Dailyhunt Logo
  • Light mode
    Follow system
    Dark mode
    • Play Story
    • App Story
ನೆಚ್ಚಿನ ನಟ ಪವನ್‌ ಕಲ್ಯಾಣ್‌ ಭೇಟಿಯಾಗಿ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆದ ಅಪ್ಟಟ ಅಭಿಮಾನಿ

ನೆಚ್ಚಿನ ನಟ ಪವನ್‌ ಕಲ್ಯಾಣ್‌ ಭೇಟಿಯಾಗಿ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆದ ಅಪ್ಟಟ ಅಭಿಮಾನಿ

ಹೈದರಾಬಾದ್: ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರನ್ನು ಇತ್ತೀಚೆಗಷ್ಟೇ ಭೇಟಿಯಾಗಿದ್ದ ಅವರ 17 ವರ್ಷದ ಕಟ್ಟಾ ಅಭಿಮಾನಿ ಪೊನುಗಂಟಿ ನಿರಂಜನ್, ಅಪರೂಪದ ಆನುವಂಶಿಕ ಕಾಯಿಲೆಯಿಂದಾಗಿ ಮಂಗಳವಾರ (ಜು.7) ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸುದ್ದಿ ಪವನ್ ಕಲ್ಯಾಣ್ ಅವರ ಅಭಿಮಾನಿಗಳಲ್ಲಿ ಮತ್ತು ಜನಸೇನಾ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.

ತೆಲಂಗಾಣದ ವಾರಂಗಲ್ ಜಿಲ್ಲೆಯ ಹನುಮಕೊಂಡ ನಿವಾಸಿಯಾದ ನಿರಂಜನ್, ಕಳೆದ ಕೆಲವು ವರ್ಷಗಳಿಂದ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದರು. ಬಾಲ್ಯದಲ್ಲಿ ನಿರಂಜನ್ ಅವರಿಗೆ ನೃತ್ಯವೆಂದರೆ ತುಂಬಾ ಇಷ್ಟವಾಗಿತ್ತು. ಆದರೆ ಕಾಯಿಲೆ ಉಲ್ಬಣಗೊಂಡಂತೆ ಅವರ ದೈಹಿಕ ಬೆಳವಣಿಗೆ ಕುಂಠಿತಗೊಂಡು, ಕೊನೆಗೆ ಅವರು ಹಾಸಿಗೆ ಹಿಡಿಯುವಂತಾಯಿತು ಎಂದು ಕುಟುಂಬಸ್ಥರು ನೆನೆದಿದ್ದಾರೆ.

ನಿರಂಜನ್ ನಿವಾಸಕ್ಕೆ ಭೇಟಿ ನೀಡಿದ್ದ ಪವನ್ ಕಲ್ಯಾಣ್:‌

ಕಳೆದ ಜೂನ್ ತಿಂಗಳಿನಲ್ಲಿ ನಿರಂಜನ್ ಅವರ ವಿಡಿಯೋ ಒಂದನ್ನು ಪವನ್ ಕಲ್ಯಾಣ್ ನೋಡಿದ್ದರು. ಅದರಲ್ಲಿ ನಿರಂಜನ್ ತಮಗೆ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಬೇಕೆಂಬ ಹಂಬಲವನ್ನು ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ ನಟ, ತಾವೇ ಖುದ್ದಾಗಿ ಹನುಮಕೊಂಡದಲ್ಲಿರುವ ನಿರಂಜನ್ ಮನೆಗೆ ತೆರಳಿ ಭೇಟಿಯಾಗಿದ್ದರು.

"ಅಪರೂಪದ ಕಾಯಿಲೆಯ ವಿರುದ್ಧ ಧೈರ್ಯದಿಂದ ಹೋರಾಡುತ್ತಿರುವ ಹನುಮಕೊಂಡದ ನಿರಂಜನ್ ಅವರ ವಿಡಿಯೋವನ್ನು ನಾನು ಕೆಲವು ದಿನಗಳ ಹಿಂದೆ ನೋಡಿದ್ದೆ. ಅವರು ನನ್ನನ್ನು ಭೇಟಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದರು. ಇಂದು ಅವರ ಮನೆಗೆ ಭೇಟಿ ನೀಡಿ, ಅವರ ಕುಟುಂಬದವರೊಂದಿಗೆ ಸಮಯ ಕಳೆಯುವ ಸೌಭಾಗ್ಯ ನನಗೆ ಸಿಕ್ಕಿತು," ಎಂದು ಪವನ್ ಕಲ್ಯಾಣ್ ಅಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದರು.

ಅಲ್ಲದೆ, ಸಂಕಷ್ಟದ ಸಮಯದಲ್ಲೂ ಆ ಯುವ ಅಭಿಮಾನಿ ತೋರಿದ "ಧೈರ್ಯ, ಚೇತರಿಸಿಕೊಳ್ಳುವ ಶಕ್ತಿ ಮತ್ತು ಅಚಲವಾದ ಉತ್ಸಾಹ" ತಮಗೆ ತೀವ್ರ ಸ್ಫೂರ್ತಿ ನೀಡಿದೆ ಎಂದು ಪವನ್ ಹೇಳಿದ್ದರು.

ಭೇಟಿಯ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರು ನಿರಂಜನ್ ಅವರ ಕೈಗೆ ಮುತ್ತಿಟ್ಟು, ತಿರುಪತಿಯಿಂದ ತಂದಿದ್ದ ವಿಶೇಷ ಪ್ರಸಾದ ಮತ್ತು ರೇಷ್ಮೆ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿದ್ದರು.

ಅಭಿಮಾನಿಯ ಮತ್ತೊಂದು ಆಸೆ ಈಡೇರಿಸಿದ್ದ ನಟ

ನಿರಂಜನ್‌ಗೆ ಶ್ವಾನಗಳೆಂದರೆ (ನಾಯಿಗಳು) ತುಂಬಾ ಇಷ್ಟ ಎಂಬ ವಿಷಯ ತಿಳಿದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಕೆಲವೇ ಗಂಟೆಗಳಲ್ಲಿ ನಿರಂಜನ್‌ಗೆ ಒಂದು ಮುದ್ದಾದ ನಾಯಿಮರಿಯನ್ನು ಉಡುಗೊರೆಯಾಗಿ ನೀಡುವ ವ್ಯವಸ್ಥೆ ಮಾಡಿದ್ದರು. ಇದರೊಂದಿಗೆ ಆರ್ಥಿಕ ಸಹಾಯವನ್ನೂ ಹಸ್ತಾಂತರಿಸಿದ್ದರು.

ಆ ಭೇಟಿಯ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ತಮ್ಮ ಮುಂಬರುವ ಚಿತ್ರ 'ಒಜಿ 2' (OG 2) ಚಿತ್ರೀಕರಣ ಆರಂಭವಾದರೆ, ನಿರಂಜನ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸುವುದಾಗಿ ಮತ್ತು ಇಬ್ಬರೂ ಒಟ್ಟಿಗೆ ಸಿನಿಮಾ ನೋಡುವುದಾಗಿ ಪವನ್ ಕಲ್ಯಾಣ್ ಭಾವುಕ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರುವ ಮುನ್ನವೇ ನಿರಂಜನ್ ಇಹಲೋಕ ತ್ಯಜಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani