Dailyhunt Logo
  • Light mode
    Follow system
    Dark mode
    • Play Story
    • App Story
'ನನ್ನನ್ನು ಅಪಹರಿಸಿದ್ದಾರೆ': ಕುಟುಂಬದಿಂದ 5 ಲಕ್ಷ ರೂ. ವಸೂಲಿಗೆ ಯುವಕನಿಂದ ನಾಟಕ

'ನನ್ನನ್ನು ಅಪಹರಿಸಿದ್ದಾರೆ': ಕುಟುಂಬದಿಂದ 5 ಲಕ್ಷ ರೂ. ವಸೂಲಿಗೆ ಯುವಕನಿಂದ ನಾಟಕ

ಪುಣೆ: ಉತ್ತರ ಪ್ರದೇಶದ 19 ವರ್ಷದ ಯುವಕನೊಬ್ಬ ಮಹಾರಾಷ್ಟ್ರದ ಪುಣೆಯಲ್ಲಿ ತನ್ನದೇ ಅಪಹರಣದ ನಾಟಕವಾಡಿ, ಕುಟುಂಬದವರನ್ನು ನಂಬಿಸಲು ತಾನು ಅಳುತ್ತಿರುವ ವೀಡಿಯೊವನ್ನು ಕಳುಹಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕುಟುಂಬದಿಂದ 5 ಲಕ್ಷ ರೂ ಸುಲಿಗೆ ಮಾಡಲು ಈತ ಸಂಚು ರೂಪಿಸಿದ್ದನು.

ಆದರೆ ಪುಣೆ ಪೊಲೀಸರು ಯುವಕನ ಫೋನ್ ಲೊಕೇಶನ್ ಆಧರಿಸಿ ಆತ ಲಾಡ್ಜ್ ಒಂದರಲ್ಲಿರುವುದನ್ನು ಪತ್ತೆ ಹಚ್ಚುವ ಮೂಲಕ ಈ ವಂಚನೆಯನ್ನು ಬಯಲಿಗೆಳೆದಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಯನ್ನು ಉತ್ತರ ಪ್ರದೇಶದ ಬಂದಾ ಜಿಲ್ಲೆಯ ನಿವಾಸಿ ಓಂ ಪ್ರಕಾಶ್ ಗೌರಿಶಂಕರ್ ಎಂದು ಗುರುತಿಸಲಾಗಿದೆ.

ಓಂ ಪ್ರಕಾಶ್ ಕೆಲವು ಸಮಯದ ಹಿಂದೆ ಪುಣೆಗೆ ಬಂದಿದ್ದರೂ ಆತನಿಗೆ ಖಾಯಂ ಕೆಲಸವಿರಲಿಲ್ಲ. ಆರ್ಥಿಕ ಸಂಕಷ್ಟದಲ್ಲಿದ್ದ ಆತ ಪದೇ ಪದೇ ಕುಟುಂಬದಿಂದ ಹಣ ಪಡೆಯುತ್ತಿದ್ದನು. ಹಣಕಾಸಿನ ಸಮಸ್ಯೆ ಬಗೆಹರಿಯದಿದ್ದಾಗ, ತನ್ನದೇ ಅಪಹರಣದ ನಾಟಕವಾಡಿ ದೊಡ್ಡ ಮೊತ್ತದ ಹಣವನ್ನು ಪಡೆಯಲು ನಿರ್ಧರಿಸಿದ್ದನು.

ಇದಕ್ಕಾಗಿ ಉತ್ತರ ಪ್ರದೇಶದಲ್ಲಿರುವ ತನ್ನ ಕುಟುಂಬವನ್ನು ಸಂಪರ್ಕಿಸಿ, ಪುಣೆಯಲ್ಲಿ ತನ್ನನ್ನು ಅಪಹರಿಸಲಾಗಿದೆ ಎಂದು ಹೇಳಿಕೊಂಡಿದ್ದನು. ಕಥೆಯನ್ನು ನೈಜವಾಗಿ ಕಾಣುವಂತೆ ಮಾಡಲು, ತಾನು ಜೋರಾಗಿ ಅಳುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದನು. 5 ಲಕ್ಷ ಹಣ ನೀಡಿದರೆ ಮಾತ್ರ ಅಪಹರಣಕಾರರು ತನ್ನನ್ನು ಬಿಡುಗಡೆ ಮಾಡುತ್ತಾರೆ ಎಂದು ಆತ ಕುಟುಂಬಕ್ಕೆ ತಿಳಿಸಿದ್ದನು.

ವೀಡಿಯೊ ಮತ್ತು ಸುಲಿಗೆ ಕರೆಯಿಂದ ಗಾಬರಿಗೊಂಡ ಕುಟುಂಬದವರು ಉತ್ತರ ಪ್ರದೇಶ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಉತ್ತರ ಪ್ರದೇಶ ಪೊಲೀಸರು ತಕ್ಷಣವೇ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಲುಪಿದ ತಕ್ಷಣ ಪುಣೆ ಪೊಲೀಸರು ಯುವಕನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದು, ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ರಾತ್ರಿ ಗಸ್ತಿನಲ್ಲಿದ್ದ ಹಿರಿಯ ಅಧಿಕಾರಿಗಳು ಹುಡುಕಾಟದಲ್ಲಿ ಭಾಗಿಯಾಗಿದ್ದರು.

ಉತ್ತರ ಪ್ರದೇಶ ಪೊಲೀಸರು ನೀಡಿದ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಪೊಲೀಸರು ಆತನ ಫೋನ್ ಟ್ರ್ಯಾಕ್ ಮಾಡಲಾರಂಭಿಸಿದ್ದು, ತನಿಖೆಯ ವೇಳೆ ಆತನ ಲೊಕೇಶನ್ ಪುಣೆಯ ಖಡ್ಕಿ ಪ್ರದೇಶದಲ್ಲಿರುವುದು ಕಂಡುಬಂದಿದೆ.

ಲಾಡ್ಜ್‌ನಲ್ಲಿ ಸುರಕ್ಷಿತವಾಗಿ ಪತ್ತೆ
ನಂತರ ಪೊಲೀಸರು ಖಡ್ಕಿಯಲ್ಲಿರುವ ಕ್ರೌನ್ ಪ್ಲಾಜಾ ಲಾಡ್ಜ್ ಮೇಲೆ ದಾಳಿ ನಡೆಸಿದಾಗ, ಕೊಠಡಿಯಲ್ಲಿ ಯಾವುದೇ ಅಪಹರಣಕಾರರು ಇರದೆ, ಬದಲಿಗೆ ಓಂ ಪ್ರಕಾಶ್ ಲಾಡ್ಜ್ ಒಳಗಡೆ ಸುಕ್ಷೇಮವಾಗಿ ಕುಳಿತಿದ್ದುದು ಕಂಡುಬಂದಿದೆ.

ವಿಚಾರಣೆ ವೇಳೆ, ಯಾವುದೇ ಅಪಹರಣ ನಡೆದಿಲ್ಲ ಹಾಗೂ ತನ್ನ ಅಣ್ಣನಿಂದ 5 ಲಕ್ಷ ಹಣ ಪಡೆಯಲು ಸಂಪೂರ್ಣ ಕಥೆಯನ್ನು ಕಟ್ಟಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ದೂರು ನೈಜವಾಗಿ ಕಾಣಲು ಉದ್ದೇಶಪೂರ್ವಕವಾಗಿಯೇ ಅಳುವ ವೀಡಿಯೊವನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani