Dailyhunt Logo
  • Light mode
    Follow system
    Dark mode
    • Play Story
    • App Story
Nepal: 63 ಭಾರತೀಯರು ಸೇರಿ 350 ಮಂದಿ ರಕ್ಷಣೆ,ಜಲವಿದ್ಯುತ್‌ ಸುರಂಗದಲ್ಲಿ ಕಾರ್ಯಾಚರಣೆ

Nepal: 63 ಭಾರತೀಯರು ಸೇರಿ 350 ಮಂದಿ ರಕ್ಷಣೆ,ಜಲವಿದ್ಯುತ್‌ ಸುರಂಗದಲ್ಲಿ ಕಾರ್ಯಾಚರಣೆ

ಕಠ್ಮಂಡು: ನೇಪಾಲದಲ್ಲಿ ಭಾರಿ ಪ್ರವಾಹದ ಬಳಿಕ ಜಲವಿದ್ಯುತ್‌ ಯೋಜನೆಯ ಸುರಂಗದೊಳಗೆ ಸಿಲುಕಿದ್ದ ಸುಮಾರು 350 ಕಾರ್ಮಿಕರು ಹಾಗೂ ಸ್ಥಳೀಯರನ್ನು ನೇಪಾಲ ಸೇನೆ ರಕ್ಷಿಸಿದೆ. ರಕ್ಷಿಸಲ್ಪಟ್ಟವರಲ್ಲಿ 63 ಮಂದಿ ಭಾರತೀಯ ಪ್ರಜೆಗಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಸುಮಾರು 100 ಮಂದಿ ರಸುವಾ ಜಿಲ್ಲೆಯ ತ್ರಿಶೂಲಿ-3ಎ ಜಲವಿದ್ಯುತ್‌ ಯೋಜನೆಯ ಸುರಂಗದೊಳಗೆ ಸಿಲುಕಿದ್ದು, ಅವರನ್ನು ಸುರಕ್ಷಿತವಾಗಿ ಹೊರತರಲು ರಕ್ಷಣಾ ತಂಡಗಳು ತುರ್ತು ಕಾರ್ಯಾಚರಣೆ ನಡೆಸುತ್ತಿವೆ. ಭಾರಿ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಜಿಲ್ಲೆಗಳಲ್ಲಿ ರಸುವಾ ಕೂಡ ಒಂದಾಗಿದೆ.

ಹಿಮಾಲಯ ರಾಷ್ಟ್ರ ನೇಪಾಲದ ಉತ್ತರ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದ ಬಳಿಕ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಪ್ರವಾಹದ ರಭಸಕ್ಕೆ ರಸ್ತೆಗಳು, ಸೇತುವೆಗಳು ಹಾಗೂ ಜಲವಿದ್ಯುತ್‌ ಮೂಲಸೌಕರ್ಯಗಳು ಕೊಚ್ಚಿಹೋಗಿವೆ.

ನೇಪಾಲ ಪ್ರಧಾನಮಂತ್ರಿ ಕಚೇರಿ (ಪಿಎಂಒ) ಹೇಳಿಕೆಯಲ್ಲಿ, 'ಪ್ರತಿಕೂಲ ಹವಾಮಾನ ಹಾಗೂ ವೇಗವಾಗಿ ಹರಿಯುತ್ತಿದ್ದ ಪ್ರವಾಹದ ನೀರಿನ ನಡುವೆ ಅತ್ಯಂತ ಅಪಾಯಕಾರಿ ಮತ್ತು ಸವಾಲಿನ ಪರಿಸ್ಥಿತಿಯಲ್ಲಿ ಸುರಂಗದೊಳಗೆ ಸಿಲುಕಿದ್ದ 350 ಕಾರ್ಮಿಕರು ಹಾಗೂ ಸ್ಥಳೀಯರನ್ನು ನೇಪಾಲ ಸೇನೆಯ ತಂಡ ಯಶಸ್ವಿಯಾಗಿ ರಕ್ಷಿಸಿದೆ' ಎಂದು ತಿಳಿಸಿದೆ.

'ಇದೇ ಸುರಂಗದಲ್ಲಿ ಸಿಲುಕಿರುವ 100ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸೇನೆ ಇನ್ನೂ ಕಾರ್ಯಾಚರಣೆ ಮುಂದುವರಿಸಿದೆ' ಎಂದು ಪಿಎಂಒ ಹೇಳಿದೆ.

ಗುರುವಾರ ಪಿಎಂಒ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಹೆಲಿಕಾಪ್ಟರ್‌ ಗಾಳಿಯಲ್ಲಿ ತೇಲುತ್ತಿದ್ದ ವೇಳೆ ಹೆಲ್ಮೆಟ್‌ ಹಾಗೂ ಸೇನಾ ಸಮವಸ್ತ್ರ ಧರಿಸಿದ್ದ ಇಬ್ಬರು ನೇಪಾಳ ಸೇನಾ ರಕ್ಷಣಾ ಸಿಬಂದಿ ಹಗ್ಗದ ಮೂಲಕ ಕೆಳಗಿಳಿಯುತ್ತಿರುವುದು ಕಂಡುಬಂದಿದೆ. ಬಳಿಕ ಅವರು ಕೆಸರು ಆವರಿಸಿದ್ದ ಇಳಿಜಾರಿನ ಮೂಲಕ ಸುರಂಗದ ಪ್ರವೇಶದ್ವಾರದತ್ತ ತೆರಳುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.

'ಸುರಂಗದೊಳಗಿನ ಕಠಿನ ಪರಿಸ್ಥಿತಿಯ ನಡುವೆಯೂ ತಾಂತ್ರಿಕ ಉಪಕರಣಗಳು ಹಾಗೂ ವಿಶೇಷ ತರಬೇತಿ ಪಡೆದ ತಂಡಗಳ ನೆರವಿನಿಂದ ಉಳಿದವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ' ಎಂದು ಪಿಎಂಒ ತಿಳಿಸಿದೆ.

ಏತನ್ಮಧ್ಯೆ, ಎಎಫ್‌ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನೇಪಾಳ ಸೇನೆಯ ವಕ್ತಾರ ರಾಜಾ ರಾಮ್ ಬಾಸ್ನೆಟ್, ರಕ್ಷಣ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಪ್ರವಾಹದಿಂದ ಉಂಟಾದ ಭಾರಿ ನಾಶದ ಹಿನ್ನೆಲೆಯಲ್ಲಿ ಸುರಂಗದ ಪ್ರವೇಶದ್ವಾರಗಳನ್ನು ಪತ್ತೆಹಚ್ಚುವುದೇ ರಕ್ಷಣಾ ಸಿಬಂದಿಗೆ ದೊಡ್ಡ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಪ್ರವಾಹದ ಆತಂಕ
ನೇಪಾಲದಲ್ಲಿ ಸಂಭವಿಸಿದ ಭೀಕರ ಹಠಾತ್‌ ಪ್ರವಾಹದ ಬಳಿಕ ಬದುಕುಳಿದವರಿಗಾಗಿ ರಕ್ಷಣ ಕಾರ್ಯಾಚರಣೆ ನಡೆಯುತ್ತಿರುವ ನಡುವೆಯೇ ಮತ್ತೊಂದು ಆತಂಕ ಎದುರಾಗಿದೆ. ನೇಪಾಲ-ಟಿಬೆಟ್‌ ಗಡಿ ಸಮೀಪ ಹೊಸದಾಗಿ ರೂಪುಗೊಂಡಿರುವ ಸರೋವರವೊಂದು ತುಂಬಿ ಹರಿಯಲಾರಂಭಿಸಿದ್ದು, ಮತ್ತೊಂದು ಭೀಕರ ಪ್ರವಾಹದ ಅಲೆ ಉಂಟಾಗುವ ಸಾಧ್ಯತೆ ಎದುರಾಗಿದೆ.

ಗಡಿ ಸಮೀಪ ಹಿಮನದಿ ಕುಸಿತದಿಂದ ಉಂಟಾದ ಹಿಮ-ಬಂಡೆ ಕುಸಿತದ ಬಳಿಕ ಸಂಭವಿಸಿದ ಹಠಾತ್‌ ಪ್ರವಾಹದಲ್ಲಿ ನೇಪಾಳ ಹಾಗೂ ಟಿಬೆಟ್‌ ಭಾಗಗಳಲ್ಲಿ ಕನಿಷ್ಠ 475 ಮಂದಿ ಮೃತಪಟ್ಟಿದ್ದು, ಸುಮಾರು 1,500 ಮಂದಿ ನಾಪತ್ತೆಯಾಗಿದ್ದಾರೆ.

ನೀರು, ಕೆಸರು ಹಾಗೂ ಅವಶೇಷಗಳ ರಭಸದ ಪ್ರವಾಹ ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹೋಗಿದ್ದು, ಹಲವು ವಸತಿ ಪ್ರದೇಶಗಳು ಸಂಪೂರ್ಣವಾಗಿ ಮಣ್ಣಿನಡಿ ಹೂತುಹೋಗಿವೆ.

Dailyhunt
Disclaimer: This content has not been generated, created or edited by Dailyhunt. Publisher: Udayavani