Dailyhunt Logo
  • Light mode
    Follow system
    Dark mode
    • Play Story
    • App Story
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರಕಾರದ ಪಾತ್ರಕ್ಕೆ ಸಾಕ್ಷ್ಯ ಇಲ್ಲ: ಕೆನಡಾ ಪೊಲೀಸ್

ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರಕಾರದ ಪಾತ್ರಕ್ಕೆ ಸಾಕ್ಷ್ಯ ಇಲ್ಲ: ಕೆನಡಾ ಪೊಲೀಸ್

ಟ್ಟಾವಾ :ಖಲಿಸ್ಥಾನಿ ಉಗ್ರಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರಕಾರದ ಅಧಿಕಾರಿಗಳ ಪಾತ್ರವಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಕೆನಡಾದ ರಾಯಲ್ ಕೆನೇಡಿಯನ್ ಮೌಂಟೆಡ್ ಪೊಲೀಸ್ (RCMP) ಬುಧವಾರ (ಜು.8)ಮಹತ್ವದ ಹೇಳಿಕೆ ನೀಡಿದೆ.

ಸುಮಾರು ಮೂರು ವರ್ಷಗಳ ಹಿಂದೆ ಅಂದಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ''ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಸರಕಾರಿ ಏಜೆಂಟ್‌ಗಳ ಸಂಭಾವ್ಯ ಸಂಪರ್ಕ ಇರುವುದಾಗಿ ಆರೋಪಿಸಿದ್ದರು. ಆದರೆ ಇದೀಗ ಆ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ'' ಎಂದು ಕೆನಡಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಟ್ರುಡೊ ಸರಕಾರದ ಗಂಭೀರ ಆರೋಪದಿಂದ ಭಾರತ-ಕೆನಡಾ ನಡುವೆ ದೊಡ್ಡ ಮಟ್ಟದ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿತ್ತು. ಸದ್ಯ ಪೊಲೀಸರು ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಟ್ರುಡೊ ಅವರ ಆರೋಪಗಳನ್ನು ಭಾರತ "ಆಧಾರರಹಿತ ಮತ್ತು ರಾಜಕೀಯ ಪ್ರೇರಿತ" ಎಂದು ತಳ್ಳಿಹಾಕಿತ್ತು. ಬಳಿಕ ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕರನ್ನು ಹಿಂಪಡೆಯುವುದು, ದ್ವಿಪಕ್ಷೀಯ ಮಾತುಕತೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಹಲವು ಬೆಳವಣಿಗೆಗಳು ನಡೆದಿದ್ದವು.

ಇದೇ ವೇಳೆ, ಅಮೆರಿಕದಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹಾಗೂ ಉತ್ತರ ಅಮೆರಿಕ ಮೂಲದ ಆತನ ಸಹಚರ ಸತಿಂದರ್‌ಜೀತ್ ಸಿಂಗ್ ವಿರುದ್ಧ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಆದರೆ ಆ ಆರೋಪಪಟ್ಟಿಯಲ್ಲಿ ಭಾರತ ಸರಕಾರದ ಯಾವುದೇ ಪಾತ್ರವನ್ನು ಉಲ್ಲೇಖಿಸಲಾಗಿಲ್ಲ.

ಭಾರತವು 2020ರಲ್ಲಿ ಉಗ್ರನೆಂದು ಘೋಷಿಸಿದ್ದ ನಿಜ್ಜರ್, ನಿಷೇಧಿತ 'ಖಲಿಸ್ಥಾನ್ ಟೈಗರ್ ಫೋರ್ಸ್' (KTF) ಸಂಘಟನೆಯ ಮುಖ್ಯಸ್ಥನಾಗಿದ್ದ. 2023ರಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಪಾರ್ಕಿಂಗ್ ಪ್ರದೇಶದಲ್ಲಿ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಟ್ರುಡೊ ಅಧಿಕಾರ ತೊರೆದ ಬಳಿಕ ಮಾರ್ಕ್ ಕಾರ್ನೆ ನೇತೃತ್ವದಲ್ಲಿ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧಗಳು ಮತ್ತೆ ಸುಧಾರಣೆಯ ಹಾದಿಯಲ್ಲಿವೆ.

ಆರ್‌ಸಿಎಂಪಿಯ ಉಪ ಆಯುಕ್ತೆ ಲಿಸಾ ಮೊರ್ಲ್ಯಾಂಡ್ ಮಾತನಾಡಿ, "ಸಂಘಟಿತ ಅಪರಾಧ ಜಾಲದ ತನಿಖೆ ಮತ್ತು ಸಲ್ಲಿಸಿರುವ ಆರೋಪಪಟ್ಟಿಗಳ ಆಧಾರದಲ್ಲಿ ಭಾರತ ಸರಕಾರ ಅಧಿಕಾರಿಗಳ ವಿರುದ್ಧ ಆರೋಪ ಹೊರಿಸಲು ಅಥವಾ ಅವರ ಪಾತ್ರವನ್ನು ಸೂಚಿಸುವ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಭಾರತ ಸರಕಾರವನ್ನು ಈ ಪ್ರಕರಣಕ್ಕೆ ಸಂಪರ್ಕಿಸುವ ಯಾವುದೇ ಮಾಹಿತಿ ತನಿಖೆಯಲ್ಲಿ ಹೊರಬಂದಿಲ್ಲ. ಆದರೆ ತನಿಖೆ ಇನ್ನೂ ಮುಂದುವರಿದಿದೆ" ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani