ಚೆನ್ನೈ: ಕಾಲಿವುಡ್ ರವಿ ಮೋಹನ್(Ravi Mohan) ಅವರ ಕೌಟುಂಬಿಕ ವಿಚಾರ ಕಳೆದ ಕೆಲ ಸಮಯದಿಂದ ಸುದ್ದಿಯಲ್ಲಿದೆ. ಬಹಿರಂಗವಾಗಿಯೇ ಅವರ ದಾಂಪತ್ಯ ಜೀವನದಲ್ಲಿನ ವಿಚಾರಗಳು ಸುದ್ದಿಯಾಗುತ್ತಿದೆ.
ರವಿ ಮೋಹನ್ - ಆರತಿ (Aarti Ravi) ವಿಚ್ಛೇದನಕ್ಕೆ ಮುಂದಾಗಿದ್ದು, ಸದ್ಯ ಈ ಪ್ರಕರಣ ಕೋರ್ಟ್‌ನಲ್ಲಿದೆ.
ಇತ್ತೀಚೆಗಷ್ಟೇ ರವಿ ಮೋಹನ್ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ನೇಹಿತೆ, ಗಾಯಕಿ ಕೆನಿಶಾ ಫ್ರಾನ್ಸಿಸ್ (Keneeshaa Francis) ಜತೆಗಿನ ಅವರ ಸ್ನೇಹದ ಸಂಬಂಧದ ಕುರಿತು ಮಾತನಾಡಿದ್ದರು.
ಆರತಿ - ರವಿ ಮೋಹನ್ ನಡುವಿನ ಸಂಬಂಧ ಹದಗೆಡಲು ಕೆನಿಶಾ ಫ್ರಾನ್ಸಿಸ್ ಅವರೇ ಕಾರಣವೆನ್ನುವ ಆರೋಪಗಳ ನಡುವೆಯೇ ನಟ "ನಾನು ವಿಚ್ಛೇದನ ಪಡೆಯುವವರೆಗೂ ನನ್ನ ಸಿನಿಮಾಗಳು ತೆರೆ ಮೇಲೆ ಬಿಡುಗಡೆಯಾಗುವುದಿಲ್ಲ. ನಾನು ಇನ್ನು ಮುಂದೆ ನಟಿಸಲು ಸಾಧ್ಯವಿಲ್ಲ. ನನಗೆ ಆದ ಅವಮಾನವನ್ನು ಸಹಿಸಲು ಸಾಧ್ಯವಾಗಲಿಲ್ಲ. ನೀವು ನನ್ನನ್ನು ಕೆರಳಿಸಲು ಬಯಸಿದರೆ, ಪ್ರಯತ್ನಿಸಿ.. ನಾನು 23 ವರ್ಷ ಕೆಲಸ ಮಾಡಿದ್ದೇನೆ. ನನ್ನ 95% ಚಿತ್ರಗಳು ಯಶಸ್ವಿಯಾಗಿವೆ." ಎಂದು ಹೇಳಿದ್ದರು.
ಇದ್ದಕ್ಕಿದ್ದಂತೆ ರವಿ ಮೋಹನ್ ಇನ್ಮುಂದೆ ಸಿನಿಮಾದಲ್ಲಿ ನಟಿಸಲ್ಲ ಎಂದು ಹೇಳಿದ್ದು, ಅವರ ಅಭಿಮಾನಿಗಳಿಗೆ ಶಾಕ್ ನೀಡಿತ್ತು.
ಆದರೆ ಕೆಲ ಸಮಯದ ನಂತರ ಅವರು ಲೋಕೇಶ್ ಕನಕರಾಜ್ ನಿರ್ಮಾಣದ ʼಬೆಂಜ್ʼ ಚಿತ್ರದಲ್ಲಿ ನಟಿಸುವ ಬಗ್ಗೆ ಸುದ್ದಿ ಹೊರಬಿದ್ದಿತ್ತು.
ಇದೀಗ ʼಸಿನಿಮಾದಲ್ಲಿ ನಟಿಸಲ್ಲʼ ಎಂದು ಹೇಳಿದ್ದು ಯಾಕೆ ಎನ್ನುವುದನ್ನು ರವಿ ಮೋಹನ್ ಕಾರ್ಯಕ್ರಮವೊಂದರಲ್ಲಿ ರಿವೀಲ್ ಮಾಡಿದ್ದಾರೆ.
"ನಾನು ಸ್ವಲ್ಪ ಭಾವುಕನಾಗಿದ್ದೆ, ಆದರೆ ಉದ್ಯಮದ ಎಲ್ಲರೂ ನನ್ನ ಬಳಿಗೆ ಬಂದು, 'ನೀವು ಏನು ಹೇಳಿದರೂ ನಾವು ಸ್ವೀಕರಿಸುತ್ತೇವೆ. ಆದರೆ ನೀವು ಮತ್ತೆ ಸಿನಿಮಾದ ಭಾಗವಾಗಿಲ್ಲ ಎಂದು ಎಂದಿಗೂ ಹೇಳಬಾರದು' ಎಂದು ಹೇಳಿದರು. ನಾನು ಅವರೆಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ," ಎಂದಿದ್ದಾರೆ.
"ನಾನು ಇನ್ನು ಮುಂದೆ ನನ್ನ ಅಭಿಮಾನಿಗಳಿಗೆ ದ್ರೋಹ ಮಾಡುವುದಿಲ್ಲ. ನಾನು ಖಂಡಿತವಾಗಿಯೂ ಹಿಂತಿರುಗುತ್ತೇನೆ. ನಿಮ್ಮ ಸಂತೋಷ, ನಿಮ್ಮ ದಯೆ, ನಿಮ್ಮ ಔದಾರ್ಯ... ನಾನು ನಿಮ್ಮ ʼಪೊನ್ನಿಯಿನ್ ಸೆಲ್ವನ್ʼ ಅಥವಾ ʼಕರತೇ ಬಾಬುʼ ಆಗಿ ಮರಳಲು ಯೋಜಿಸುತ್ತಿದ್ದೇನೆ. ಈ ವಿಶ್ವಾಸವನ್ನು ನನಗೆ ನೀಡಿದ ಎಲ್ಲರಿಗೂ, ನಾನು ಕೃತಜ್ಞತೆಯಿಂದ ತಲೆಬಾಗುತ್ತೇನೆ." ಎಂದಿದ್ದಾರೆ.
ಸಿನಿಮಾದ ವಿಚಾರಕ್ಕೆ ಬಂದರೆ ಸದ್ಯ ಅವರು ʼಬೆಂಜ್ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

