ಮೈಸೂರು: ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಿಯಮದಂತೆ ನಡೆಯುತ್ತಿಲ್ಲ. ಈ ಭಾಗದಲ್ಲಿ ಸುಸೂತ್ರವಾಗಿ ಪ್ರಕ್ರಿಯೆ ನಡೆಯಲು ಪೊಲೀಸ್ ಭದ್ರತೆ ಅಗತ್ಯವಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅಲ್ಪಸಂಖ್ಯಾತರೇ ಹೆಚ್ಚಿರುವ ಎನ್.ಆರ್.
ಕ್ಷೇತ್ರದಲ್ಲಿ ಮಸೀದಿ, ಸಮುದಾಯ ಭವನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಸೇರಿಸಿ, ಅರ್ಜಿಗಳನ್ನು ಭರ್ತಿ ಮಾಡಿಸಲಾಗುತ್ತಿದೆ. ಬಿಜೆಪಿಯಿಂದ ಬೂತ್ ಮಟ್ಟದಲ್ಲಿ ನೇಮಿಸಿರುವ ಏಜೆಂಟರನ್ನು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲೆಯ ಎಲ್ಲ 11 ಕ್ಷೇತ್ರಗಳ ಪೈಕಿ ನರಸಿಂಹರಾಜ ಕ್ಷೇತ್ರವೊಂದರಲ್ಲೇ 1 ಲಕ್ಷ ಮತದಾರರು ಹೆಚ್ಚಾಗಿದ್ದಾರೆ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಪಕ್ಷದ ಏಜೆಂಟರನ್ನು ಸೇರಿಸುತ್ತಿಲ್ಲ: ಬಿಜೆಪಿಯಿಂದ ಬೂತ್ ಮಟ್ಟದಲ್ಲಿ ನೇಮಕ ಮಾಡಲಾಗಿರುವ ಏಜೆಂಟರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಅಲ್ಲಿನ ಜನರು ನೋಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಆ ಸ್ಥಳಕ್ಕೆ ನಮ್ಮವರು ಹೋದರೆ ಬೆದರಿಕೆ ಹಾಕಲಾಗುತ್ತಿದೆ. ಆದರೆ, ಕಾಂಗ್ರೆಸ್ ಏಜೆಂಟರು ಪ್ರತಿ ಬಿಎಲ್‌ಒ ಗಳ ಬಳಿ ಮೂರು ಮಂದಿ ಇದ್ದಾರೆ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಪೊಲೀಸ್ ಭದ್ರತೆಯೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಸಬೇಕು. ಸಿಆರ್ಪಿಎಪ್ ಪೊಲೀಸ್ ಭದ್ರತೆ ಒಡಗಿಸಿದರೆ ಮಾತ್ರ ನೈಜ್ಯ ಮತದಾರರು ಯಾರೆಂದು ತಿಳಿಯಲು ಸಾಧ್ಯ ಎಂದರು.
ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದಿಂದ ನೂರಾರು ಮಂದಿ ವಲಸಿಗರು ರೈಲು ಮೂಲಕ ಮೈಸೂರಿಗೆ ಆಗಮಿಸಿದರು. ಅವರು ಏತಕ್ಕಾಗಿ ಬಂದರು ಎಂದು ಪ್ರಶ್ನಿಸಿದವರ ಮೇಲೆಯೇ ಪ್ರಕರಣ ದಾಖಲಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಅರ್ಹ ಮತದಾರರನ್ನು ಮಾತ್ರ ಪಟ್ಟಿಗೆ ಸೇರಿಸಲು ಎಸ್‌ಐಆರ್ ಪ್ರಕ್ರಿಯರ್ನಡೆಸಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ. ಹಾಗಾಗಿಯೇ ರಾಜ್ಯದ ವಿವಿಧ ಭಾಗಗಳಲ್ಲಿ ವಲಸಿಗರಿಗೆ, ಮತದಾರರಲ್ಲದವರಿಗೆ ಮತದಾನದ ಅವಕಾಶ ಕಲ್ಪಿಸಿಕೊಡುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಜಗತ್ತಿನ ವಿವಿಧ ದೇಶಗಳಲ್ಲಿ ವಲಸಿಗರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀಗಿದ್ದರೂ ಕಾಂಗ್ರೆಸ್ ಸರ್ಕಾರ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರು ಅಲ್ಲದವರಿಗೂ ಮತದಾನದ ಹಕ್ಕು ಕೊಡಿಸುತ್ತಿದೆ. ಮತದಾರರ ಪಟ್ಟಿಗೆ ಸೇರಲು 12 ದಾಖಲೆ ನೀಡಬೇಕು. ಅದಕ್ಕಾಗಿ ಕೆಲವರು ಅಡ್ಡ ಮಾರ್ಗ ಹಿಡಿದಿದ್ದು, ನಕಲಿ ಟಿಸಿಯನ್ನು ಪಡೆದು ಬಿಎಲ್ ಒಗಳಿಗೆ ಕೊಡುತ್ತಿದ್ದಾರೆ. ಈ ಬಗ್ಗೆ ಬಿಜೆಪಿಯಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಹಾಗೆಯೇ ಹೋರಾಟವನ್ನು ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಂದೇಶ್ ಸ್ವಾಮಿ, ನಗರ ಪ್ರಧಾನಕಾರ್ಯದರ್ಶಿ ಸೋಮಸುಂದರ್, ಕೆ.ಸಿ. ರುದ್ರಮೂರ್ತಿ, ನಗರ ಉಪಾಧ್ಯಕ್ಷ ರಾಜೇಶ್, ನಗರ ವಕ್ತಾರ ಮೋಹನ್, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ರವಿ, ಸಂತೋಷ್ ಇದ್ದರು.

