ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಶೇ.70ರಷ್ಟು ಖಾಲಿ ನಿವೇಶನಗಳ ಮಾಲಿಕರು ಇದುವರೆಗೂ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಹೀಗಾಗಿ, ನಿವೇಶನಗಳನ್ನು ಪಾಲಿಕೆಯಿಂದಲೇ ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ಮಾಲಿಕರಿಂದ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.
ನಗರಾದ್ಯಂತ "ತ್ಯಾಜ್ಯದಿಂದ ಸ್ವಾತಂತ್ರ್ಯ'' ಅಭಿಯಾನದಡಿ ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಆಸ್ತಿ ಮಾಲಿಕರಿಗೆ ಸೂಚಿಸಿದ್ದು, ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಗುರುವಾರ ದೊಮ್ಮಲೂರಿನಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಸ್ವತಃ ಸ್ವಚ್ಛಗೊಳಿಸಿಕೊಂಡಿರುವ ಮಾಲಿಕರಿಗೆ ಧನ್ಯವಾದ ಪತ್ರ ನೀಡಲಾಗುವುದು ಎಂದರು.
ಶೇ.30ರಷ್ಟು ಮಾಲಿಕರ ಸ್ಪಂದನೆ
ಖಾಲಿ ನಿವೇಶನಗಳ ಮಾಲಿಕರು ತಮ್ಮ ನಿವೇಶನಗಳನ್ನು ಸ್ವತಃ ಸ್ವತ್ಛಗೊಳಿಸಿಕೊಳ್ಳಲು ಆ.15ರವರೆಗೆ ಕಾಲಾವಕಾಶ ನೀಡಲಾಗಿತ್ತು. ಬಳಿಕ ಮತ್ತೂಂದು ವಾರ, ಅಂದರೆ ಆ.22ರವರೆಗೆ ಕಾಲಾವಕಾಶ ವಿಸ್ತರಿಸಲಾಗಿತ್ತು. ಈ ಅವಧಿಯಲ್ಲಿ ಶೇ.30 ಮಾಲಿಕರು ತಮ್ಮ ನಿವೇಶನಗಳನ್ನು ಸ್ವತ್ಛಗೊಳಿಸಿಕೊಂಡಿದ್ದಾರೆ.
ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿ ಹೆಚ್ಚಾಗಿ ಬೆಳೆದಿರುವುದರಿಂದ ಜೆಸಿಬಿ ಮೂಲಕ ಸ್ವಚ್ಛಗೊಳಿಸಲು ಕನಿಷ್ಠ 3 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಟಿಪ್ಪರ್‌ಗಳ ಸಂಚಾರಕ್ಕೆ ಇರುವ ನಿರ್ಬಂಧದ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ದಿನಕ್ಕೆ 1 ಬಾರಿ ಮಾತ್ರ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ನಿವೇಶನದ ಅಳತೆ ಆಧರಿಸಿ ಎಸ್‌ಆರ್‌ದರದ ಪ್ರಕಾರ ಸ್ವಚ್ಛತಾ ವೆಚ್ಚವನ್ನು ನಿಗದಿಪಡಿಸಲಾಗಿದೆ ಎಂದರು.
ಗೋಡೆ ತೆರವುಗೊಳಿಸಿ ಸ್ವಚ್ಛತಾ ಕಾರ್ಯ ಕೈಗೊಂಡರೆ ನಿಗದಿಪಡಿಸಿರುವ ದರವನ್ನೇ ವಿಧಿಸಲಾಗುವುದು. ಗೇಟ್ ವ್ಯವಸ್ಥೆ ಇರುವ ನಿವೇಶನಗಳಿಗೆ ಹೆಚ್ಚುವರಿ ದರ ವಿಧಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೊದಲ ಬಾರಿಗೆ ಖಾಲಿ ನಿವೇಶನವನ್ನು ಸ್ವತ್ಛಗೊಳಿಸುವ ಸಂದರ್ಭದಲ್ಲಿ ಯಾವುದೇ ದಂಡ ವಿಧಿಸಲಾಗುವುದಿಲ್ಲ. ಇದೇ ರೀತಿಯ ನಿರ್ಲಕ್ಷ್ಯ ಪುನರಾವರ್ತನೆಯಾದಲ್ಲಿ ಮಾತ್ರ ದಂಡ ವಿಧಿಸಲಾಗುವುದು ಎಂದರು.
1.22 ಲಕ್ಷ ಮೆಟ್ರಿಕ್ ಟನ್ ಸಿ ಆಯಂಡ್ ಡಿ ತ್ಯಾಜ್ಯ ತೆರವು
"ತ್ಯಾಜ್ಯದಿಂದ ಸ್ವಾತಂತ್ರ್ಯ'' ಅಭಿಯಾನದಡಿ ನಗರಾದ್ಯಂತ ಜಿಬಿಎ ವತಿಯಿಂದ 67,152 ಮೆಟ್ರಿಕ್ ಟನ್ ಸಿ ಆಯಂಡ್ ಡಿ ತ್ಯಾಜ್ಯ ತೆರವುಗೊಳಿಸಲಾಗಿದೆ. ಬಿಡಿಎನಿಂದದ 51,323 ಮೆಟ್ರಿಕ್ ಟನ್, ಜಲಮಂಡಳಿಯಿಂದ 728 ಮೆಟ್ರಿಕ್ ಟನ್, ಕೆಐಎಡಿಬಿಯಿಂದ 2,800 ಮೆಟ್ರಿಕ್ ಟನ್, ಕೆ-ರೈಡ್ ನಿಂದ 560 ಮೆಟ್ರಿಕ್ ಟನ್ ಹಾಗೂ ಎನ್‌ಹೆಚ್‌ಎಐ ವತಿಯಿಂದ 169 ಮೆಟ್ರಿಕ್ ಟನ್ ತ್ಯಾಜ್ಯ ಸೇರಿದಂತೆ ವಿವಿಧ ಇಲಾಖೆಗಳಿಂದ ಈ ವರೆಗೂ ಒಟ್ಟು 1,22,732 ಮೆಟ್ರಿಕ್ ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ ಎಂದರು.
ಈ ವೇಳೆ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ಕೇಂದ್ರ ಪಾಲಿಕೆ ಆಯುಕ್ತ ಜಗದೀಶ್ ಮತ್ತಿತರರು ಇದ್ದರು.
ನಗರದಲ್ಲಿ 189 ಖಾಲಿ ಸೈಟ್‌ಗಳಿಗೆ ನೋಟಿಸ್
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲಿಕರಿಗೆ ಜಾಗೃತಿ ಮೂಡಿಸುವುದು ಹಾಗೂ ಸ್ವತ್ಛತಾ ಕಾರ್ಯ ಕೈಗೊಳ್ಳುವ ಸಂಬಂಧ ನಗರ ಪಾಲಿಕೆವಾರು ಒಟ್ಟು 189 ಖಾಲಿ ನಿವೇಶನ ಗಳಿಗೆ ನೋಟಿಸ್ ಅಂಟಿಸಲಾಗಿದೆ. ಕೇಂದ್ರ ಪಾಲಿಕೆ -53, ಉತ್ತರ ಪಾಲಿಕೆ-37, ಪಶ್ಚಿಮ ಪಾಲಿಕೆ- 41, ಪೂರ್ವ ಪಾಲಿಕೆ- 28, ದಕ್ಷಿಣ ಪಾಲಿಕೆ- 30 ನಿವೇಶಗಳಿಗೆ ನೋಟಿಸ್ ಅಂಟಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

