Dailyhunt Logo
  • Light mode
    Follow system
    Dark mode
    • Play Story
    • App Story
ನಾಗೇಂದ್ರ ರಾಜೀನಾಮೆ: ಬಿಜೆಪಿಗೆ ಮೊದಲ ಯಶ

ನಾಗೇಂದ್ರ ರಾಜೀನಾಮೆ: ಬಿಜೆಪಿಗೆ ಮೊದಲ ಯಶ

ಬೆಂಗಳೂರು: ವಾಲ್ಮೀಕಿ ಹಗರಣದ ಆರೋಪಿ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಬಿಜೆಪಿ ರಾಜ್ಯ ಘಟಕದ ಸಾಂ ಕ ಹೋರಾಟಕ್ಕೆ ಇದೇ ಮೊದಲ ಬಾರಿಗೆ ಜಯ ಸಿಕ್ಕಂತಾಗಿದ್ದು, ಕಾರ್ಯಕರ್ತರ ದೃಷ್ಟಿಯಲ್ಲಿ ಸೋತು ಮಲಗಿದ್ದ ಬಿಜೆಪಿಗೆ ಈ ಪ್ರಕರಣದಿಂದ ಆಕ್ಸಿಜನ್‌ ದೊರೆತಂತಾಗಿದೆ.

ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕರಾಗಿ ಆರ್‌.ಅಶೋಕ್‌ ನೇಮಕವಾದ ಬಳಿಕ ಯಾವುದೇ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ ಎಂಬ ಆರೋಪ ಇತ್ತು.

ಆದರೆ, ನಾಗೇಂದ್ರ ಪ್ರಕರಣವನ್ನು ಮಾತ್ರ ಬಿಜೆಪಿ ಎರಡು ಬಾರಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ಹಗರಣ ಸಂಬಂಧ ಬಿಜೆಪಿ ಹೋರಾಟ ನಡೆಸಿದಾಗಲೂ ನಾಗೇಂದ್ರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಒಂದೇ ಹಗರಣ ಸಂಬಂಧ ಒಬ್ಬನೇ ಮಂತ್ರಿಯನ್ನು ಎರಡು ಬಾರಿ ರಾಜೀನಾಮೆ ಕೊಡಿಸಿದ ಕೀರ್ತಿಗೆ ಬಿಜೆಪಿ ಪಾತ್ರವಾಗಿದೆ.

ಬಿಜೆಪಿಗೆ ಅಸ್ತ್ರವಾಗಿದ್ದ ನಾಗೇಂದ್ರ

ಎರಡನೇ ಬಾರಿಗೆ ನಾಗೇಂದ್ರ ಸಂಪುಟಕ್ಕೆ ಸೇರ್ಪಡೆಯಾದ ದಿನದಿಂದಲೇ ಬಿಜೆಪಿ ಈ ವಿಚಾರವನ್ನು ಪ್ರಮುಖ ಅಸ್ತ್ರವಾಗಿ ಪ್ರಯೋಗಿಸಲಾರಂಭಿಸಿತು. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಲಾಗಿತ್ತು. ಸದನ ಪ್ರಾರಂಭವಾದ ದಿನದಿಂದಲೂ ಉಭಯ ಸದನಗಳಲ್ಲಿ ಈ ಸಂಬಂಧ ಹೋರಾಟ ನಡೆಯಿತು. ಅಶೋಕ, ವಿಜಯೇಂದ್ರ, ಅರವಿಂದ ಬೆಲ್ಲದ್‌, ಸುನಿಲ್‌ ಕುಮಾರ್‌, ಛಲವಾದಿ ನಾರಾಯಣಸ್ವಾಮಿ, ಎನ್‌.ರವಿಕುಮಾರ್‌ವೊದಲಾದವರು ಈ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡಿದ್ದರು. ಮುಂಗಾರು ಅಧಿವೇಶನ ಪೂರ್ತಿ ನಾಗೇಂದ್ರ ರಾಜೀನಾಮೆಗಾಗಿನ ಹೋರಾಟಕ್ಕೆ ಬಲಿಯಾಯ್ತು. ಇದೇ ಮೊದಲ ಬಾರಿಗೆ ತನ್ನ ಹಳೆಯ 'ಸ್ಪಿರಿಟ್‌'ನೊಂದಿಗೆ ಬಿಜೆಪಿ ಪ್ರತಿಪಕ್ಷವಾಗಿ ಸೈ ಎನಿಸಿಕೊಂಡಿತ್ತು.

ಇದರ ಬೆನ್ನಲ್ಲೇ ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರು ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ರಾಯಚೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸುವ ಪ್ರಸ್ತಾಪ ಮುಂದಿಟ್ಟರು. ಇದಕ್ಕೆ ಸ್ಪಂದಿಸಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೆ.1ರಿಂದ 10ರ ವರೆಗೆ ರಾಯಚೂರು-ಬಳ್ಳಾರಿ ಪಾದಯಾತ್ರೆ ಘೋಷಿಸಿಯೇ ಬಿಟ್ಟರು. ಪಾದಯಾತ್ರೆ ಪ್ರಾರಂಭವಾದರೆ ದಿನನಿತ್ಯ ಬಿಜೆಪಿಯ ಆರೋಪಗಳಿಗೆ ಉತ್ತರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅನಿವಾರ್ಯವಾಗಿ ಮಣಿದಿರುವ ಸರಕಾರ ಈಗ ನಾಗೇಂದ್ರ ರಾಜೀನಾಮೆ ಪಡೆದುಕೊಂಡಿದೆ.

ಪಾದಯಾತ್ರೆ ನಿಲ್ಲುವುದಿಲ್ಲ: ಬಿವೈವಿ

ಶಿವಮೊಗ್ಗ: ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ನಾವು ಸ್ವಾಗತಿಸುವುದಿಲ್ಲ. ಆದರೆ, ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊರಗೆ ಹೋಗಿರುವ 187 ಕೋ.ರೂ. ನಿಗಮಕ್ಕೆ ವಾಪಸ್‌ ಬರಬೇಕು. ದಲಿತ ಸಮುದಾಯಕ್ಕೆ, ನಿಗಮಕ್ಕೆ ಹಣ ವಾಪಸ್‌ ಬರುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.

ನಮ್ಮ ಬಳ್ಳಾರಿ ಪಾದಯಾತ್ರೆಯಲ್ಲಿ ನಾಗೇಂದ್ರ ರಾಜೀನಾಮೆ ಸೇರಿದಂತೆ ಗೃಹಲಕ್ಷ್ಮೀ ಹಣ 5,000 ಕೋಟಿ ಎಲ್ಲಿ ಹೋಯ್ತು, ಬರದ ವಿಚಾರ, ಸರಕಾರ ಬಂದು 3 ವರ್ಷ ವಾದರೂ ಖಾಲಿ ಇರುವ ಎರಡೂವರೆ ಲಕ್ಷ ಉದ್ಯೋಗ ಭರ್ತಿ ಮಾಡಿಲ್ಲ, ಕೆಪಿಎಸ್‌ಸಿ ಹಗರಣ ಸೇರಿ ಅನೇಕ ವಿಚಾರಗಳು ಇತ್ತು. ಅದೆಲ್ಲದ್ದಕ್ಕೂ ಉತ್ತರ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Udayavani