ಲಂಡನ್: ಸುಮಾರು 30 ಕೋಟಿ ವರ್ಷಗಳಷ್ಟು ಹಳೆಯದಾದ, ಬಹುಬಾಹುಗಳನ್ನು ಹೊಂದಿರುವ ಸಮುದ್ರ ಜೀವಿಯೊಂದು 'ವಿಶ್ವದ ಅತ್ಯಂತ ಹಳೆಯ ಅಕ್ಟೋಪಸ್' ಎಂಬ ತನ್ನ ಹಿರಿಮೆಯನ್ನು ಕಳೆದುಕೊಂಡಿದೆ.
ಅಕ್ಟೋಪಸ್ ಎಂದು ಈವರೆಗೂ ಅಂದುಕೊಂಡಿದ್ದ ಈ ಜೀವಿ ಅಸಲಿಗೆ ಅಕ್ಟೋಪಸ್ ಅಲ್ಲವೇ ಅಲ್ಲ ಎಂಬ ಪುರಾವೆಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಇದುವರೆಗೆ ಅತ್ಯಂತ ಹಳೆಯ ಅಕ್ಟೋಪಸ್ ಎಂದು ದಾಖಲಾಗಿದ್ದ 'ಪೋಲ್ಸೆಪಿಯಾ ಮಜೋನೆನ್ಸಿಸ್' ಪಳೆಯುಳಿಕೆಯು ಅಸಲಿಗೆ ನಾಟಿಲಸ್ ಎಂಬ ಸಮುದ್ರ ಜೀವಿಯ ಸಂಬಂಧಿ ಎಂದು ಹೊಸ ಸಂಶೋಧನೆಯು ತೀರ್ಮಾನಿಸಿದೆ. ನಾಟಿಲಸ್ ಎಂಬುದು ಬಹುಬಾಹುಗಳು ಮತ್ತು ಹೊರಕವಚ ಎರಡನ್ನೂ ಹೊಂದಿರುವ ಒಂದು ಜಾತಿಯ ಮೃದ್ವಂಗಿ ಜೀವಿಯಾಗಿದೆ.
ಮಾನವನ ಅಂಗೈ ಗಾತ್ರದ ಈ ಜೀವಿಯ ಪಳೆಯುಳಿಕೆಯು ಡೈನೋಸಾರ್‌ಗಳ ಕಾಲಕ್ಕಿಂತಲೂ ಹಿಂದಿನ ಪಳೆಯುಳಿಕೆಗಳಿಗೆ ಪ್ರಸಿದ್ಧವಾಗಿರುವ ಅಮೆರಿಕದ ಇಲಿನಾಯ್ಸ್‌ನ ಮಾಜನ್ ಖಾರಿ ಪ್ರದೇಶದಲ್ಲಿ ಪತ್ತೆಯಾಗಿತ್ತು. 2000ನೇ ಇಸವಿಯಲ್ಲಿ ಪಳೆಯುಳಿಕೆ ತಜ್ಞರು ಇದನ್ನು ಅಕ್ಟೋಪಸ್ ಎಂದು ಗುರುತಿಸಿದಾಗ, ಅಷ್ಟಪಾದಿಗಳ ವಿಕಾಸದ ಬಗ್ಗೆ ಇದ್ದ ಕಲ್ಪನೆಗಳೇ ಬದಲಾಗಿದ್ದವು. ಏಕೆಂದರೆ, ಇದರ ನಂತರದ ಅತ್ಯಂತ ಹಳೆಯ ಅಕ್ಟೋಪಸ್ ಪಳೆಯುಳಿಕೆಯು ಕೇವಲ 9 ಕೋಟಿ ವರ್ಷಗಳಷ್ಟು ಮಾತ್ರವೇ ಹಳೆಯದಾಗಿದೆ.

