ಮಂಗಳೂರು: ಬೇಸಗೆಯ ಸೆಖೆ ಇದ್ದಾಗ ಮಕ್ಕಳು ನಾವೆಲ್ಲ ಜತೆಯಾಗಿಯೇ ಹೊರಗಡೆಯ ಜಗಲಿಯಲ್ಲಿ ಮಲಗುತ್ತಿದ್ದೆವು. ಮನೆಯ ಒಳಗೆ ಹಿಂಭಾಗದಲ್ಲಿದ್ದ ಒಂದು ಕೋಣೆಯಲ್ಲಿ ಮಾತ್ರವೇ ಬೆಡ್ ಇತ್ತು. ಮಳೆಗಾಲದಲ್ಲಿ ಚಳಿಯಾಗುತ್ತದೆ ಎಂದು ಮಕ್ಕಳೆಲ್ಲ ಒಟ್ಟಿಗೆ ಅಲ್ಲೇ ಮಲಗುತ್ತಿದ್ದರು.
ಆದರೆ, ಬುಧವಾರ ಅದೇ ಬೆಚ್ಚಗೆಯ ಕೋಣೆಯೇ ನನ್ನ ಇಬ್ಬರು ಮಕ್ಕಳನ್ನು ಬಲಿ ಪಡೆದುಕೊಂಡಿತು ಎಂದು ನಾಗುರಿಯಲ್ಲಿ ತಡೆಗೋಡೆ ಕುಸಿದು ಮೃತಪಟ್ಟ ಇಬ್ಬರು ಮಕ್ಕಳ ತಾಯಿ ಇಂದು ಅವರು ಕಣ್ಣೀರಿಡುತ್ತಾರೆ..
ಹಿರಿಯ ಪುತ್ರಿ ಅಲ್ಕಾ ಬೆಡ್ ಮೇಲೆ ಮಲಗಿದ್ದಳು. ಉಳಿದ ವರು ಕೆಳಗಿದ್ದರು. ನಾಲ್ವರ ಮೇಲೂ ಗೋಡೆ ಬಿದ್ದಿತ್ತು. ಘಟನೆ ನಡೆದಾಗ ಬಾಗಿಲು ತೆರೆಯಲಾಗದೆ ಒಡೆದು ಒಳಗೆ ಹೋದೆವು. ಆ ಸಂದರ್ಭ ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಮೂವರ ಆಸೆಯನ್ನು ನಾವು ಬಿಟ್ಟಿದ್ದೆವು. ರಕ್ಷಣ ಕಾರ್ಯ ಒಂದು ನಿಮಿಷ ಹೆಚ್ಚು ಕಮ್ಮಿಯಾಗಿದ್ದರೆ ಮತ್ತೋರ್ವ ಪುತ್ರಿ ಅಲ್ಕಾ ಕೂಡ ಬದುಕುತ್ತಿರಲಿಲ್ಲ. ದೇವರೇ ಅವಳನ್ನು ಕಾಪಾಡಿದರು. ಆದರೆ, ಮತ್ತಿಬ್ಬರು ಹಾಯಾಗಿ ಮಲಗಿದವರು ನಿದ್ದೆಯಿಂದ ಏಳಲೇ ಇಲ್ಲ ಎಂದು ಭಾವುಕರಾದರು.
ಕಂಕನಾಡಿ ಠಾಣೆ ಪೊಲೀಸರೇ ಇಬ್ಬರನ್ನು ಕಾಪಾಡಿದರು
ಘಟನೆ ನಡೆದಾಗ ಏನು ಮಾಡಬೇಕು ಎಂದು ತೋಚಲಿಲ್ಲ. ಪಕ್ಕದಲ್ಲೇ ಇದ್ದ ಪೊಲೀಸ್ ಠಾಣೆಯತ್ತ ಓಡಿದೆ. ತತ್‌ಕ್ಷಣವೇ ಅಲ್ಲಿನ ಸಿಬಂದಿ ರಕ್ಷಣೆಗೆ ಧಾವಿಸಿದರು. ಠಾಣೆ ಸಮೀಪವಿದ್ದರಿಂದ ಇಬ್ಬರನ್ನಾದರೂ ಉಳಿಸಿಕೊಳ್ಳಲು ಸಾಧ್ಯವಾಯಿತು. ಘಟನೆ ನಡೆದಾಗ ಕೂಡಲೇ ಪೊಲೀಸರೇ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರು. ಎಲ್ಲ ಮಕ್ಕಳು ಪೊಲೀಸರೊಂದಿಗೆ ಅನ್ಯೋನ್ಯವಾಗಿದ್ದರು. ಪೊಲೀಸ್ ಸಿಬಂದಿ ಪೂರ್ಣವಾಗಿ ನೆರವಾಗಿದ್ದಾರೆ ಎಂದು ಇಂದು ತಿಳಿಸಿದ್ದಾರೆ.
ಅಮ್ಮ ಅಮ್ಮ ಎಂದು ಚೀರಾಡುತ್ತಿದ್ದಳು
ನಾಲ್ವರ ಪೈಕಿ ಹಿರಿಯ ಪುತ್ರಿ ಅಲ್ಕಾ ಎಂಬವಳ ಮುಖ ಮಾತ್ರವೇ ಕಾಣುತ್ತಿತ್ತು. ಅವಳು ಗೋಡೆಯಡಿಯಲ್ಲಿ ಸಿಲುಕಿ ಅಮ್ಮ ಅಮ್ಮ ನೋಯುತ್ತಿದೆ ಕಾಪಾಡು ಎಂದು ಚೀರಾಡುತ್ತಿದ್ದಳು. ಸುಮಾರು 1 ಗಂಟೆಗಳ ಕಾಲ ಅವಳು ಗೋಡೆಯ ಅಡಿಯಲ್ಲಿ ನರಳಾಡಿದ್ದಾಳೆ ಎಂದು ಇಂದು ತಿಳಿಸಿದ್ದಾರೆ.
ಕನಸು ಎಂದುಕೊಂಡೆ!
ಮೈಮೇಲೆ ಕಲ್ಲುಗಳ ರಾಶಿ ಏಕಾಏಕಿ ಬಿದ್ದಿತು. ನಾನು ಕನಸು ಎಂದುಕೊಂಡಿದ್ದೆ. ಬಳಿಕ ಏಳಲು ಸಾಧ್ಯವಾಗಲಿಲ್ಲ. ಕಾಲು ಜೋರಾಗಿ ನೋಯುತ್ತಿತ್ತು. ಆಗ ಗೊತ್ತಾಯಿತು ಗೋಡೆ ಬಿದ್ದಿದೆ ಎಂದು. ಅಮ್ಮನನ್ನು ಕರೆಯುತ್ತಿದ್ದೆ. ಉಳಿದ ಮೂವರು ಮಾತನಾಡುತ್ತಿರಲಿಲ್ಲ. ನನ್ನ ಮೇಲೆ ಇದ್ದ ವಸ್ತುಗಳನ್ನು ತೆಗೆಯಲು ನಾನು ಬೇಡಿಕೊಳ್ಳುತ್ತಿದ್ದೆ. ಸುಮಾರು 1 ಗಂಟೆಗಳ ಕಾಲ ಗೋಡೆಯ ಅಡಿಯಲ್ಲಿ ನನ್ನ ಕಾಲು ಸಿಕ್ಕಿಕೊಂಡಿತ್ತು. ಎಲ್ಲರು ಮಲಗು ಮಲಗು ಎನ್ನುತ್ತಿದ್ದರು. ಮಲಗಲು ಆಗುತ್ತಿರಲಿಲ್ಲ. ತಂದೆ ತಾಯಿ, ಪೊಲೀಸರು ದೇವರಂತೆ ನಮ್ಮಿಬ್ಬರನ್ನು ಕಾಪಾಡಿದರು. ಆದರೆ, ನಮ್ಮ ಇಬ್ಬರು ತಂಗಿಯಂದಿರು ಈಗಿಲ್ಲ ಎಂದು ಬದುಕುಳಿದ 9ನೇ ತರಗತಿಯ ಅಲ್ಕಾ ಕಣ್ಣೀರಿಟ್ಟರು.
ಇಬ್ಬರಿಗೆ ಚಿಕಿತ್ಸೆ ಮುಂದುವರಿಕೆ
ಮೈಮೇಲೆ ಕಲ್ಲುಗಳು ಬಿದ್ದಿತ್ತು. ಎಚ್ಚರವಾದ ಬಳಿಕ ಆಸ್ಪತ್ರೆಯಲ್ಲಿದ್ದೆ ಎಂದು 7ನೇ ತರಗತಿಯಲ್ಲಿ ಓದುತ್ತಿರುವ ಅನುಷ್ಕಾ ತಿಳಿಸಿದ್ದಾಳೆ. ಘಟನೆಯಲ್ಲಿ ಬದುಕುಳಿದ ಇಬ್ಬರು ಪುತ್ರಿಯರಾದ ಅಲ್ಕಾ ಹಾಗೂ ಅನುಷ್ಕಾ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

