Dailyhunt
ನಾಯಕತ್ವ ಬದಲು, ಸಂಪುಟ ಪುನಾರಚನೆ ಬಗ್ಗೆ ನಾಲ್ವರ ನಿರ್ಧಾರವೇ ಅಂತಿಮ: ಪ್ರಿಯಾಂಕ್ ಖರ್ಗೆ

ನಾಯಕತ್ವ ಬದಲು, ಸಂಪುಟ ಪುನಾರಚನೆ ಬಗ್ಗೆ ನಾಲ್ವರ ನಿರ್ಧಾರವೇ ಅಂತಿಮ: ಪ್ರಿಯಾಂಕ್ ಖರ್ಗೆ

ಬೆಂಗಳೂರು: 'ರಾಜ್ಯದ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಸೇರಿದಂತೆ ಏನೇ ರಾಜಕೀಯ ಬದಲಾವಣೆಗಳಿದ್ದರೂ ಕಾಂಗ್ರೆಸ್‌ನಲ್ಲಿ ನಾಲ್ವರ ನಿರ್ಧಾರವೇ ಅಂತಿಮ' ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, 'ನಾಯಕತ್ವ ಬದಲಾವಣೆ ವಿಚಾರವಾಗಿ ನಾನು ಅಥವಾ ಬೇರೆ ಯಾರೇ ಆಗಲಿ ಏನೇ ಹೇಳಿಕೆ ನೀಡಿದರೂ ಅದು ಅಪ್ರಸ್ತುತ.

ಅದಕ್ಕೆ ಯಾವುದೇ ಮಹತ್ವ ಇರುವುದಿಲ್ಲ' ಎಂದರು.

'ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನಿರ್ಧರಿಸುತ್ತಾರೆ. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೊ ಅದೇ ಅಂತಿಮ' ಎಂದರು.

ಸಿದ್ದರಾಮಯ್ಯ ಅವರೇ 2 ವರ್ಷ ಇರುತ್ತಾರೆ ಎಂಬ ಗೃಹ ಸಚಿವ ಡಾ.ಪರಮೇಶ್ವರ್‌ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಏ. 9ರವರೆಗೂ ಕಾಯುತ್ತಿಲ್ವಲ್ಲಾ ನೀವು? ನೀವು ಕೇಳಿದ್ದಕ್ಕೆ ಸಾಹೇಬ್ರು ಹೇಳಿರುತ್ತಾರಷ್ಟೇ. ನಾನು ಮಾತ್ರವಲ್ಲ. ಈ ವಿಚಾರದಲ್ಲಿ ಬೇರೆ ಯಾರೇ ಹೇಳಿದರೂ ಅದು ಅಪ್ರಸ್ತುತ ಎಂದರು.

ಕೇಂದ್ರ ಸರ್ಕಾರ ಕಾರಣ:
'ಆಟೋ ಚಾಲಕರು, ಸಾಮಾನ್ಯ ಜನರು, ಸಣ್ಣಪುಟ್ಟ ಕಾರ್ಖಾನೆಗಳು ಎಲ್‌ಪಿಜಿ ಸಿಗದೆ ಆತಂಕದಲ್ಲಿದ್ದಾರೆಂದರೆ ಅದಕ್ಕೆ ಕೇಂದ್ರ ಸರ್ಕಾರ ಕಾರಣ. ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ ಹಾಗೂ ಪೂರೈಕೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಬಿಜೆಪಿ ನಾಯಕರು ಸಂಸತ್ತಿನಲ್ಲಿ ಪೆಟ್ರೋಲ್ ಉತ್ಪನ್ನಗಳ ದಾಸ್ತಾನು 75, 100 ದಿನಗಳಿಗೆ ಸಾಕಾಗುವಷ್ಟು ಇದೆಯೆಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಓಡಿ ಹೋಗಿದ್ದಾರೆ' ಎಂದು ಸಚಿವ ಪ್ರಿಯಾಂಕ್‌ ತರಾಟೆಗೆ ತೆಗೆದುಕೊಂಡರು.

'ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲವೂ ಸರಿಯಿದೆ ಎಂದಾದರೆ ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಯಾಕೆ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ? ಕೋವಿಡ್ ಮಾದರಿಯಲ್ಲಿ ಯುದ್ಧ ಪರಿಸ್ಥಿತಿಯನ್ನು ನಿರ್ವಹಣೆ ಮಾಡೋಣವೆಂದು ಏಕೆ ಹೇಳುತ್ತಿದ್ದಾರೆ' ಎಂದು ಪ್ರಶ್ನಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani