Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಲ ಪ್ರವಾಹ ದುರಂತದಲ್ಲಿ ಮೃತಪಟ್ಟ ಮಹಿಳೆಯ ಕಿವಿಯೋಲೆ ಕಳವು: ವಿಡಿಯೋ ವೈರಲ್

ನೇಪಾಲ ಪ್ರವಾಹ ದುರಂತದಲ್ಲಿ ಮೃತಪಟ್ಟ ಮಹಿಳೆಯ ಕಿವಿಯೋಲೆ ಕಳವು: ವಿಡಿಯೋ ವೈರಲ್

ಠ್ಮಂಡು: ಸಾವಿನ ಮನೆಯಲ್ಲಿ ಗಳ ಎಣಿಸುವುದು ಅನ್ನುವ ಮಾತಿಗೆ ಸಾಕ್ಷಿ ಎಂಬಂತೆ ನೇಪಾಲದಲ್ಲಿ ಭೀಕರ ಪ್ರವಾಹಕ್ಕೆ ಬಲಿಯಾದವರ ಮೃತದೇಹಗಳಿಂದ ಕಿವಿಯೋಲೆ ಕಳವು ಮಾಡುತ್ತಿರುವ ಇಬ್ಬರು ವ್ಯಕ್ತಿಗಳ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ನೇಪಾಲ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.

41 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಭೀಕರ ಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎಂದು ನಂಬಲಾಗಿರುವ ಮಹಿಳೆಯ ಮೃತದೇಹವನ್ನು ಕನಿಷ್ಠ ಇಬ್ಬರು ವ್ಯಕ್ತಿಗಳು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಮರದ ಹಲಗೆಗಳ ಸಹಾಯದಿಂದ ಹಾಗೂ ಮಹಿಳೆಯ ಕೂದಲು ಹಿಡಿದು ಮೃತದೇಹವನ್ನು ಎಳೆದೊಯ್ಯುವ ಅವರು, ಬಳಿಕ ಎರಡೂ ಕಿವಿಗಳಲ್ಲಿದ್ದ ಕಿವಿಯೋಲೆಗಳನ್ನು ತೆಗೆದು ಪಕ್ಕಕ್ಕೆ ಇಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ವೇಳೆ ಹಲವು ಪುರುಷರು ಮತ್ತು ಮಹಿಳೆಯರು ಸ್ಥಳದಲ್ಲಿ ನಿಂತಿರುವುದು ಕಂಡುಬಂದಿದ್ದು, ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಘಟನೆಯನ್ನು ಚಿತ್ರೀಕರಿಸುತ್ತಿದ್ದರು. ಮೃತದೇಹದಿಂದ ಆಭರಣ ಕಳವು ಮಾಡಿದ ಘಟನೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದ ಸತ್ಯಾಸತ್ಯತೆ ಅಥವಾ ಮಹಿಳೆಯ ಸಾವಿನ ಸಂದರ್ಭಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಮೃತದೇಹದಿಂದ ಕಿವಿಯೋಲೆ ಕಳವು ಮಾಡಿದ ಆರೋಪಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನೇಪಾಳ ಪೊಲೀಸರು 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದ ಒಂದು ಭಾಗವನ್ನೂ ಹಂಚಿಕೊಂಡಿದ್ದಾರೆ.

ಕಳೆದ ಹಲವು ವರ್ಷಗಳಲ್ಲೇ ನೇಪಾಲ ಕಂಡ ಅತ್ಯಂತ ಭೀಕರ ಪ್ರವಾಹ ದುರಂತಗಳ ಪೈಕಿ ಇದೂ ಒಂದಾಗಿದೆ. ನೇಪಾಲ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಸುಮಾರು 400 ಮಂದಿ ಮೃತಪಟ್ಟಿದ್ದು, ಗಡಿಭಾಗದ ಎರಡೂ ಕಡೆಗಳಲ್ಲಿ ಇನ್ನೂ 1,468 ಮಂದಿ ನಾಪತ್ತೆಯಾಗಿದ್ದಾರೆ.

ಈ ದುರಂತದಿಂದ ನೂರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಭಾರತೀಯರೂ ಇದ್ದಾರೆ. ರಸ್ತೆಗಳು, ಸೇತುವೆಗಳು ಕೊಚ್ಚಿಹೋಗಿದ್ದು, ಭಾರಿ ಪ್ರಮಾಣದಲ್ಲಿ ಕೆಸರು ಮತ್ತು ಅವಶೇಷಗಳು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೂ ತೊಂದರೆಯಾಗುತ್ತಿದೆ. ನಾಪತ್ತೆಯಾಗಿರುವ 290 ಭಾರತೀಯರನ್ನು ಪತ್ತೆಹಚ್ಚಲು ಭಾರತ ತ್ವರಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ.

ಇದೇ ವೇಳೆ, ಹೊಸದಾಗಿ ರೂಪುಗೊಂಡಿರುವ ತಡೆ ಸರೋವರವೊಂದನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸರೋವರದಲ್ಲಿ ನೀರಿನ ಮಟ್ಟ ವೇಗವಾಗಿ ಏರುತ್ತಿದ್ದು, ಮುಂದೆ ಮತ್ತೊಂದು ಭೀಕರ ಪ್ರವಾಹದ ಅಲೆ ಕೆಳಭಾಗದ ಪ್ರದೇಶಗಳಿಗೆ ಅಪ್ಪಳಿಸುವ ಆತಂಕ ಎದುರಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani