Dailyhunt Logo
  • Light mode
    Follow system
    Dark mode
    • Play Story
    • App Story
ನೆನಪಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವುದು: ಡಿಮೆನ್ಶಿಯಾವನ್ನು ಅರ್ಥಮಾಡಿಕೊಳ್ಳೋಣ

ನೆನಪಿಗಿಂತ ಹೆಚ್ಚಿನದನ್ನು ಕಳೆದುಕೊಳ್ಳುವುದು: ಡಿಮೆನ್ಶಿಯಾವನ್ನು ಅರ್ಥಮಾಡಿಕೊಳ್ಳೋಣ

ಬೀಗದ ಕೀಲಿಯನ್ನು ಎಲ್ಲಿ ಇಟ್ಟಿದ್ದೇವೆ ಎಂಬುದನ್ನು ಮರೆತುಬಿಡುವುದಕ್ಕೂ ಕೀಲಿಯನ್ನು ಯಾವುದಕ್ಕಾಗಿ ಬಳಸುತ್ತೇವೆ ಎಂಬುದನ್ನೇ ಮರೆತುಬಿಡುವುದಕ್ಕೂ ನಡುವೆ ಒಂದು ಗೆರೆಯಿದೆ. ಬಹುತೇಕ ಕುಟುಂಬಗಳು ಆ ಗೆರೆಯನ್ನು ಅರಿವಿಲ್ಲದೆ ದಾಟಿಬಿಡುತ್ತವೆ. ಆರಂಭದಲ್ಲಿ ನಿಧಾನವಾಗಿ ಕಾಣಿಸಿಕೊಳ್ಳುವ ಬದಲಾವಣೆಗಳನ್ನು "ವಯಸ್ಸಾದ ಮೇಲೆ ಇದೆಲ್ಲ ಸಹಜ' ಎಂದುಕೊಳ್ಳುತ್ತಾರೆ.

ಆದರೆ ಒಂದು ದಿನ ಜನ್ಮದಿನವೇ ನೆನಪಾಗದೆ ಹೋಗಬಹುದು; ಉರಿಯುತ್ತಿರುವ ಒಲೆಯನ್ನು ಆರಿಸಲು ಮರೆತುಬಿಡಬಹುದು; 40 ವರ್ಷಗಳಿಂದ ನಡೆದುಹೋಗುತ್ತಿದ್ದ ಪರಿಚಿತ ರಸ್ತೆಯಲ್ಲೇ ದಾರಿ ತಪ್ಪಬಹುದು. ಆ ಗೆರೆಯ ಹೆಸರೇ "ಡಿಮೆನ್ಶಿಯಾ'. ಅದು ಎಲ್ಲಿ ಆರಂಭವಾಗುತ್ತದೆ ಮತ್ತು ಎಷ್ಟು ವರ್ಷಗಳ ಮೊದಲೇ ರೂಪುಗೊಳ್ಳಲು ಆರಂಭವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೆ ನಮ್ಮ ಜೀವನದಲ್ಲಿರುವ ಹಿರಿಯರಿಗಾಗಿ ನಾವು ಮಾಡಬಹುದಾದ ಅತ್ಯಂತ ಉಪಯುಕ್ತ ಕೆಲಸಗಳಲ್ಲಿ ಒಂದು.

ನಮ್ಮ ಗಮನಕ್ಕೆ ಬಾರದೆಯೇ ಅಪಾರ ಕೆಲಸ ಮಾಡುವ ಮೆದುಳು

ನಮ್ಮ ಮೆದುಳು ನಮ್ಮ ಗಮನಕ್ಕೆ ಬಾರದೆಯೇ ಅಸಂಖ್ಯಾತ ಕಾರ್ಯಗಳನ್ನು ನಿರ್ವಹಿಸುತ್ತಿರುತ್ತದೆ - ನಾವು ನೋಡಿದ್ದನ್ನು, ಕೇಳಿದ್ದನ್ನು ದಾಖಲಿಸುವುದು, ನೆನಪುಗಳನ್ನು ಸಂಗ್ರಹಿಸುವುದು, ಬೇಕಾದ ಕ್ಷಣದಲ್ಲಿ ಸರಿಯಾದ ಪದವನ್ನು ನೆನಪಿಗೆ ತರುವುದು, ಸಾಮಾಜಿಕ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳುವುದು, ಮನೆಗೆ ದಾರಿ ಕಂಡುಕೊಳ್ಳುವುದು, ಯೋಜನೆ ರೂಪಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು. ಇವೆಲ್ಲವೂ ಬುದ್ಧಿಶಕ್ತಿಯ ಪ್ರತ್ಯೇಕ ವಲಯಗಳು. ಒಟ್ಟಾಗಿ ಇವು ಸ್ವತಂತ್ರವಾಗಿ ಬದುಕಲು ಮತ್ತು ಸುತ್ತಮುತ್ತಲಿನವರೊಂದಿಗೆ ಸಂಪರ್ಕದಲ್ಲಿರಲು ನೆರವಾಗುತ್ತವೆ.

ಒಂದೇ ಕಾಯಿಲೆಯಲ್ಲ - ಹಲವು ಕಾಯಿಲೆಗಳ ಸಮೂಹ

ಡಿಮೆನ್ಶಿಯಾ ಒಂದು ನಿರಂತರವಾಗಿ ಸಾಗುವ ಪ್ರಕ್ರಿಯೆ (continuum). ಮೊದಲ ಸ್ಪಷ್ಟ ಲಕ್ಷಣ ಕಾಣಿಸುವುದಕ್ಕಿಂತ ದಶಕಗಳ ಮುಂಚೆಯೇ ಮೆದುಳಿನಲ್ಲಿ ಬದಲಾವಣೆಗಳು ಆರಂಭವಾಗಬಹುದು. ಮೊದಲು ಹೊರಗೆ ಗೋಚರಿಸದ ಪೂರ್ವಕ್ಲಿನಿಕಲ್‌ (preclinical) ಹಂತ; ಅನಂತರ ಸೌಮ್ಯ ಅರಿವಿನ ಕುಂದುವಿಕೆ (Mild Cognitive Impairment -MCI) - ಪರೀಕ್ಷೆಯಲ್ಲಿ ಬದಲಾವಣೆ ಅಳೆಯಬಹುದಾದರೂ ದಿನನಿತ್ಯದ ಜೀವನ ಮತ್ತು ಸ್ವಾವಲಂಬನೆ ಬಹುತೇಕ ಉಳಿದಿರುತ್ತದೆ; ಅನಂತರ ಡಿಮೆನ್ಶಿಯಾ. ಸೌಮ್ಯ ಅರಿವಿನ ಕುಂದುವಿಕೆ (MCI) ಇರುವ ಪ್ರತಿಯೊಬ್ಬರಿಗೂ ಡಿಮೆನ್ಶಿಯಾ ಉಂಟಾಗುವುದಿಲ್ಲ; ಆದರೂ ಮೌಲ್ಯಮಾಪನ ಮತ್ತು ನಿಯಮಿತ ಅನುಸರಣೆ ಅಗತ್ಯ.

ಬುದ್ಧಿಶಕ್ತಿಯ ವಲಯಗಳಲ್ಲಿ ಹಲವು ವಲಯಗಳು ಒಟ್ಟಿಗೆ ಕುಂಠಿತವಾಗತೊಡಗಿದಾಗ ಡಿಮೆನ್ಶಿಯಾ ಕಾಣಿಸಿಕೊಳ್ಳುತ್ತದೆ. ಸ್ಮರಣಶಕ್ತಿ ಮತ್ತು ಇತರ ಯೋಚನಾ ಸಾಮರ್ಥ್ಯಗಳ ಮೇಲೆ ನಿಧಾನವಾಗಿ ಎಷ್ಟು ಪರಿಣಾಮ ಬೀರುತ್ತದೆಂದರೆ, ಅದು ದೈನಂದಿನ ಜೀವನದಲ್ಲಿ ಅಡಚಣೆ ಉಂಟುಮಾಡುತ್ತದೆ. ಮನಃಸ್ಥಿತಿ, ವರ್ತನೆ, ಆಸಕ್ತಿ ಅಥವಾ ವ್ಯಕ್ತಿತ್ವದಲ್ಲಿನ ಬದಲಾವಣೆಗಳು ನೆನಪಿನ ಸಮಸ್ಯೆಗಳ ಜತೆಗೆ ಕಾಣಿಸಿಕೊಳ್ಳಬಹುದು; ಕೆಲವೊಮ್ಮೆ ಅವಕ್ಕಿಂತ ಮೊದಲೇ ಆರಂಭವಾಗಬಹುದು. ಮನೆಯವರಿಗೆ ಏನೋ ಸರಿಯಿಲ್ಲ ಎಂದು ತಿಳಿಯುವಷ್ಟರಲ್ಲಿ, ಕಾಯಿಲೆ ಹಲವು ವರ್ಷಗಳಿಂದ ಸದ್ದಿಲ್ಲದೆ ಮುಂದುವರಿದಿರಬಹುದು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2021ರಲ್ಲಿ ಜಗತ್ತಿನಾದ್ಯಂತ ಸುಮಾರು 5.7 ಕೋಟಿ ಜನರು ಡಿಮೆನ್ಶಿಯಾದೊಂದಿಗೆ ಬದುಕುತ್ತಿದ್ದರು; ಪ್ರತಿವರ್ಷ ಸುಮಾರು ಒಂದು ಕೋಟಿ ಹೊಸ ಪ್ರಕರಣಗಳು ಕಂಡುಬರುತ್ತವೆ. ಅಲ್ಜೈಮರ್ಸ್‌ ಕಾಯಿಲೆ ಅತ್ಯಂತ ಸಾಮಾನ್ಯ ರೂಪ. ಆದರೆ 'ಡಿಮೆನ್ಶಿಯಾ' ಎನ್ನುವುದು ಹಲವು ವಿಭಿನ್ನ ಸ್ಥಿತಿಗಳನ್ನು ಒಳಗೊಂಡಿರುವ ಒಂದು ವಿಶಾಲ ಪದ - ರಕ್ತನಾಳ ಸಂಬಂಧಿ ಡಿಮೆನ್ಶಿಯಾ, ಲೂಯಿ ಬಾಡಿ ಡಿಮೆನ್ಶಿಯಾ, ಫ್ರಂಟೋಟೆಂಪೋರಲ್‌ ಡಿಮೆನ್ಶಿಯಾ ಮತ್ತಿತರ. ಪ್ರತಿಯೊಂದಕ್ಕೂ ತನ್ನದೇ ಆದ ಆರಂಭಿಕ ವಯಸ್ಸು ಮತ್ತು ಲಕ್ಷಣಗಳ ಸ್ವರೂಪ ಇದ್ದರೂ, ಕೊನೆಗೆ ಅವಲಂಬಿತ ಜೀವನದತ್ತ ಕರೆದೊಯ್ಯಬಹುದು.

ಡಿಮೆನ್ಶಿಯಾ ಹೇಗೆ ಕಾಣಿಸಿಕೊಳ್ಳುತ್ತದೆ?

ಡಿಮೆನ್ಶಿಯಾ ಸಾಮಾನ್ಯವಾಗಿ ಒಂದೇ ಸಮನೆ ಪ್ರತ್ಯಕ್ಷವಾಗುವುದಿಲ್ಲ.; ಎಲ್ಲರಲ್ಲೂ ಒಂದೇ ರೀತಿಯೂ ಕಾಣಿಸುವುದಿಲ್ಲ. ಆರಂಭದಲ್ಲಿ ಅಷ್ಟಾಗಿ ಗಮನ ಸೆಳೆಯದ ಸಂಗತಿಗಳಿಂದ ಆರಂಭವಾಗಬಹುದು - ಒಂದು ವಸ್ತುವನ್ನು ಎಲ್ಲೋ ಇಟ್ಟು ಅದನ್ನು ಇಟ್ಟಿದ್ದೇ ಮರೆತುಹೋಗುವುದು, ಈಗಾಗಲೇ ಉತ್ತರಿಸಿದ ಪ್ರಶ್ನೆಯನ್ನು ಮತ್ತೆ ಕೇಳುವುದು; ಹೊಸ ವಿಷಯ ಕಲಿಯಲು ಕಷ್ಟಪಡುವುದು.

ಕ್ರಮೇಣ ಇದು ದೈನಂದಿನ ಬದುಕಿನ ಸಂಕೀರ್ಣ ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ: ಔಷಧ ತೆಗೆದುಕೊಳ್ಳಲು ಮರೆತುಬಿಡುವುದು, ಈಗಾಗಲೇ ಉಪ್ಪು ಹಾಕಿದ ಅಡುಗೆಗೆ ಮತ್ತೆ ಉಪ್ಪು ಸೇರಿಸುವುದು, ವಾಹನ ಚಲಾಯಿಸುವಾಗ ಪರಿಚಿತ ದಾರಿಯಲ್ಲಿ ವಾಹನ ಚಲಾಯಿಸುವಾಗ ದಾರಿ ತಪ್ಪುವುದು, ಇತ್ತೀಚೆಗಿನ ಮಾತುಕತೆಗಳನ್ನು ಪದೇಪದೆ ಮರೆತುಬಿಡುವುದು, ಹಣಕಾಸು ವ್ಯವಹಾರಗಳಲ್ಲಿ ಕಷ್ಟಪಡುವುದು, ಪರಿಚಿತ ಕೆಲಸಗಳನ್ನು ಮಾಡಲಾಗದಿರುವುದು, ನಿರ್ಧಾರ ಶಕ್ತಿ, ಭಾಷೆ, ವ್ಯಕ್ತಿತ್ವ ಅಥವಾ ವರ್ತನೆಯಲ್ಲಿ ಎದ್ದುಕಾಣುವ ಬದಲಾವಣೆಗಳು - ಉದಾಹರಣೆಗೆ ಸಿಡುಕುತನ, ಖನ್ನ ಮನಸ್ಥಿತಿ ಅಥವಾ ಕೆಲವೊಮ್ಮೆ ಭ್ರಮೆಗಳು.

ಮುಂದೆ ಸರಿಯಾದ ಉಡುಪು ಧರಿಸುವುದು, ಆಪ್ತರನ್ನು ಗುರುತಿಸುವುದು ಅಥವಾ ಕನ್ನಡಿಯಲ್ಲಿರುವ ತನ್ನ ಪ್ರತಿಬಿಂಬವನ್ನೇ ಗುರುತಿಸುವುದು ಕೂಡ ಕಷ್ಟವಾಗಬಹುದು. ನಿದ್ರೆಯ ಸಮಸ್ಯೆ ಆರಂಭದಲ್ಲೇ ಕಾಣಿಸಿಕೊಳ್ಳುವುದು ಸಾಮಾನ್ಯ; ಕೆಲವರಲ್ಲಿ ಹಗಲು-ರಾತ್ರಿ ಸಂಪೂರ್ಣ ಅದಲು ಬದಲಾಗಬಹುದು ಮತ್ತು ರಾತ್ರಿ ಅಲೆದಾಡಬಹುದು. ಅಂತಿಮ ಹಂತದಲ್ಲಿ ವ್ಯಕ್ತಿ ಹಾಸಿಗೆ ಹಿಡಿಯಬಹುದು, ಮೂತ್ರ ಅಥವಾ ಮಲ ನಿಯಂತ್ರಣ ಕಳೆದುಕೊಳ್ಳಬಹುದು ಮತ್ತು ದಿನದ ಇಪ್ಪತ್ತನಾಲ್ಕು ಗಂಟೆಯ ಆರೈಕೆಗೆ ಸಂಪೂರ್ಣ ಅವಲಂಬಿತರಾಗಬಹುದು.

ವಯೋಸಹಜ ಮರೆವು ಮತ್ತು ಡಿಮೆನ್ಶಿಯಾದ ನಡುವಿನ ಅಂತರವೇನು?

ವಯಸ್ಸಾದಂತೆ ಮಾಹಿತಿಯನ್ನು ಗ್ರಹಿಸುವ ವೇಗ ಸ್ವಲ್ಪ ಕಡಿಮೆಯಾಗಬಹುದು, ಅಪರಿಚಿತ ವಿಷಯ ಕಲಿಯುವುದು ಕಷ್ಟವಾಗಬಹುದು, ಕೀಲಿಯನ್ನು ಎಲ್ಲಿ ಇಟ್ಟಿದ್ದೇವೆ ಎಂದು ಮರೆತಿರುವುದು ಅಥವಾ ಹೆಸರೊಂದು ನೆನಪಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದುಂಟು. ಸಾಮಾನ್ಯವಾಗಿ ಆ ಮಾಹಿತಿ ಸ್ವಲ್ಪ ಸಮಯದ ನಂತರ ನೆನಪಿಗೆ ಬರುತ್ತದೆ. ಆದರೆ ಡಿಮೆನ್ಶಿಯಾದ ಬದಲಾವಣೆಗಳು ಹೆಚ್ಚು ನಿರಂತರವಾಗಿರುತ್ತವೆ, ಕ್ರಮೇಣ ಹೆಚ್ಚುತ್ತವೆ ಮತ್ತು ಪರಿಚಿತ ದೈನಂದಿನ ಕೆಲಸಗಳನ್ನೇ ಅಸ್ತವ್ಯಸ್ತಗೊಳಿಸುತ್ತವೆ. ಸಮಾಧಾನಕರ ಸಂಗತಿಯೆಂದರೆ, ವಯಸ್ಸಾದ ಪ್ರತಿಯೊಬ್ಬರ ಅರಿವಿನ ಸಾಮರ್ಥ್ಯವೂ ಅನಿವಾರ್ಯವಾಗಿ ಕುಗ್ಗಬೇಕೆಂದಿಲ್ಲ. "ಸೂಪರ್‌ -ಏಜರ್ಸ್‌' ಎಂದು ಕರೆಯಲಾಗುವ ಕೆಲವು ಹಿರಿಯರು ಎಂಬತ್ತರ ವಯಸ್ಸಿನಲ್ಲಿಯೂ ತಮಗಿಂತ ಬಹಳ ಕಿರಿಯ

ವರಂತೆಯೇ ಚುರುಕಾದ ಅರಿವಿನ ಸಾಮರ್ಥ್ಯ ಉಳಿಸಿಕೊಂಡಿರುತ್ತಾರೆ. ಇವರ ವಿಶೇಷತೆಗೆ ಅದೃಷ್ಟವೊಂದೇ ಕಾರಣವಲ್ಲ; ಜೀವನಪೂರ್ತಿ ಮೆದುಳನ್ನು ಎಷ್ಟು ಸಕ್ರಿಯವಾಗಿ ಬಳಸಿದ್ದಾರೆ ಎಂಬುದೂ ಮುಖ್ಯ.

ಅಪಾಯವನ್ನು ಹೆಚ್ಚಿಸುವ ಅಂಶಗಳು

ಡಿಮೆನ್ಶಿಯಾ ಅಪಾಯದ ಸುಮಾರು ಅರ್ಧದಷ್ಟು ಭಾಗವನ್ನು ಜೀವನಶೈಲಿ ಮತ್ತು ಆರೋಗ್ಯದ ಸೂಕ್ತ ನಿರ್ವಹಣೆಯಿಂದ ಬದಲಾಯಿಸಬಹುದು. ಬಾಲ್ಯ ಅಥವಾ ಯೌವನದಲ್ಲಿ ಕಡಿಮೆ ಶಿಕ್ಷಣ, ಶ್ರವಣದೋಷ, ದೃಷ್ಟಿದೋಷ, ಚಿಕಿತ್ಸೆ ಪಡೆಯದ ಖನ್ನತೆ, ತಲೆಗೆ ಪೆಟ್ಟು, ದೈಹಿಕ ನಿಷ್ಕ್ರಿಯತೆ, ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ, ಬೊಜ್ಜು, ಸಾಮಾಜಿಕ ಒಂಟಿತನ ಮತ್ತು ವಾಯುಮಾಲಿನ್ಯ ಕೂಡ ಡಿಮೆನ್ಶಿಯಾ ಅಪಾಯವನ್ನು ಹೆಚ್ಚಿಸುತ್ತವೆ. ವಂಶವಾಹಿ ಅಂಶಗಳು ಮತ್ತು ವಯಸ್ಸಿನಂತಹ ಕೆಲವು ಕಾರಣಗಳನ್ನು ಮಾತ್ರ ನಾವು ಬದಲಾಯಿಸಲು ಸಾಧ್ಯವಿಲ್ಲ.

ಅಪಾಯ ತಪ್ಪಿಸುವುದರ ಜತೆಗೆ ಮೆದುಳಿನ ಸಾಮರ್ಥ್ಯ ಸಂಗ್ರಹ (cognitive reserve) ಬೆಳೆಸೋಣ

ಮೆದುಳಿನಲ್ಲಿ ವೃದ್ಧಾಪ್ಯದವರೆಗೂ ಹೊಸ ನರಕೋಶಗಳು ರೂಪುಗೊಳ್ಳುತ್ತವೆ ಎಂಬುದು ಆಶಾದಾಯಕ ವೈಜ್ಞಾನಿಕ ಸಂಗತಿ. ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಈ ನರಕೋಶಗಳ ಸಂರಕ್ಷಣ ಪ್ರಕ್ರಿಯೆ ಬೆಳೆದುಬರಬಹುದು ಅಥವಾ ಕುಂಠಿತವಾಗಬಹುದು. ಹೊಸ ಭಾಷೆ, ಸಂಗೀತ ವಾದ್ಯ, ಚದುರಂಗ ಅಥವಾ ಪದಬಂಧದಂತಹ ಚಟುವಟಿಕೆಯಲ್ಲಿ ತೊಡಗುವುದು, ಹೊಸದೊಂದು ವಿಷಯ ಕಲಿಯುವುದು "ಅರಿವಿನ ಸಾಮರ್ಥ್ಯ ಸಂಗ್ರಹ'ವನ್ನು (cognitive reserve) ಬೆಳೆಸುತ್ತದೆ. ತರಕಾರಿ, ಹಣ್ಣು, ಬೀಜಗಳು ಮತ್ತು ಆರೋಗ್ಯಕರ ಕೊಬ್ಬು ಹೆಚ್ಚಿರುವ "MIND' ಆಹಾರ ಪದ್ಧತಿ; ಶಕ್ತಿ ಮತ್ತು ಸಮತೋಲನದ ವ್ಯಾಯಾಮಗಳನ್ನು ಒಳಗೊಂಡ ನಿಯಮಿತ ದೈಹಿಕ ಚಟುವಟಿಕೆ; ಆತ್ಮೀಯ ಸಾಮಾಜಿಕ ಸಂಪರ್ಕ; ಉತ್ತಮ ನಿದ್ರೆ; ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ಕಟ್ಟುನಿಟ್ಟಿನ ನಿಯಂತ್ರಣ; ಶ್ರವಣ ಮತ್ತು ದೃಷ್ಟಿದೋಷದ ಸರಿಪಡಿಸುವಿಕೆ - ಇವೆಲ್ಲವೂ ಮೆದುಳನ್ನು ರಕ್ಷಿಸಲು ನೆರವಾಗುತ್ತವೆ.

ಆರಂಭಿಕ ಪರೀಕ್ಷೆ ಏಕೆ ಮುಖ್ಯ?

ಸಮರ್ಪಕ ಮೌಲ್ಯಮಾಪನದಲ್ಲಿ ವ್ಯಕ್ತಿ ಮತ್ತು ಕುಟುಂಬದವರಿಂದ ವಿವರವಾದ ಮಾಹಿತಿ, ಬುದ್ಧಿಶಕ್ತಿ ಹಾಗೂ ದೈನಂದಿನ ಕಾರ್ಯಸಾಮರ್ಥ್ಯದ ಪರೀಕ್ಷೆ, ಬಳಸುತ್ತಿರುವ ಔಷಧಗಳ ಪರಿಶೀಲನೆ, ಅಪಾಯಕಾರಕ ಅಂಶಗಳ ಮೌಲ್ಯಮಾಪನ, ದೈಹಿಕ ಮತ್ತು ನರಮಂಡಲ ಪರೀಕ್ಷೆ ಹಾಗೂ ಅಗತ್ಯಕ್ಕೆ ತಕ್ಕ ರಕ್ತಪರೀಕ್ಷೆ ಅಥವಾ ಮೆದುಳಿನ ಸ್ಕ್ಯಾನ್‌ ಸೇರಿರುತ್ತವೆ. ಕೆಲವರಲ್ಲಿ ಡಿಮೆನ್ಶಿಯಾದಂತೆಯೇ ಕಾಣಿಸುವ ಸಮಸ್ಯೆಗಳು ವಿಟಮಿನ್‌ ಕೊರತೆ, ಥೈರಾಯ್ಡ ತೊಂದರೆ ಅಥವಾ ಖನ್ನತೆಯಿಂದ ಉಂಟಾಗಿರಬಹುದು. ಇವುಗಳನ್ನು ಬೇಗ ಗುರುತಿಸಿದರೆ ಚಿಕಿತ್ಸೆ ನೀಡಲು ಸಾಧ್ಯವಾಗುವುದರಿಂದ ಈ ಮೌಲ್ಯಮಾಪನ ಬಹಳ ಮುಖ್ಯ.

ಡಿಮೆನ್ಶಿಯಾವನ್ನು ಸಂಪೂರ್ಣ ಗುಣಪಡಿಸುವ ಚಿಕಿತ್ಸೆ ಸದ್ಯಕ್ಕೆ ಇಲ್ಲದಿದ್ದರೂ ಬೇಗ ಗುರುತಿಸಿದರೆ, ಸಾಕಷ್ಟು ನೆರವು ನೀಡಬಹುದು. ಆರಂಭಿಕ ಹಂತದಲ್ಲೇ MIND ಆಹಾರ ಪದ್ಧತಿ, ನಿಯಮಿತ ದೈಹಿಕ ಚಟುವಟಿಕೆ, ಮೆದುಳಿಗೆ ಚುರುಕು ನೀಡುವ ಅಭ್ಯಾಸಗಳು, ಅರ್ಥಪೂರ್ಣ ದಿನಚರಿ, ಸಾಮಾಜಿಕ ಒಡನಾಟ, ಮತ್ತು ಇತರ ಕಾಯಿಲೆಗಳ ಸಮರ್ಪಕ ನಿರ್ವಹಣೆ ಒಳಗೊಂಡ ಬಹುಮುಖ ಕ್ರಮಗಳನ್ನು ಪಾಲಿಸಿದರೆ ವ್ಯಕ್ತಿಯ ದೈನಂದಿನ ಕಾರ್ಯಸಾಮರ್ಥ್ಯ ಮತ್ತು ಜೀವನಮಟ್ಟವನ್ನು ಕಾಪಾಡಲು ನೆರವಾಗಬಹುದು.

ಹೊಸ ಆಂಟಿ-ಅಮಿಲಾಯ್ಡ್ ಔಷಧಗಳು, ಆರಂಭಿಕ ಹಂತದ ಅಲ್ಜೈಮರ್ಸ್‌ ಕಾಯಿಲೆ ಇರುವ ಎಚ್ಚರಿಕೆಯಿಂದ ಆಯ್ದ ಕೆಲವರಲ್ಲಿ ಮಾತ್ರ, ಕುಂದುವಿಕೆಯ ವೇಗವನ್ನು ಸ್ವಲ್ಪ ನಿಧಾನಗೊಳಿಸಬಹುದು. ಇವುಗಳಿಗೆ ತಜ್ಞರ ಮೌಲ್ಯಮಾಪನ ಮತ್ತು ನಿರಂತರ ಮೇಲ್ವಿಚಾರಣೆ ಅಗತ್ಯ. ಮಹತ್ವದ ಅಡ್ಡಪರಿಣಾಮಗಳ ಅಪಾಯವಿದೆ; ದುಬಾರಿಯೂ ಆಗಿವೆ. ಎಲ್ಲೆಡೆ ಅಲಭ್ಯ ಮತ್ತು ಪ್ರತಿಯೊಬ್ಬರಿಗೂ ಸೂಕ್ತವೂ ಅಲ್ಲ.

ಆರಂಭಿಕ ರೋಗನಿರ್ಣಯದಿಂದ ಚಿಕಿತ್ಸೆ, ಹಣಕಾಸು, ಸುರಕ್ಷೆ ಮತ್ತು ಭವಿಷ್ಯದ ಆರೈಕೆಯ ಕುರಿತ ನಿರ್ಧಾರಗಳಲ್ಲಿ ವ್ಯಕ್ತಿಯ ಅಭಿಪ್ರಾಯಕ್ಕೂ ಅವಕಾಶ ಸಿಗುತ್ತದೆ. ಹಠ ಅಥವಾ ನಿರ್ಲಕ್ಷ್ಯ ಎಂದು ತಪ್ಪಾಗಿ ಅರ್ಥೈಸಬಹುದಾದ ಬದಲಾವಣೆಗಳ ನಿಜವಾದ ಕಾರಣವನ್ನು ಕುಟುಂಬದವರು ತಿಳಿದುಕೊಳ್ಳಲು ಇದು ನೆರವಾಗುತ್ತದೆ. ಗುರುತಿನ ಚೀಟಿ ಇಟ್ಟುಕೊಳ್ಳುವುದು ಅಥವಾ ಜಿಪಿಎಸ್‌ ಟ್ರ್ಯಾಕಿಂಗ್‌ನಂತಹ ಸುರಕ್ಷೆಯ ಯೋಜನೆಗಳನ್ನು ಮುಂಚಿತವಾಗಿ ರೂಪಿಸಬಹುದು.

ನಿಮ್ಮನ್ನು ಆರೈಕೆ ಮಾಡಿದವರ ಆರೈಕೆ

ಡಿಮೆನ್ಶಿಯಾ ಮುಂದುವರಿದಂತೆ, ಚಿಕಿತ್ಸೆಯಲ್ಲಿ ಡೊನೆಪೆಝಿಲ್‌ ಮತ್ತು ಮೆಮ್ಯಾಂಟಿನ್‌ನಂತಹ ಲಕ್ಷಣ ನಿಯಂತ್ರಿಸುವ ಔಷಧಗಳ ಜತೆಗೆ ಬಹಳಷ್ಟು ಔಷಧೇತರ ಆರೈಕೆಯೂ ಅಗತ್ಯವಾಗುತ್ತದೆ - ಶಾಂತ ವಾತಾವರಣ, ಸಾಧ್ಯವಾದಷ್ಟು ಸ್ಥಿರವಾದ ಆರೈಕೆದಾರ, ಸಂಗೀತ, ಮತ್ತು ವ್ಯಕ್ತಿಯಿಂದ ಇನ್ನೂ ನಿಭಾಯಿಸಬಲ್ಲ ಮಟ್ಟಿಗೆ ಹೊಂದಿಸಿದ ನಿರಂತರ ದೈಹಿಕ ಮತ್ತು ಮಾನಸಿಕ ಚಟುವಟಿಕೆ. ಆದರೆ ಪ್ರತಿಯೊಂದು ಡಿಮೆನ್ಶಿಯಾ ಕಥೆಯಲ್ಲೂ ʼಕಾಣಿಸದ ಮತ್ತೂಬ್ಬ ರೋಗಿ' ಇರುತ್ತಾರೆ: ಆರೈಕೆದಾರರು. ತಮ್ಮ ಪ್ರೀತಿಪಾತ್ರರು ಕಣ್ಣೆದುರೇ ಬದಲಾಗುವುದನ್ನು ನೋಡುತ್ತಾ ಅವರು ಭಾವನಾತ್ಮಕ, ದೈಹಿಕ ಮತ್ತು ಆರ್ಥಿಕ ಭಾರವನ್ನು ಮೌನವಾಗಿ ಹೊರುತ್ತಾರೆ. ಆರೈಕೆದಾರರ ವಿಶ್ರಾಂತಿ, ಆರೋಗ್ಯ ಮತ್ತು ಬೆಂಬಲಕ್ಕೂ ರೋಗಿಯಷ್ಟೇ ಗಮನ ನೀಡಬೇಕಾಗುತ್ತದೆ.

ಕೊನೆಯ ಮಾತು

ಡಿಮೆನ್ಶಿಯಾ ವೃದ್ಧಾಪ್ಯಕ್ಕೆ ಕಟ್ಟಲೇಬೇಕಾದ ಅನಿವಾರ್ಯ ಬೆಲೆಯಲ್ಲ; ಯಾರಾದರೂ ಒಂದು ಹೆಸರನ್ನು ಮರೆತ ದಿನವೇ ಅದು ಆರಂಭವಾಗುವುದೂ ಇಲ್ಲ. ಅದು ದಶಕಗಳ ಮೊದಲೇ, ನಾವು ನಮ್ಮ ಮನಸ್ಸು, ದೇಹ ಮತ್ತು ಸಂಬಂಧಗಳನ್ನು ಹೇಗೆ ಬಳಸುತ್ತೇವೆ ಎಂಬ ಆಯ್ಕೆಗಳಲ್ಲಿ ಆರಂಭವಾಗಬಹುದು. ಆದ್ದರಿಂದ ಇಂದಿನಿಂದಲೇ ನಮ್ಮ ಅರಿವಿನ ಸಾಮರ್ಥ್ಯ ಸಂಗ್ರಹವನ್ನು ಬೆಳೆಸೋಣ; ದೈಹಿಕವಾಗಿಯೂ ಮಾನಸಿಕವಾಗಿಯೂ ಸದಾ ಚಟುವಟಿಕೆಯಿಂದ ಇರೋಣ. ಕಾಲಕಾಲಕ್ಕೆ ನೆನಪಿನ ಶಕ್ತಿಯನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ. ಯಾವುದಾದರೂ ಕೊರತೆ ಆರಂಭಿಕ ಹಂತದಲ್ಲೇ ಪತ್ತೆಯಾದರೆ, ಸೂಕ್ತ ಕ್ರಮಗಳನ್ನು ಕೈಗೊಂಡು ಅದನ್ನು ನಿಭಾಯಿಸಬಹುದು. ಜತೆಗೆ ಚಿಕಿತ್ಸೆ, ಸುರಕ್ಷೆ ಮತ್ತು ಭವಿಷ್ಯದ ಆರೈಕೆಯ ಕುರಿತು ಸ್ವತಃ ನಿರ್ಧಾರ ತೆಗೆದುಕೊಳ್ಳುವ ಅವಕಾಶವೂ ನಮಗೆ ದೊರೆಯುತ್ತದೆ. ನೆನಪಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಸಮಯ - ಈಗಲೇ.

-ಡಾ| ಅಕ್ಷತಾ ರಾವ್‌

ಅಸಿಸ್ಟೆಂಟ್‌ ಪ್ರೊಫೆಸರ್‌

ಜೆರಿಯಾಟ್ರಿಕ್‌ ಮೆಡಿಸಿನ್‌, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಜೆರಿಯಾಟ್ರಿಕ್‌ ಮೆಡಿಸಿನ್‌ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಅತ್ತಾವರ, ಮಂಗಳೂರು)

Dailyhunt
Disclaimer: This content has not been generated, created or edited by Dailyhunt. Publisher: Udayavani