ಒಂದು ಕಾಲವಿತ್ತು. ಅಂದರೆ ಸುಮಾರು ಎರಡು-ಮೂರು ದಶಕಗಳ ಹಿಂದೆ. ಅಪ್ಪನಿಗೆ ತಿಂಗಳ ಸಂಬಳ ಅತೀ ಕಡಿಮೆ ಇದ್ದರೂ ಮಗನಿಗೆ ನೀಲಿ ಬಣ್ಣದ ಚಡ್ಡಿ, ಬಿಳಿ ಅಂಗಿ ಹೊಲಿಸೋದೇ ದೊಡ್ಡ ಸಾಧನೆ. ಸರಕಾರಿ ಶಾಲೆಯ ಗೇಟ್ ದಾಟೋದು ಅಂದರೆ ಕುಟುಂಬಕ್ಕೆ ಹೆಮ್ಮೆ.
ನಮ್ಮ ಹುಡುಗ ಸ್ಕೂಲ್‌ಗೆ ಹೋಗ್ತಾನೆ ಅಂತ ಊರೆಲ್ಲ ಹೇಳುತ್ತಿದ್ದರು.
ಮಧ್ಯಾಹ್ನದ ಬಿಸಿಯೂಟಕ್ಕೆ ಅಲ್ಯೂಮಿನಿಯಂ ತಟ್ಟೆ ಹಿಡಿದು ಸಾಲಲ್ಲಿ ನಿಂತರೆ ಅದೇ ಸ್ವರ್ಗ. ಮೇಷ್ಟ್ರು ಬೈದರೂ, ಬೆತ್ತದ ಏಟು ಬಿದ್ದರೂ ಶಾಲೆ ಬಿಡುವ ಮಾತೇ ಇರಲಿಲ್ಲ. ಯಾಕಂದರೆ ಓದಿದರೆ ಮಾತ್ರ ಬದುಕು ಬದಲಾಗುತ್ತೆ ಅನ್ನುವ ನಂಬಿಕೆ ಇತ್ತು.
ಕಾಲ ಬದಲಾಯ್ತು. ಅದೇ ನೀಲಿ ಸಮವಸ್ತ್ರ ಒಂದ್ ಒಂದೇ ಊರಿಂದ ಕಣ್ಣ್ ಮರೆಯಾಗುವತ್ತಾ ಸಾಗುತ್ತಿದೆ. ಶೂನ್ಯ ದಾಖಲಾತಿ ಕಾರಣವಾಗಿ ಸರಕಾರಿ ಶಾಲೆಗಳಿಗೆ ಬೀಗ ಬಿದ್ದಿದೆ. ಒಂದು ಕಾಲದಲ್ಲಿ ಮಕ್ಕಳ ಕಲರವದಿಂದ ತುಂಬಿ ತುಳುಕುತ್ತಿದ್ದ ಕೊಠಡಿಗಳು ಈಗ ಖಾಲಿ ಹೊಡೆಯುತ್ತಿವೆ. ಕಪ್ಪು ಹಲಗೆಗೆ ಜೇಡ ಬಲೆ ಕಟ್ಟಿದೆ. ಆಟದ ಮೈದಾನದಲ್ಲಿ ಹುಲ್ಲು ಬೆಳೆದಿದೆ. 30-40 ಮಕ್ಕಳು ಕೂರುತ್ತಿದ್ದ ಬೆಂಚುಗಳ ಮೇಲೆ ದೂಳು ಕೂತಿದೆ.
ಬೀಗ ಹಾಕಿದರೆ ಪರಿಹಾರವೇ?
ಶಾಲೆ ಮುಚ್ಚುವುದು ಸಮಸ್ಯೆಗೆ ಉತ್ತರ ಅಲ್ಲ. ಒಬ್ಬ ವಿದ್ಯಾರ್ಥಿ ಇದ್ದರೂ ಶಾಲೆ ನಡೆಯಬೇಕು ಎಂದು ಶಿಕ್ಷಣ ಹಕ್ಕು ಕಾಯ್ದೆ ಹೇಳುತ್ತದೆ. ಬದಲಾಗಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ಸ್ಮಾರ್ಟ್ ಕ್ಲಾಸ್, ಲೈಬ್ರರಿ, ಆಟದ ಮೈದಾನಗಳನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಬಹುದು. 1ನೇ ಕ್ಲಾಸ್‌ನಿಂದಲೇ ಮಾತನಾಡುವ ಇಂಗ್ಲಿಷ್ ಕಲಿಸಿ. ಪೋಷಕರ ಭಯ ಹೋಗಲಾಡಿಸಬಹುದು.
ಅವನತಿಗೆ ಕಾರಣಗಳೇನು?
ಶಾಲಾ ಬಸ್, ಡಿಜಿಟಲ್ ಕ್ಲಾಸ್ ರೂಮ್, ಖಾಸಗಿ ಶಾಲೆಗಳು ಪೋಷಕರನ್ನು ಸೆಳೆಯುತ್ತಿವೆ. ಸರಕಾರಿ ಶಾಲೆ ಅಂದರೆ ಕಡಿಮೆ ಗುಣಮಟ್ಟ ಎಂಬ ಹಣೆಪಟ್ಟಿ ಅಂಟಿಕೊಂಡಿದೆ. ಇಂದಿಗೂ ಹಲವು ಶಾಲೆಗಳಲ್ಲಿ ಸುಸಜ್ಜಿತ ಶೌಚಾಲಯ, ಕುಡಿಯುವ ನೀರು, ಆಟದ ಸಾಮಗ್ರಿಗಳಿಲ್ಲ. ಒಬ್ಬರೇ ಶಿಕ್ಷಕರು 1ರಿಂದ 5ನೇ ತರಗತಿವರೆಗೆ ಪಾಠ ಮಾಡುವ ಏಕೋಪಾಧ್ಯಾಯ ಶಾಲೆಗಳೇ ಶೇ. 40ರಷ್ಟಿವೆ.
ಮುಂದಿನ ದಾರಿ ಏನು?
ಸರಕಾರಿ ಶಾಲೆಯಲ್ಲೂ ನ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣ ಕಡ್ಡಾಯಗೊಳಿಸಬೇಕು. ಶಿಕ್ಷಕರಿಗೆ ನಿರಂತರ ತರಬೇತಿ ನೀಡಬೇಕು. ನಮ್ಮ ಶಾಲೆ ನಮ್ಮ ಹೆಮ್ಮೆ ಅಭಿಯಾನದ ಮೂಲಕ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆ ದತ್ತು ಪಡೆದು ಅಭಿವೃದ್ಧಿಪಡಿಸಬೇಕು. ಕೇವಲ ಬಿಸಿಯೂಟ, ಸಮವಸ್ತ್ರ, ಪುಸ್ತಕ ಕೊಟ್ಟರೆ ಸಾಲದು. ಪೋಷಕರಲ್ಲಿ ವಿಶ್ವಾಸ ಮೂಡಿಸುವಂತಹ ವಾತಾವರಣ ನಿರ್ಮಿಸಬೇಕು.
ನೀಲಿ ಸಮವಸ್ತ್ರದ ಮೇಲೆ ಭವಿಷ್ಯದ ಕನಸು ಕಟ್ಟಿಕೊಂಡ ತಲೆಮಾರು ಇನ್ನೂ ನಮ್ಮೊಂದಿಗಿದೆ. ಅವರ ಕಣ್ಣೆದುರೇ ಶಾಲೆಗೆ ಬೀಗ ಬೀಳುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಶಾಲೆ ಉಳಿದರೆ ಊರು ಉಳಿಯುತ್ತದೆ. ಸರಕಾರ, ಸಮಾಜ ಮತ್ತು ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ನಾವು ಹೇಳುವುದು ಒಂದಾನೊಂದು ಕಾಲದಲ್ಲಿ ಇಲ್ಲಿ ಸರಕಾರಿ ಶಾಲೆ ಇತ್ತು ಎಂಬ ಕಥೆಯನ್ನಷ್ಟೇ.
-ದಿವ್ಯ
ನಾಯ್ಕನಕಟ್ಟೆ

