ಟಾಪ್ 10 ಸುದ್ದಿ
ನಿಗದಿಯಂತೆ ಕಾಮನ್‌ವೆಲ್ತ್ ಗೇಮ್ಸ್: ಸಿಡಬ್ಲ್ಯುಜಿ ಫೆಡರೇಶನ್ ವಿಶ್ವಾಸ

ಹೊಸದಿಲ್ಲಿ: ಮುಂದಿನ ವರ್ಷ ಬರ್ಮಿಂಗ್‌ಹ್ಯಾಂನಲ್ಲಿ ಆಯೋಜಿಸಲಾಗಿರುವ ಕಾಮನ್‌ವೆಲ್ತ್ ಗೇಮ್ಸ್ ನಿಗದಿಯಂತೆ ನಡೆಯಲಿದೆ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ವಿಶ್ವಾಸ ವ್ಯಕ್ತಪಡಿಸಿದೆ.
ಯುಕೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2022ರಲ್ಲಿ ಬರ್ಮಿಂಗ್‌ಹ್ಯಾಂನಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆಯುವ ಸಾಧ್ಯತೆಗಳ ಬಗೆಗೆ ಬರ್ಮಿಂಗ್‌ಹ್ಯಾಂ ನಗರ ಕೌನ್ಸಿಲ್ ನಾಯಕರು ಇತ್ತೀಚೆಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಡಬ್ಲ್ಯುಜಿ ಫೆಡರೇಶನ್‌ನಿಂದ ಈ ಸ್ಪಷ್ಟನೆ ಹೊರಬಿದ್ದಿದೆ.
ಯುಕೆಯಲ್ಲಿ ರೂಪಾಂತರಿತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ಗೆ ಇನ್ನೂ 18 ತಿಂಗಳುಗಳು ಬಾಕಿ ಉಳಿದಿದ್ದರೂ ಕ್ರೀಡಾಕೂಟ ಆಯೋಜನೆ ಬಗ್ಗೆ ಈಗಲೇ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗದು ಎಂದು ಕಳೆದ ವಾರವಷ್ಟೇ ಬರ್ಮಿಂಗ್‌ಹ್ಯಾಂ ನಗರ ಕೌನ್ಸಿಲ್‌ನ ನಾಯಕ ಇಯಾನ್ ವಾರ್ಡ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬರ್ಮಿಂಗ್‌ಹ್ಯಾಂ ಸಮೀಪದ ಪಟ್ಟಣವಾಗಿರುವ ವಲ್ಸಾಲ್‌ನ ಕೌನ್ಸಿಲ್ ನಾಯಕ ಮೈಕ್ ಬರ್ಡ್ ಅವರೂ ಇದಕ್ಕೆ ದನಿಗೂಡಿಸಿ ಗೇಮ್ಸ್ ಆಯೋಜನೆಯ ಬಗೆಗೆ ಪರ್ಯಾಯ ಮಾರ್ಗೋಪಾಯಗಳ ಬಗೆಗೆ ಚಿಂತಿಸುವುದು ಸೂಕ್ತ ಎಂದು ಸಲಹೆ ನೀಡಿದ್ದರು.
ತನ್ನನ್ನು ಧೋನಿ ಜೊತೆ ಹೋಲಿಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಂತ್
ಆದರೆ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್, ನಿಗದಿಯಂತೆ ಅಂದರೆ 2022ರ ಜು.28ರಿಂದ ಆ.8ರ ವರೆಗೆ ಗೇಮ್ಸ್ ನಡೆಯಲಿದ್ದು ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಕ್ರೀಡಾಕೂಟಕ್ಕೆ ಇನ್ನೂ 18 ತಿಂಗಳುಗಳಷ್ಟು ಕಾಲಾವಕಾಶ ಇದ್ದು ಜಾಗತಿಕ ಪರಿಸ್ಥಿತಿಗನುಸಾರವಾಗಿ ಸರಕಾರ, ಎನ್‌ಜಿಒ ಮತ್ತು ಪ್ರಾಯೋಜಕರೊಂದಿಗೆ ಫೆಡರೇಶನ್ ನಿರಂತರ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಫೆಡರೇಶನ್‌ನ ಮುಖ್ಯ ಕಾರ್ಯನಿರ್ವಾಹಕ ಡೇವಿಡ್ ಗ್ರೆವೆಂಬರ್ಗ್ ತಿಳಿಸಿದ್ದಾರೆ.
ಕೊರೊನೋತ್ತರದ ಬಳಿಕ ಯುಕೆಯಲ್ಲಿ ನಡೆಯಲಿರುವ ಅತೀ ದೊಡ್ಡ ಕ್ರೀಡಾಕೂಟ ಇದಾಗಿದ್ದು ದೇಶದ ಪಾಲಿಗೆ ಅತ್ಯಂತ ಮಹತ್ತರವಾದುದಾಗಿದೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರಗಳ ಸರಕಾರಗಳ ಮಟ್ಟದಲ್ಲಿ ಶಿಸ್ತು ಸಮಿತಿಗಳನ್ನು ರಚಿಸಿ ಪ್ರತಿಯೊಂದೂ ಹಂತದಲ್ಲೂ ಸಿದ್ಧತೆಗಳ ಮೇಲೆ ನಿಗಾ ಇಡಲಾಗಿದೆ ಎಂದರು.
ಸದ್ಯ ದೇಶದಲ್ಲಿ ಚಾಲನೆಯಲ್ಲಿರುವ ಕೊರೊನಾ ಲಸಿಕೆ ನೀಡಿಕೆ ಪ್ರಕ್ರಿಯೆ ಮತ್ತು ಕೈಗೊಳ್ಳಲಾಗಿರುವ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಶೀಘ್ರದಲ್ಲಿಯೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸ ನಮ್ಮದಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಆಯತ್ಲೀಟ್‌ಗಳ ಸುರಕ್ಷತೆ ಮತ್ತು ಅವರು ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ಪೂರಕವಾದ ವಾತಾವರಣ ನಿರ್ಮಿಸುವುದೇ ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ಗ್ರೆವೆಂಬರ್ಗ್ ಹೇಳಿದರು.