Sunday, 24 Jan, 6.00 am ಉದಯವಾಣಿ

ಟಾಪ್ 40 ಸುದ್ದಿ
ನೂರಾರು ಕುಶಲ ಕರ್ಮಿಗಳಿಗೆ ವರದಾನ

ಕುಂದಾಪುರ: ಕರಕುಶಲ ಕಲೆಗೆ ಪ್ರೋತ್ಸಾಹ, ಕರಕುಶಲ ವಸ್ತುಗಳನ್ನು ತಯಾರಿಸು ವುದು, ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಿಂದ 5 ಕೋ.ರೂ. ವೆಚ್ಚದಲ್ಲಿ ಕುಂದಾಪುರದಲ್ಲಿ ಕರಕುಶಲ ವಸ್ತುಗಳ ತಯಾರಿಕೆ ಘಟಕ ನಿರ್ಮಾಣವಾಗಲಿದೆ. ಘಟಕ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ಜಾಗ ಗುರುತಿಸುವಿಕೆ ಪ್ರಕ್ರಿಯೆ ನಡೆಯುತ್ತಿದೆ. ಕುಂದಾಪುರ ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲಿ ಇರುವ ಕುಂಬಾರರು, ಕೈಮಗ್ಗ ನೇಕಾರರು, ಬಿದಿರಿನಿಂದ ವಸ್ತು ತಯಾರಿಸುವವರು, ಕಲ್ಲಿನ ವಿಗ್ರಹ ರಚನೆಮಾಡುವ ಕರಕುಶಲ ಕರ್ಮಿಗಳಿಗೆ ನೆರವಾಗುವ ಉತ್ಪಾದನ ಘಟಕ ರಚನೆಗೆ ನಿಗಮ ಮುಂದಾಗಿದೆ.

3-4 ಕಡೆ ಜಾಗ ಗುರುತು :

ಈ ಕರಕುಶಲ ವಸ್ತುಗಳ ಉತ್ಪಾದನ ಘಟಕವು ಸುಮಾರು 2 ಎಕರೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣವಾಗಲಿದೆ. ಇದಕ್ಕಾಗಿ ಈಗ ಜಾಗ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಬೀಜಾಡಿ ಹಾಗೂ ಕುಂಭಾಶಿ ಸೇರಿದಂತೆ ಇನ್ನು ಒಂದೆರಡು ಕಡೆಗಳಲ್ಲಿ ಜಾಗ ಗುರುತಿಸಿ, ಅಲ್ಲಿಗೆ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಧಕ – ಬಾಧಕಗಳನ್ನು ನೋಡಿಕೊಂಡು ಸೂಕ್ತ ಸ್ಥಳವನ್ನು 15 ದಿನದೊಳಗೆ ಗುರುತಿಸಲಾಗುವುದು ಎಂದು ರಾಘವೇಂದ್ರ ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಏನೆಲ್ಲ ವಸ್ತುಗಳು ? :

ಈ ಉತ್ಪಾದನ ಘಟಕದಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳು, ಮಣ್ಣಿನ ಅಲಂಕಾರಿಕಾ ವಸ್ತುಗಳು, ಬೆತ್ತದ ಪಿಠೊಪಕರಣಗಳು, ಬಿದಿರಿನ ಬುಟ್ಟಿಗಳು, ಮರದ ಕೆತ್ತನೆಗಳು, ಕಲ್ಲಿನಿಂದ ಮಾಡಿದ ವಿಗ್ರಹಗಳು ಸೇರಿದಂತೆ ಹತ್ತಾರು ಕರಕುಶಲ ವಸ್ತುಗಳು ಇಲ್ಲಿ ತಯಾರಾಗಲಿವೆ. ಈಗಿರುವ ಯೋಜನೆ ಪ್ರಕಾರ ಬೇರೆ ಬೇರೆ ಉತ್ಪನ್ನಗಳನ್ನು ತಯಾರಿಸುವ ಸುಮಾರು 100 ಮಂದಿಗೆ ಈ ಘಟಕದಲ್ಲಿ ಅವಕಾಶವಿದೆ. ಜಿಲ್ಲೆಯಲ್ಲಿರುವ ಕರಕುಶಲಕರ್ಮಿಗಳ ಬಗ್ಗೆ ಸರ್ವೇ ನಡೆಯುತ್ತಿದ್ದು,ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕುಶಲಕರ್ಮಿಗಳಿದ್ದರೆ ಬೇರೆ ಕಡೆ ಮತ್ತೂಂದು ಉತ್ಪಾದನ ಘಟಕ ಆರಂಭಿಸುವ ಯೋಚನೆ ನಿಗಮದ್ದು.

ಮಾರುಕಟ್ಟೆ ಹೇಗೆ ? :

ಕರಕುಶಲ ವಸ್ತುಗಳನ್ನು ಹೆಚ್ಚೆಚ್ಚು ಉತ್ಪಾದಿಸಿ, ಆ ಮೂಲಕ ಅದಕ್ಕೆ ಸೂಕ್ತ ಮಾರುಕಟ್ಟೆ ಒದಗಿಸುವುದು ನಿಗಮದ ಉದ್ದೇಶವಾಗಿದೆ. ಕುಂದಾಪುರದ ಕರಕುಶಲ ವಸ್ತುಗಳ ತಯಾರಿಕೆ ಘಟಕದಲ್ಲಿ ವಸ್ತುಗಳನ್ನು ತಯಾರಿಸಿ, ಅದರ ಮಾರುಕಟ್ಟೆಗಾಗಿ ಉಡುಪಿ ಸೇರಿದಂತೆ ರಾಜ್ಯದ ಬೇರೆ ಕಡೆಗಳಲ್ಲಿ ಕರಕುಶಲ ವಸ್ತುಗಳ ಮಾರಾಟ ಮಳಿಗೆಯನ್ನು ಸ್ಥಾಪಿಸುವ ಯೋಜನೆಯಿದೆ. ಮಾತ್ರವಲ್ಲದೆ ಕರಕುಶಲ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕವೂ ಮಾರಾಟಕ್ಕೆ ವ್ಯವಸ್ಥೆ ಒದಗಿಸುವ ಯೋಜನೆ ನಿಗಮದ್ದಾಗಿದೆ.

ಕರಕುಶಲ ಕರ್ಮಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಈ ಉತ್ಪಾದನ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ನಮ್ಮ ಕುಶಲ ಕರ್ಮಿಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಹಾಗೂ ಬೇಡಿಕೆ ಸೃಷ್ಟಿಸುವ ಯೋಜನೆ ಇದಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ 2 ಎಕರೆ ಜಾಗ ನೀಡಲು ಕೇಳಿದ್ದೇವೆ. 3-4 ಕಡೆಗಳಲ್ಲಿ ಜಾಗ ನೋಡಲಾಗಿದೆ. ಸರಕಾರಿ ಅಥವಾ ಖಾಸಗಿ ಜಾಗ ಎರಡನ್ನೂ ನೋಡಿ, 15 ದಿನದೊಳಗೆ ಜಾಗ ಅಂತಿಮ ಮಾಡಲಾಗುವುದು. -ಡಾ| ಬೇಳೂರು ರಾಘವೇಂದ್ರ ಶೆಟ್ಟಿ,, ಅಧ್ಯಕ್ಷರು, ಕರಕುಶಲ ಕರ್ಮಿಗಳ ಅಭಿವೃದ್ಧಿ ನಿಗಮ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top