Sunday, 11 Apr, 1.30 pm ಉದಯವಾಣಿ

ಟಾಪ್ 10 ಸುದ್ದಿ
'ನ್ಯಾಯಾಲಯದಲ್ಲಿಯೇ ತಕ್ಕ ಉತ್ತರ ನೀಡುತ್ತೇವೆ' : ಲಹರಿ ಸಂಸ್ಥೆ ವಿರುದ್ಧ ಹರಿಹಾಯ್ದ ರಿಷಬ್

ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾಂಗ್ ವಿಚಾರವಾಗಿ ತಮ್ಮ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ವಾರೆಂಟ್‍ಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತಾಡಿರುವ ಅವರು, ‘ಸಿನಿಮಾ ಬಿಡುಗಡೆ ಮಾಡುವ ಒಂದು ತಿಂಗಳ ಹಿಂದೆಯೇ ನಾವು ಹಾಡಿನ ಲಿರಿಕ್ಸ್ ಬಿಡುಗಡೆ ಮಾಡಿದ್ವಿ. ಹಾಡು ಬಿಡುಗಡೆ ಹಿಂದಿನ ದಿನವೇ ಸ್ಟೇ ತರಲು ಹೋಗಿದ್ದರು ಆದರೆ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದಿದ್ವಿ. ಪ್ರಕರಣ ದಾಖಲಿಸುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ’ ಎಂದು ಲಹರಿ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಬಿಡುಗಡೆ ಸಮಯದಲ್ಲಿ ‘ನಿಮ್ಮನ್ನು ನ್ಯಾಯಾಲಯಗಳಿಗೆ ಅಲೆಸುತ್ತೇವೆ’ ಎಂದು ನಮಗೆ ಬೆದರಿಕೆ ಹಾಕಿದ್ದರು. ರಾಜಿಗೆ ಬಂದಾಗಲೂ ಬೆದರಿಕೆ ಹಾಕಿದ್ದರು. ನಮಗೆ ಹಣದ ಆಮಿಷ ಕೂಡ ಒಡ್ಡಿದ್ದರು. ಈಗ ಈ ನೊಟೀಸ್ ಬೇರೆ. ನಾವು ಓಡಿಹೋಗೋರಲ್ಲ. ಕೋರ್ಟ್‌ನಲ್ಲಿ ಎಲ್ಲದಕ್ಕೂ ಉತ್ತರ ನೀಡುತ್ತೇವೆ’ ಎಂದು ಖಡಕ್ ಉತ್ತರ ನೀಡಿದ್ದಾರೆ ರಿಷಬ್ ಶೆಟ್ಟಿ.

ಆ ಹಾಡು ಬಿಡುಗಡೆ ಆದಾಗ, ನಮ್ಮ ಬಳಿ ರಾಜಿಗೆ ಬಂದಿದ್ದರು. ಪ್ರಶಾಂತ್ ಸಂಬರ್ಗಿಯೇ ರಾಜಿಗೆ ಬಂದಿದ್ದು. ನೀವು ಇಷ್ಟು ಹಣ ಕೊಡಬೇಕು ಎಂದರು ನಾವು ಒಪ್ಪಲಿಲ್ಲ. ನಾವೇ ಹಣ ಕೊಡ್ತೀವಿ ಹಾಡು ಬಿಟ್ಟುಬಿಡಿ ಎಂದರು ಅದಕ್ಕೂ ನಾವು ಒಪ್ಪದೆ, ಅದೇ ಹಾಡಿನ ಮಾದರಿಯಲ್ಲಿ ಬೇರೆ ಲಿರಿಕ್ಸ್ ಬಳಸಿ, ಬೇರೆ ವಾದ್ಯಗಳನ್ನು ಬಳಸಿ ಹಾಡು ಮಾಡಿದೆವು’.

ಇನ್ನು ನ್ಯಾಯಾಲಯದ ಎದುರು ಹಾಜರಾಗದಿರುವ ಬಗ್ಗೆ ಕಾರಣ ನೀಡಿರುವ ರಿಷಬ್ ಶೆಟ್ಟಿ, ಲಾಕ್‌ಡೌನ್‌ ಮುಂಚೆ ನಾವು ಆಫೀಸ್ ಬದಲಿಸಿದೇವು. ಹಾಗಾಗಿ ನೋಟೀಸ್‌ಗಳು ಹಳೆ ಅಡ್ರೆಸ್‌ಗೆ ಹೋಗಿವೆ. ಕಳೆದ ತಿಂಗಳು ರಕ್ಷಿತ್‌ ಶೆಟ್ಟಿಗೆ ನೊಟೀಸ್ ಸಿಕ್ಕಿದೆ, ಅವರು ಅದನ್ನು ಫಾಲೋ ಮಾಡುತ್ತಿದ್ದಾರೆ. ನಮಗೆ ಈಗ ವಿಷಯ ಗೊತ್ತಾಗಿದೆ. ನಾವು ನ್ಯಾಯಾಲಯದಲ್ಲಿಯೇ ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ’ ಎಂದಿದ್ದಾರೆ.

ವಿವಾದ ಏನು ?

'ಮಧ್ಯ ರಾತ್ರೀಲಿ ಹೈವೇ ರೋಡಲ್ಲಿ’ ಹಾಡಿನ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ ಹೊಂದಿದ್ದು, ಅದೇ ಹಾಡಿನ ಸಂಗೀತವನ್ನು ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಬಳಸಲಾಗಿದೆ. ‘ಕಿರಿಕ್ ಪಾರ್ಟಿ’ ಸಿನಿಮಾ ತಂಡವು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ ಲಹರಿ ಸಂಸ್ಥೆ ಪ್ರಕರಣ ದಾಖಲಿಸಿತ್ತು. ಅದೇ ವಿಚಾರವಾಗಿ ಈಗ ‘ಕಿರಿಕ್ ಪಾರ್ಟಿ’ ಚಿತ್ರ ತಂಡದ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top