ಮಂಡ್ಯ: ಋಷಿಕೇಶ ಹಾಗೂ ಹರಿದ್ವಾರ ಮಾದರಿಯಲ್ಲಿ ಕಾಲುವೆ ನಿರ್ಮಾಣ ಮಾಡುವ ಮೂಲಕ ಭಕ್ತಾಧಿಗಳ ಸುರಕ್ಷತೆಗಾಗಿ ಸ್ನಾನಘಟ್ಟ ನಿರ್ಮಿಸಲಾಗುವುದು. ಯೋಜನೆಗೆ ಅಗತ್ಯವಿರುವ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರು ಮಾಡಲು ಸೂಚಿಸಲಾಗಿದೆ ಎಂದು ಬೃಹತ್ ಮತ್ತು ಮದ್ಯಮ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಮೇಲುಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಪ್ರಸಿದ್ಧ ಪ್ರವಾಸಿತಾಣ ಮುತ್ತತ್ತಿಯಲ್ಲಿ ಇತ್ತೀಚೆಗೆ ಕಾವೇರಿ ನದಿ ನೀರಿನಲ್ಲಿ ಐವರು ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾವೇರಿ ನದಿ ತೀರ ಹಾಗೂ ಅಗತ್ಯವಿರುವ ಕಡೆಗಳಲ್ಲಿ20 ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಅರಣ್ಯ ಇಲಾಖೆ ಸಿಬಂದಿ ಜೊತೆಗೂಡಿ ಪ್ರತಿದಿನ 8 ಮಂದಿ ಮಾರ್ಷಲ್(ಭದ್ರತಾ ಸಿಬಂದಿ)ಗಳ ನಿಯೋಜನೆಗೆ ಸೂಚಿಸಲಾಗಿದೆ. ಮುತ್ತತ್ತಿಯಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಿ ಹಬ್ಬ, ವಿಶೇಷ ದಿನಗಳು, ರಜಾ ದಿನಗಳಲ್ಲಿ ಒಬ್ಬ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಿಯೋಸಲು ಎಸ್ಪಿ ಅವರಿಗೆ ಸೂಚಿಸಲಾಗಿದೆ ಎಂದರು.

