ಬೀಜಿಂಗ್: ನೇಪಾಲ ಮತ್ತು ಟಿಬೆಟ್ ಗಡಿ ಪ್ರದೇಶದಲ್ಲಿ ನೂರಾರು ಜನರ ಸಾವಿಗೆ ಹಾಗೂ ಭಾರಿ ವಿನಾಶಕ್ಕೆ ಕಾರಣವಾದ ಭೀಕರ ಪ್ರವಾಹ ಮತ್ತು ಜಲಪ್ರಳಯಕ್ಕೆ ಎತ್ತರದ ಪ್ರದೇಶದಲ್ಲಿದ್ದ ಹಿಮನದಿ ಕುಸಿತವೇ ಮುಖ್ಯ ಕಾರಣ ಎಂದು ಚೀನಾ ಹೇಳಿದೆ.
ಬುಧವಾರ ಸಂಭವಿಸಿದ ಈ ಜಲಪ್ರಳಯದಲ್ಲಿ ನೇಪಾಲದಲ್ಲಿ ಮೃತರ ಸಂಖ್ಯೆ 469ಕ್ಕೆ ಏರಿಕೆಯಾಗಿದ್ದು, ಟಿಬೆಟ್‌ನಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ವಿದೇಶಾಂಗ ಸಚಿವಾಲಯದ ಸ್ಪಷ್ಟನೆ
ಬೀಜಿಂಗ್‌ನಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, "ಚೀನಾ ಮತ್ತು ನೇಪಾಳದ ತಜ್ಞರು ಹಾಗೂ ಅಧಿಕೃತ ಸಂಸ್ಥೆಗಳು ಈ ದುರಂತದ ಕುರಿತು ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಅವರ ವಿಶ್ಲೇಷಣೆಯ ಪ್ರಕಾರ, ನೇಪಾಲದ ಅತ್ಯಂತ ಎತ್ತರದ ಪ್ರದೇಶದಲ್ಲಿದ್ದ ಹಿಮನದಿ ದಿಢೀರನೆ ಕುಸಿದುಬಿದ್ದಿದ್ದೇ ಈ ಜಲಪ್ರಳಯಕ್ಕೆ ಮೂಲ ಕಾರಣ" ಎಂದು ತಿಳಿಸಿದ್ದಾರೆ.
ಈ ಕುರಿತು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಮತ್ತು ನೇಪಾಲದ ಅಧಿಕಾರಿಗಳು ಸಹ ಒಂದೇ ತೀರ್ಮಾನಕ್ಕೆ ಬಂದಿದ್ದು, ಮಂಜುಗಡ್ಡೆ ಹಾಗೂ ಬಂಡೆಗಳ ಹಿಮಪಾತವು ಲ್ಹೇಂಡೆ ನದಿಗೆ (Lhende River) ಬಿದ್ದು ಅದರ ಹರಿವನ್ನು ತಾತ್ಕಾಲಿಕವಾಗಿ ತಡೆದುಬಂಧಿಸಿತ್ತು. ನಂತರ ನೈಸರ್ಗಿಕವಾಗಿ ನಿರ್ಮಾಣವಾಗಿದ್ದ ಆ ತಾತ್ಕಾಲಿಕ ತಡೆಗೋಡೆ ಒಡೆದು ಭಾರಿ ಪ್ರಮಾಣದ ನೀರು ಧುಮ್ಮಿಕ್ಕಿ ಭೋಟೆಕೋಶಿ ಮತ್ತು ತ್ರಿಶೂಲಿ ನದಿ ವ್ಯವಸ್ಥೆಗೆ ಹರಿದುಬಂದು ಕೆಳಭಾಗದಲ್ಲಿದ್ದ ಜನವಸತಿ, ರಸ್ತೆ, ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳನ್ನು ಕೊಚ್ಚಿಹಾಕಿದೆ.
ಪ್ರವಾಸಿಗರ ರಕ್ಷಣೆ
ದುರಂತದ ವೇಳೆ ಟಿಬೆಟ್‌ಗೆ ತೆರಳಿದ್ದ ಭಾರತೀಯ ಪ್ರವಾಸಿಗರು ಮತ್ತು ಯಾತ್ರಿಕರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಲಿನ್ ಜಿಯಾನ್, "ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದೆ. ಸಂಬಂಧಪಟ್ಟ ದೇಶಗಳ ರಾಯಭಾರ ಕಚೇರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ಹೇಳಿದ್ದಾರೆ.
ಟಿಬೆಟ್-ನೇಪಾಲ ಗಡಿಯ ಕೆೈರೋಂಗ್ (Gyirong) ಕೌಂಟಿಯಿಂದ 555 ಪ್ರವಾಸಿಗರು ಸೇರಿದಂತೆ 1,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ಸದ್ಯಕ್ಕೆ ಯಾವುದೇ ವಿದೇಶಿ ಪ್ರವಾಸಿಗರು ಸಿಲುಕಿಕೊಂಡಿಲ್ಲ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಂತಾಪ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನೇಪಾಲದ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಅವರಿಗೆ ಸಂದೇಶ ಕಳುಹಿಸಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ ಕ್ಸಿ ಅವರು, "ದುರಂತ ಸಂಭವಿಸಿದ ಪ್ರದೇಶವು ಅತ್ಯಂತ ಚಳಿಯಿಂದ ಕೂಡಿದ್ದು, ಕಡಿದಾದ ಕಣಿವೆಗಳು ಮತ್ತು ಕಠಿಣ ಹವಾಮಾನವನ್ನು ಹೊಂದಿದೆ. ಆದ್ದರಿಂದ ರಕ್ಷಣಾ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ" ಎಂದು ಕಳವಳ ವ್ಯಕ್ತಪಡಿಸಲಾಗಿದೆ. ನಾಪತ್ತೆಯಾಗಿರುವ ಎಲ್ಲಾ ದೇಶೀಯ ಹಾಗೂ ವಿದೇಶಿ ಪ್ರಜೆಗಳ ಹುಡುಕಾಟಕ್ಕಾಗಿ ಚೀನಾ ಸರ್ಕಾರವು ಕಾರ್ಯಾಚರಣೆ ಚುರುಕುಗೊಳಿಸಿದ್ದು, ನೇಪಾಲಕ್ಕೆ ಅಗತ್ಯ ತುರ್ತು ನೆರವು ನೀಡುವುದಾಗಿ ಘೋಷಿಸಿದೆ.

