ಹನಮಕೊಂಡ: ತೆಲಂಗಾಣದ ಹನಮಕೊಂಡ ಜಿಲ್ಲೆಯ ಪುನ್ನೆಲ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಕುಟುಂಬಕ್ಕೆ ಸೇರಿದ ಈಜುಕೊಳದಲ್ಲೇ ತಾಯಿ ಮತ್ತು ಆಕೆಯ ಇಬ್ಬರು ಪುಟ್ಟ ಹೆಣ್ಣುಮಕ್ಕಳು ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೇಲ್ನೋಟಕ್ಕೆ ಇದು ಆಕಸ್ಮಿಕ ಸಾವು ಎಂದು ತೋರುತ್ತಿದ್ದರೂ, ಗಂಡನ 'ಗಂಡು ಮಗುವಿನ ವ್ಯಾಮೋಹವೇ' ಈ ಸಾವಿಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೃತರನ್ನು ಫರ್ಹತ್ (26) ಮತ್ತು ಆಕೆಯ ಪುತ್ರಿಯರಾದ ಉಮೇರಾ (8) ಹಾಗೂ ಆಯೆಷಾ (6) ಎಂದು ಗುರುತಿಸಲಾಗಿದೆ.
ಮೃತ ಫರ್ಹತ್ ಪ್ರಸ್ತುತ ಗರ್ಭಿಣಿಯಾಗಿದ್ದರು. ವಾರಂಗಲ್-ಖಮ್ಮಂ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ತಮ್ಮದೇ ಮಾಲೀಕತ್ವದ ಈಜುಕೊಳಕ್ಕೆ ಬುಧವಾರ ರಾತ್ರಿ ಮೂವರು ತೆರಳಿದ್ದರು. ಗುರುವಾರ ಬೆಳಿಗ್ಗೆ ಮೂವರೂ ನೀರಿನಲ್ಲಿ ಶವವಾಗಿ ತೇಲುತ್ತಿರುವುದು ಪತ್ತೆಯಾಗಿದೆ.
ಆಕಸ್ಮಿಕವೋ ಅಥವಾ ಕೊಲೆಯೋ?
ಫರ್ಹತ್ ಪತಿ ಮೊಹಮ್ಮದ್ ಅಜರುದ್ದೀನ್, ಇದು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಂಭವಿಸಿದ ಸಾವು ಎಂದು ಪ್ರತಿಪಾದಿಸಿದ್ದಾನೆ. ಆದರೆ, ಫರ್ಹತ್ ಪೋಷಕರು ಮತ್ತು ಸಂಬಂಧಿಕರು ಇದನ್ನು ಒಪ್ಪಲು ಸಿದ್ಧರಿಲ್ಲ. "ಇದು ಆಕಸ್ಮಿಕವಲ್ಲ, ಸುಪಾರಿ ಕೊಲೆ ಎಂದು ಫರ್ಹತ್ ತಂದೆ ಅಲಿ ಆರೋಪಿಸಿದ್ದಾರೆ.
ಇನ್ನು ಈ ಕುರಿತು ಹೇಳಿಕೆ ನೀಡಿದ ಫರ್ಹತ್ ಪೋಷಕರು "ನನ್ನ ಮಗಳು ಮತ್ತು ಮೊಮ್ಮಕ್ಕಳನ್ನು ಅಜರುದ್ದೀನ್ ಕೊಲೆ ಮಾಡಿ, ಅಪಘಾತದ ನಾಟಕವಾಡುತ್ತಿದ್ದಾನೆ. ದಂಪತಿಗಳ ನಡುವೆ ಮಕ್ಕಳ ವಿಷಯವಾಗಿ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು," ಎಂದು ಅಲಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೋಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಪ್ರಕರಣದ ಹಿಂದೆ ಲಿಂಗ ತಾರತಮ್ಯ ಮತ್ತು ಗಂಡು ಮಗುವಿನ ಹಂಬಲ ಇರುವ ಶಂಕೆ ಕೂಡ ವ್ಯಕ್ತವಾಗಿದ್ದು, ಅಜರುದ್ದೀನ್ ತನಗೆ ಗಂಡು ಮಗು ಬೇಕೆಂದು ಹಠ ಹಿಡಿದಿದ್ದ ಎನ್ನಲಾಗಿದೆ. ಈ ಹಿಂದೆಯೂ ಫರ್ಹತ್ ಹೆಣ್ಣು ಮಗುವಿಗೆ ಜನ್ಮ ನೀಡಬಹುದು ಎಂಬ ಶಂಕೆಯಿಂದ ಆಕೆಗೆ ಬಲವಂತವಾಗಿ ಗರ್ಭಪಾತ ಮಾಡಿಸಲು ಅಜರುದ್ದೀನ್ ಯತ್ನಿಸಿದ್ದ ಎಂಬ ಗಂಭೀರ ಆರೋಪವಿದೆ. ಆದರೆ ಈ ಬಾರಿ ಫರ್ಹತ್ ಗರ್ಭಪಾತಕ್ಕೆ ಒಪ್ಪದಿದ್ದಾಗ ದಂಪತಿಗಳ ನಡುವೆ ತೀವ್ರ ಕಲಹ ಏರ್ಪಟ್ಟಿತ್ತು. ಇದೇ ಕಾರಣಕ್ಕೆ ಈಜುಕೊಳಕ್ಕೆ ಕರೆದೊಯ್ದು ಈ ಕೃತ್ಯ ಎಸಗಿರಬಹುದು ಎಂದು ಪೋಲೀಸರು ಶಂಕಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಅಕ್ರಮ ಲಿಂಗ ಪತ್ತೆ ಮತ್ತು ಬಲವಂತದ ಗರ್ಭಪಾತದ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ. ಸದ್ಯ ಗ್ರಾಮದಲ್ಲಿ ಉದ್ವಿಗ್ನ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

