ಬೆಂಗಳೂರು: ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ತನಗೆ ಸಮಯದ ಅಭಾವದ ಕಾರಣದಿಂದ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡದಂತೆ ಮನವಿ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಜಮೀರ್ ಅಹಮದ್ ಖಾನ್ ಅವರಿಗೆ ವಿಜಯಪುರ ಜಿಲ್ಲೆಯನ್ನು ವಹಿಸಲಾಗಿತ್ತು.
ಆದರೆ ತಾನು ಹಾಜರಾಗಲು ಸಾಧ್ಯವಾಗದ ಕಾರಣ ವಿನಾಯತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭೆ ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆ ಕಾರಣದಿಂದ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನಿಭಾಯಿಸಲು ಸಮಯದ ಅಭಾವ ಇರುತ್ತದೆ ಎಂದು ಜಮೀರ್ ಹೇಳಿಕೊಂಡಿದ್ದಾರೆ.
ಬದಲಾವಣೆ
ಜಮೀರ್ ನಡೆಯಿಂದ ಇದೀಗ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಬೇಕಾದ ಮಂತ್ರಿಗಳ ಪಟ್ಟಿ ಬದಲಾಗಿದೆ. ಉಡುಪಿಯಲ್ಲಿ ಧ್ವಜಾರೋಹಣ ಮಾಡಬೇಕಾಗಿದ್ದ ಸಚಿವ ಕೆ.ಎನ್.ಬಸವಂತಪ್ಪ ಅವರಿಗೆ ವಿಜಯನಗರ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ ರಿಜ್ಚಾನ್ ಅರ್ಷದ್ ಅವರಿಗೆ ಉಡುಪಿ ಜಿಲ್ಲೆಯ ಜವಾಬ್ದಾರಿ ವಹಿಸಲಾಗಿದೆ.
ಅಶೋಕ್ ಟೀಕೆ
ಜಮೀರ್ ಅಹಮದ್ ಖಾನ್ ಅವರ ನಡೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. "ಸಚಿವ ಜಮೀರ್ ಅಹಮದ್ ಖಾನ್ ದೇಶದ್ರೋಹಿ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?" ಎಂದು ಪ್ರಶ್ನಿಸಿರುವ ಅಶೋಕ್, "ರಾಷ್ಟ್ರಧ್ವಜ ಹಾರಿಸುವುದಕ್ಕೂ ಮನಸ್ಸಿಲ್ಲದಷ್ಟು ದೇಶದ್ರೋಹಿಗಳು ಈ ಕಾಂಗ್ರೆಸ್ ಸರ್ಕಾರದಲ್ಲಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನಿಗೆ ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಪವಿತ್ರ ಕರ್ತವ್ಯಕ್ಕಿಂತ ಪಕ್ಷ ರಾಜಕೀಯವೇ ದೊಡ್ಡದಾಯಿತೇ? ಸಚಿವ ಜಮೀರ್ ಮತ್ತು ಈ ಕಾಂಗ್ರೆಸ್ ಸರ್ಕಾರಕ್ಕೆ ರಾಷ್ಟ್ರದ ಹೆಮ್ಮೆ, ನಮ್ಮ ಕ್ರಾಂತಿಕಾರಿಗಳ ಬಲಿದಾನ ಮತ್ತು ಪವಿತ್ರ ತ್ರಿವರ್ಣ ಧ್ವಜಕ್ಕಿಂತ ಅಧಿಕಾರದ ದಾಹ ಹಾಗೂ ಚುನಾವಣಾ ಲೆಕ್ಕಾಚಾರಗಳೇ ಮೊದಲ ಆದ್ಯತೆಯಾಗಿದೆ" ಎಂದು ಟೀಕೆ ಮಾಡಿದ್ದಾರೆ.

