀ ದುಡಿದು ದೇಹ ಸುಸ್ತಾಗಿದ್ದರೂ, ಮನಸ್ಸು ಮಾತ್ರ ಕನಸುಗಳಿಗಾಗಿ ಹೋರಾಡುತ್ತಿತ್ತು.

ಪರೀಕ್ಷೆಯ ದಿನಗಳು ಹತ್ತಿರ ಬಂದಾಗ ಮುಂಬಯಿ ಸೆಂಟ್ರಲ್‌ ಲೈಬ್ರರಿಯ ಮೌನದ ಕೋಣೆಯಲ್ಲಿ ಗಂಟೆಗಟ್ಟಲೆ ಕುಳಿತು ಓದುತ್ತಿದ್ದೆ. ಕೆಲವೊಮ್ಮೆ ಹಗಲಿಡೀ ಕೆಲಸ ಮಾಡಿದ ಸುಸ್ತುನಿಂದ ಪಾಠ ನಡೆಯುತ್ತಿದ್ದರೂ ಅರಿವಿಲ್ಲದೆ ಬೆಂಚಿನ ಮೇಲೆ ತಲೆ ವಾಲಿ ಕ್ಷಣಕಾಲ ನಿದ್ದೆ ಮಾಡುತ್ತಿದ್ದೆ. ಇಂದು ಆ ಕ್ಷಣಗಳನ್ನು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ಒಂದು ನಗು ಮೂಡುತ್ತದೆ, ಹೃದಯದೊಳಗೆ ಒಂದು ಮಧುರ ನೋವು ಎದ್ದೇಳುತ್ತದೆ.

ಬೊಂಬಾಯಿಯ ರವಿವಾರಗಳು ಮಾತ್ರ ಬೇರೆ ರೀತಿಯ ಸಂತೋಷ ನೀಡುತ್ತಿದ್ದವು. ಬಾಲಾರ್ಡ್‌ ಎಸ್ಟೇಟ್‌ನ ವಿಶಾಲ ರಸ್ತೆಗಳಲ್ಲಿ ಸ್ನೇಹಿತರ ಜತೆ ಕ್ರಿಕೆಟ್‌ ಆಡುತ್ತಿದ್ದ ಆ ಕ್ಷಣಗಳು ಬದುಕಿನ ಒತ್ತಡಗಳನ್ನು ಮರೆಸುತ್ತಿದ್ದವು. ಕೆಲವೇ ಹೊತ್ತಿನಲ್ಲಿ ಮತ್ತೆ ಊರಿನ ಹುಡುಗರಾಗುತ್ತಿದ್ದೆವು.

ಆದರೆ ಎಲ್ಲಕ್ಕಿಂತ ಹೆಚ್ಚು ನೆನಪಾಗುವುದು ಊರು. ಇಂದು ಬೇಕಾದಾಗ ಊರಿಗೆ ಹೋಗಿ ಬರಬಹುದು. ಆದರೆ ಆಗ ಹಾಗಿರಲಿಲ್ಲ. ವರ್ಷಕ್ಕೆ ಒಂದು ಸಲ, ಕೆಲವೊಮ್ಮೆ 2 ವರ್ಷಕ್ಕೊಮ್ಮೆ ಮಾತ್ರ ಊರಿನ ಮಣ್ಣನ್ನು ಮುಟ್ಟುವ ಅವಕಾಶ ಸಿಗುತ್ತಿತ್ತು. ಅಪ್ಪ-ಅಮ್ಮನ ಮುಖವನ್ನು ನೆನೆದು ಕಣ್ಣೀರು ಹಾಕಿದ ರಾತ್ರಿಗಳು ಇವೆ. ಹಬ್ಬ-ಹರಿದಿನಗಳು ಬಂದಾಗ ಮಂಕಾದ ದಿನಗಳೂ ಇವೆ. ಫೋನ್‌ ಕರೆಗಳು ಕಡಿಮೆ, ಸೌಲಭ್ಯಗಳು ಕಡಿಮೆ, ಆದರೆ ಪ್ರೀತಿ ಮಾತ್ರ ಅಷ್ಟೇ ಹೆಚ್ಚು.

ಇಂದಿನ ಮುಂಬಯಿಯನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಮೆಟ್ರೋ, ಸಮುದ್ರ ಸೇತುವೆಗಳು, ಗಗನಚುಂಬಿ ಕಟ್ಟಡಗಳು, ಆಧುನಿಕ ತಂತ್ರಜ್ಞಾನ ನಗರವನ್ನೇ ಬದಲಾಯಿಸಿದೆ. ಪ್ರಯಾಣ ಸುಲಭವಾಗಿದೆ, ಜೀವನ ವೇಗವಾಗಿದೆ, ಅವಕಾಶಗಳು ಹೆಚ್ಚಾಗಿವೆ. ಆದರೆ ಈ ಅಭಿವೃದ್ಧಿಯ ನಡುವೆ ಹಳೇ ಬೊಂಬಾಯಿಯ ಆತ್ಮೀಯತೆ ಎಲ್ಲೋ ಮಸುಕಾಗುತ್ತಿದೆಯೇ? ಬೊಂಬಾಯಿ ನನಗೆ ಕೇವಲ ಒಂದು ನಗರವಾಗಿರಲಿಲ್ಲ. ಅದು ನನ್ನ ಶಿಕ್ಷಕನಾಗಿತ್ತು. ಅದು ಬದುಕಿನ ಮೌಲ್ಯಗಳನ್ನು ಕಲಿಸಿತು. ಕಷ್ಟಪಟ್ಟು ದುಡಿದರೆ ಏನನ್ನಾದರೂ ಸಾಧಿ ಸಬಹುದು ಎಂಬ ವಿಶ್ವಾಸ ನೀಡಿತು. ಕನಸುಗಳಿಗೆ ರೆಕ್ಕೆಗಳನ್ನು ಕೊಟ್ಟಿತು. ಆದ್ದರಿಂದಲೇ ಇಂದಿಗೂ ನಾನು "ಮುಂಬಯಿ' ಎಂದು ಹೇಳಿದಾಗ ಮನಸ್ಸು ಮಾತ್ರ "ಬೊಂಬಾಯಿ' ಎಂದೇ ಗುನುಗುತ್ತದೆ. ನಗರ ಬದಲಾಗಿದೆ, ರಸ್ತೆಗಳು ಬದಲಾಗಿವೆ, ಕಟ್ಟಡಗಳು ಎತ್ತರವಾಗಿವೆ, ಕಾಲ ಬದಲಾಗಿದೆ. ಆದರೆ ನನ್ನ ನೆನಪುಗಳಲ್ಲಿ ಉಳಿದಿರುವ ಬೊಂಬಾಯಿ ಮಾತ್ರ ಇನ್ನೂ ಅದೇ ಆಗಿದೆ-ಹೋರಾಟದ, ಪ್ರೀತಿಯ, ಸ್ನೇಹದ, ಕಣ್ಣೀರಿನ, ಕನಸುಗಳ ಮತ್ತು ಬದುಕಿನ ಪಾಠಗಳ ನಗರವಾಗಿದೆ. ಕೆಲವು ನಗರಗಳು ನಕ್ಷೆಯಲ್ಲಿ ಮಾತ್ರ ಇರುತ್ತವೆ. ಆದರೆ ಬೊಂಬಾಯಿ ನನ್ನ ಹೃದಯದೊಳಗೆ ಮನೆ ಮಾಡಿದೆ.

*ಹರೀಶ್‌ ಉಪ್ರಳ್ಳಿ , ಉಲ್ವೆ

Dailyhunt
Disclaimer: This content has not been generated, created or edited by Dailyhunt. Publisher: Udayavani