Dailyhunt
ಮುಸ್ಲಿಂ ಮತ ಬೇಡ ಎನ್ನುವ ಯತ್ನಾಳ್ ಹುಚ್ಚ:‌ ಶಾಸಕ ರಾಜು ಸೇಠ್

ಮುಸ್ಲಿಂ ಮತ ಬೇಡ ಎನ್ನುವ ಯತ್ನಾಳ್ ಹುಚ್ಚ:‌ ಶಾಸಕ ರಾಜು ಸೇಠ್

ಬೆಳಗಾವಿ: ನಮಗೆ ಮುಸ್ಲಿಂ ಮತಗಳು ಬೇಡ ಎನ್ನುವ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರು ಹುಚ್ಚರು. ಇಂತಹ ಮಾತುಗಳಿಂದಲೇ ನಾವು ದೇಶ ಮತ್ತು ರಾಜ್ಯವನ್ನು ಹಾಳು ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಶಾಸಕ ರಾಜು ಸೇಠ ಹೇಳಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳಗೆ ಒಳ್ಳೆಯ ಬುದ್ಧಿ ಇದೆ.

ನೆನಪಿನ ಶಕ್ತಿ ಚೆನ್ನಾಗಿದೆ. ಬಹಳ ಉತ್ತಮವಾಗಿ ಮಾತನಾಡುವದನ್ನು ನಾವು ಸದನದಲ್ಲಿ ನೋಡಿದ್ದೇವೆ. ಒಂದು ವೇಳೆ ಅವರು ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋದರೆ ದೇಶದ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ ಎಂದರು.

ನಮಗೆ ಮುಸ್ಲಿಂ ಮತಗಳು ಬೇಡ ಎನ್ನುವವರು ಹುಚ್ಚರು. ಅದು ಅವರ ತಪ್ಪು ಕಲ್ಪನೆ. ನಮಗೆ ಇದು ಬೇಡ, ಅವರು ಬೇಡ ಎಂದು ಹೇಳುತ್ತಲೇ ನಾವು ದೇಶ ಮತ್ತು ರಾಜ್ಯವನ್ನು ಹಾಳು ಮಾಡುತ್ತಿದ್ದೇವೆ. ಎಲ್ಲರಿಗೂ ಎಲ್ಲ ಸಮುದಾಯದ ಜನರು ಬೇಕು ಎಂದು ಶಾಸಕ ರಾಜು ಸೇಠ ತಿರುಗೇಟು ನೀಡಿದರು.

ಬಾಗಲಕೋಟೆ ಮತ್ತು ದಾವಣಗೆರೆ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯಗಳಿಸುತ್ತಾರೆ. ಪಕ್ಷದ ಬಹುತೇಕ ಶಾಸಕರು ಹಾಗೂ ಸಚಿವರು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾರ್ಯಕರ್ತರು ಸಹ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸೇಠ್ ಹೇಳಿದರು.

ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ. ಟಿಕೆಟ್ ವಿಚಾರದಲ್ಲಿ ವರಿಷ್ಠರ ನಿರ್ಧಾರವೇ ಅಂತಿಮ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಆದ್ಯತೆ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಹೀಗಿರುವಾಗ ದಾವಣಗೆರೆ ಟಿಕೆಟ್ ವಿಚಾರದಲ್ಲಿ ಯಾವುದೇ ಅಸಮಾಧಾನ ಇಲ್ಲ. ಸಚಿವ ಜಮೀರ ಅಹ್ಮದ್ ಅವರಿಗೂ ಸಹ ಯಾವ ರೀತಿಯ ನೋವು, ಅಸಮಾಧಾನ ಇಲ್ಲ ಎಂದು ರಾಜು ಸೇಠ್ ಸ್ಪಷ್ಟನೆ‌ ನೀಡಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani