ಧಾರವಾಡ: ಸ್ನಾನಕ್ಕೆ ನೀರು ಕಾಯಿಸುವ ಕಾಯಿಲ್‌ನಿಂದ ವಿದ್ಯುತ್ ಪ್ರವಹಿಸಿ ಗೃಹಿಣಿಯೊಬ್ಬಳು ಸ್ನಾನಗೃಹದಲ್ಲಿಯೇ ಸಾವನ್ನಪ್ಪಿದ ಘಟನೆ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ನಿವೇದಿತಾ ನಾಯ್ಕರ್ (24) ಮೃತ ದುರ್ದೈವಿಯಾಗಿದ್ದು, ಇವರಿಗೆ ಮೂರು ವರ್ಷ ಹಾಗೂ ಒಂದೂವರೆ ವರ್ಷದ ಇಬ್ಬರು ಪುಟಾಣಿ ಮಕ್ಕಳಿದ್ದಾರೆ.
ಪತಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು ಘಟನೆ ನಡೆದಾಗ ಕೆಲಸಕ್ಕೆ ಹೋಗಿದ್ದ ವೇಳೆ ಈ ದುರ್ಘಟನೆ ಎನ್ನಲಾಗಿದೆ.
ಇಬ್ಬರು ಮಕ್ಕಳನ್ನು ಮೊದಲು ಕಾಯಿಲಿನಿಂದ ಕಾಯಿಸಿದ ಬಿಸಿ ನೀರಿನಿಂದಲೇ ಸ್ನಾನ ಮಾಡಿಸಿದ ನಿವೇದಿತಾ ಬಳಿಕ ತನ್ನ ಸ್ನಾನಕ್ಕೆ ನೀರು ಕಾಯಿಸುವ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

