Dailyhunt
Operation Sindoor: 'ಉಗ್ರ' ಪ್ರತೀಕಾರಕ್ಕೆ ಈಗ 1 ವರ್ಷ

Operation Sindoor: 'ಉಗ್ರ' ಪ್ರತೀಕಾರಕ್ಕೆ ಈಗ 1 ವರ್ಷ

ಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿರುವ ಬೈಸರಣ್‌ ಕಣಿವೆಯ ಹುಲ್ಲುಗಾವಲಿನಲ್ಲಿ ಕಳೆದ ವರ್ಷ ಏ.22ರಂದು ನಡೆದ ಉಗ್ರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ "ಆಪರೇಷನ್‌ ಸಿಂದೂರ' ಹೆಸರಿನಲ್ಲಿ 4 ದಿನಗಳ ಕಾಲ ಉಗ್ರಕೇಂದ್ರಗಳ ಮೇಲೆ ಕಾರ್ಯಾಚರಣೆಯನ್ನು ಕೈಗೊಂಡಿತ್ತು.

ಭಾರತೀಯ ನಾರಿಯ ಸಿಂದೂರ ಅಳಿಸಿದ್ದಕ್ಕೆ ಪ್ರತೀಕಾರವಾಗಿ ನಡೆದ ಈ ಕಾರ್ಯಾಚರಣೆಗೆ ಈಗ 1 ವರ್ಷ. ಇದಾದ ಬಳಿಕ ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧ ಭಾರತ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತು. ಆಗಿದ್ದೇನು? ಇದರ ಪರಿಣಾಮಗಳೇನು? ಎಂಬುದರ ಸ್ಥೂಲ ನೋಟ ಇಲ್ಲಿದೆ.

ಕಾಶ್ಮೀರ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ:

ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕಾಶ್ಮೀರದ ಪ್ರಖ್ಯಾತ ಹುಲ್ಲುಗಾವಲಿನಲ್ಲಿ ಎಂದಿನಂತೆ 2025ರ ಏ.22ರಂದೂ ಪ್ರವಾಸಿಗರು ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಈ ವೇಳೆ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗೆ ಸೇರಿದ 5 ಉಗ್ರರು ಏಕಾಏಕಿ ದಾಳಿ ನಡೆಸಿ ರಕ್ತದ ಕೋಡಿ ಹರಿಸಿದರು. ಪ್ರವಾಸಿಗರ ಧರ್ಮ, ಕಲಿಮಾ ಹೇಳುವಂತೆ ಆಗ್ರಹಿಸಿ ಪ್ರವಾಸಿಗರನ್ನು ಕೊಂದರು. ಈ ಹೇಯ ಕೃತ್ಯದಲ್ಲಿ 26 ಮಂದಿ ಪ್ರಾಣ ತೆತ್ತರು. ಭಾರತದ ಗಡಿ ಭಾಗದಲ್ಲಿ ಸಾಕಷ್ಟು ಉಗ್ರ ಕೃತ್ಯಗಳನ್ನು ಎಸಗಿದ್ದ ಲಷ್ಕರ್‌ನ ಬೆಂಬಲಿತ ಉಗ್ರ ಗುಂಪೊಂದು ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿತ್ತು. ಈ ಕೃತ್ಯ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಉಗ್ರರ ವಿರುದ್ಧ 5 ದಿನ ಸೈನಿಕ ಕಾರ್ಯಾಚರಣೆ:

ಪಹಲ್ಗಾಮ್‌ನಲ್ಲಿ ಉಗ್ರ ಕೃತ್ಯದ ಮೂಲಕ ಭಾರತದ ಮಹಿಳೆಯರ ಸಿಂದೂರವನ್ನು ಅಳಿಸಿದ್ದಕ್ಕೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತೀಯ ಸೇನೆ "ಆಪರೇಷನ್‌ ಸಿಂದೂರ' ಹೆಸರಲ್ಲಿ 4 ದಿನಗಳ ಕಾಲ ಸೈನಿಕ ಕಾರ್ಯಾಚರಣೆಯನ್ನು ಕೈಗೊಂಡಿತ್ತು. 2025ರ ಮೇ 7ರಂದು ಭಾರತದ ಗಡಿ ಭಾಗದಲ್ಲಿರುವ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ವಾಯುದಾಳಿ ನಡೆಸಿತು. ಮೇ 8 ಮತ್ತು 9ರಂದು ಭಾರತದಿಂದ ಈ ದಾಳಿ ಮುಂದುವರಿಯಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಪ್ರತಿದಾಳಿ ಆರಂಭಿಸಿತು. ಪಾಕಿಸ್ತಾನದಲ್ಲಿರುವ ದೇಗುಲ, ಗುರುದ್ವಾರಗಳ ಮೇಲೂ ದಾಳಿ ನಡೆಸಿತ್ತು. ಮೇ 10ರಂದು ಭಾರತ ನಡೆಸಿದ ಬ್ರಹ್ಮೋಸ್‌ ದಾಳಿಯಲ್ಲಿ ಪಾಕಿಸ್ತಾನದ ಸೇನಾನೆಲೆಗಳು ನಾಶಗೊಂಡವು. ಮೇ 11ರಂದು ದಾಳಿ ನಿಲ್ಲಿಸುವಂತೆ ಕೋರಿ ಪಾಕಿಸ್ತಾನ ಭಾರತಕ್ಕೆ ಬೇಡಿಕೆ ಸಲ್ಲಿಸಿತು. ಬಳಿಕ 2 ಕಡೆಯ ದಾಳಿಗಳು ಮುಕ್ತಾಯಗೊಂಡವು.

ಪಾಕಿಸ್ತಾನದ‌ಲ್ಲಿದ್ದ 9 ಉಗ್ರ ತಾಣಗಳು ನಿರ್ನಾಮ:

ಈ ಸೈನಿಕ ಕಾರ್ಯಾಚರಣೆ ಸಮಯದಲ್ಲಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರ ನೆಲೆಗಳನ್ನು ಭಾರತ ಧ್ವಂಸಗೊಳಿಸಿತು. ಮುರಿದ್ಕೆಯಲ್ಲಿದ್ದ ತರಬೇತಿ ಕೇಂದ್ರ, ಬಹವಾಲ್‌ಪುರ್‌ನಲ್ಲಿದ್ದ ಜೈಶ್‌ ಮುಖ್ಯ ಕಚೇರಿ, ಪಠಾಣ್‌ಕೋಟ್‌ ದಾಳಿಯ ನಂಟಿರುವ ಸಿಯಾಲ್‌ಕೋಟ್‌ನ 3 ತಾಣಗಳು ಮತ್ತು ಪಿಒಕೆಯಲ್ಲಿರುವ ಕೋಟೆ ಸೇರಿದಂತೆ ಇತರ ತರಬೇತಿ ಕೇಂದ್ರಗಳನ್ನು ಭಾರತ ನಿರ್ನಾಮ ಮಾಡಿತು. ಈ ದಾಳಿಯಲ್ಲಿ ಲಷ್ಕರ್‌, ಜೈಶ್‌, ಹಿಜ್ಬುಲ್‌ ಮುಜಾಹಿದ್ದೀನ್‌ ಸೇರಿದಂತೆ ಇತರ ಉಗ್ರ ಸಂಘಟನೆಗಳ 6ಕ್ಕೂ ಹೆಚ್ಚು ಕಮಾಂಡರ್‌ಗಳು ಮತ್ತು 100ಕ್ಕೂ ಹೆಚ್ಚು ಉಗ್ರರನ್ನು ಈ ಕಾರ್ಯಾಚರಣೆಯಲ್ಲಿ ಭಾರತ ಕೊಂದಿತು. 12ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದರು.

ದಾಳಿ ನಿಲ್ಲಿಸುವಂತೆ ಪಾಕಿಸ್ತಾನದಿಂದ ದುಂಬಾಲು

ಉಗ್ರ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಸೇನೆಯೂ ಮೇ 8, 9ರಂದು ಪ್ರತಿದಾಳಿ ನಡೆಸಿತು. ಆದರೆ, ಭಾರತದ ದಾಳಿಯಿಂದಾಗಿ ಪಾಕಿಸ್ತಾನದ ವಾಯುನೆಲೆಗಳು ನಾಶಗೊಂಡ ಕಾರಣ ಹಾಗೂ ಬೆಂಬಲವಾಗಿದ್ದ ಉಗ್ರ ತಾಣಗಳೂ ಧ್ವಂಸವಾದ ಹಿನ್ನೆಲೆಯಲ್ಲಿ ಭಾರತದ ದಾಳಿಯನ್ನು ತಡೆಯಲಾಗದೆ ಕದನ ವಿರಾಮಕ್ಕೆ ದುಂಬಾಲು ಬಿದ್ದಿತು. ಮೇ 11ರಂದು ಉಭಯ ದೇಶಗಳ ಸೇನಾಧಿಕಾರಿಗಳ ನಡುವೆ ನಡೆದ ಒಪ್ಪಂದದಂತೆ ಯುದ್ಧಕ್ಕೆ ತೆರೆ ಬಿದ್ದಿತು. ಇದಾದ ಬಳಿಕ ಸ್ಪಷ್ಟನೆ ನೀಡಿದ ಭಾರತ ಸರ್ಕಾರ, ಪಾಕಿಸ್ತಾನ ಒಡ್ಡಿದ ಬೇಡಿಕೆಯನ್ನು ಆಧರಿಸಿ ಯುದ್ಧ ನಿಲ್ಲಿಸಲಾಯಿತು. ಇದರಲ್ಲಿ ಯಾವುದೇ ಒತ್ತಡ ತಂತ್ರ ಕೆಲಸ ಮಾಡಿಲ್ಲ. ಇದೊಂದು ಕಾರ್ಯತಂತ್ರದ ಹೆಜ್ಜೆ ಎಂದು ಹೇಳಿತ್ತು.

ಪಾಕಿಸ್ತಾನದ‌ 11 ವಾಯುನೆಲೆಗಳು ಧ್ವಂಸ:

ಪಾಕಿಸ್ತಾನ ಕೈಗೊಂಡ ಪ್ರತಿ ದಾಳಿಯಿಂದಾಗಿ ಹೆಚ್ಚಿನ ನಷ್ಟ ಪಾಕಿಸ್ತಾನಕ್ಕೆ ಉಂಟಾಯಿತು. ಬ್ರಹ್ಮೋಸ್‌ ಸೇರಿದಂತೆ ಭಾರತ ನಡೆಸಿದ ಶಕ್ತಿಶಾಲಿ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ 11 ವಾಯುನೆಲೆಗಳು ಧ್ವಂಸಗೊಂಡವು. ಪಾಕ್‌ಗೆ ನೆರವಾಗುತ್ತಿದ್ದ ಉಗ್ರರ ನೆಲೆಗಳು, ಲಾಂಚ್‌ಪ್ಯಾಡ್‌ಗಳು ನಿರ್ನಾಮಗೊಂಡವು. ಆಪರೇಷನ್‌ ಸಿಂದೂರದಲ್ಲಿ ಉಗ್ರ ನೆಲೆಗಳು ನಾಶವಾದ ಬಳಿಕ ಜಾಗತಿಕವಾಗಿ ಪಾಕಿಸ್ತಾನದ ಮರ್ಯಾದೆ ಹಾಳಾಯಿತು. ವಿಶ್ವಸಂಸ್ಥೆ ಸೇರಿದಂತೆ ಹಲವು ಜಾಗತಿಕ ಸಂಸ್ಥೆಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕಿದವು. ಅಲ್ಲದೆ, ಭಾರತದ ದಾಳಿಯನ್ನು ತಡೆಯಲು ವಿಫಲವಾಗಿದ್ದು, ಪಾಕಿಸ್ತಾನ ಎಷ್ಟು ದುರ್ಬಲ ಎಂಬುದನ್ನೂ ಹಾಗೂ ತಾನು ಎಷ್ಟು ಶಕ್ತಿಶಾಲಿ ಎಂಬುದನ್ನೂ ಭಾರತ ಜಗತ್ತಿಗೆ ತೋರಿಸಿತು.

ಸಿಂದೂರ ಬಳಿಕ ಪಾಕ್‌ಗೆ "ಸಿಂಧೂ' ಹೊಡೆತ:

ಆಪರೇಷನ್‌ ಸಿಂದೂರ ಹೊಡೆತದ ಬಳಿಕ ಸಿಂಧೂ ನದಿ ನೀರನ್ನು ತಡೆಗಟ್ಟುವ ಮೂಲಕ ಪಾಕಿಸ್ತಾನಕ್ಕೆ ಮತ್ತೂಂದು ಹೊಡೆತವನ್ನು ಭಾರತ ನೀಡಿತು. 1960ರಲ್ಲಿ ನಡೆಸಿದ್ದ ಸಿಂಧೂ ನದಿ ಒಪ್ಪಂದವನ್ನು ತಡೆಹಿಡಿಯುವ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಸಿಂಧೂ ನದಿಗೆ ತಡೆಯೊಡ್ಡಿತು. ಇದು ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿತು. ಜತೆಗೆ ತನ್ನೆಲ್ಲ ಸಾಮರ್ಥಯವನ್ನು ಬಳಸಿ ಜಾಗತಿಕವಾಗಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಿತು. ಭಾರತದ ದಾಳಿಯನ್ನು ರಷ್ಯಾ, ಬ್ರಿಟನ್‌, ಇಸ್ರೇಲ್‌ ಬಹಿರಂಗವಾಗಿ ಬೆಂಬಲಿಸಿ ಪಾಕ್‌ಗೆ ಛೀಮಾರಿ ಹಾಕಿದವು. ಬಳಿಕ ಗಡಿಯಲ್ಲಿ ಕಣ್ಗಾವಲನ್ನು ಹೆಚ್ಚು ಮಾಡಿತು. ಉಗ್ರಬೇಟೆಯ ಪ್ರಮಾಣವನ್ನು ಹೆಚ್ಚು ಮಾಡಿತು.

ಇನ್ನೂ ಮುಗಿದಿಲ್ಲ ಆಪರೇಷನ್‌ ಸಿಂದೂರ :

ಪಾಕಿಸ್ತಾನವು ಗಡಿ ಭಾಗದಲ್ಲಿ ಉಗ್ರ ಕೃತ್ಯವನ್ನು ನಿಲ್ಲಿಸುವವರೆಗೂ ಆಪರೇಷನ್‌ ಸಿಂದೂರ ಮುಂದುವರಿಯಲಿದೆ ಎಂದು ಭಾರತ ಸರ್ಕಾರ ಹಲವು ಭಾರಿ ಘೋಷಣೆ ಮಾಡಿದೆ. ಪಾಕಿಸ್ತಾನದಿಂದ ಯಾವುದೇ ಕುತಂತ್ರ ನಡೆದರೆ ಅದನ್ನು ಹೊಸಕುವ ಆಯ್ಕೆಯನ್ನು ಭಾರತ ಮುಕ್ತವಾಗಿರಿಸಿದೆ. ಭಾರತದಲ್ಲಿ ಹರಡಿಕೊಂಡಿರುವ ಉಗ್ರ ಜಾಲವನ್ನು ನಾಶ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ಸೇನಾಧಿಕಾರಿಗಳು, ರಕ್ಷಣಾ ಸಚಿವರು ಹಲವು ಬಾರಿ ಪುನರುಚ್ಚರಿಸಿದ್ದಾರೆ.

1 ವರ್ಷದಲ್ಲಿ ಭದ್ರತೆಗೆ ಹಲವು ಕ್ರಮ :

ಆಪರೇಷನ್‌ ಸಿಂದೂರದ ಬಳಿಕ 1 ವರ್ಷದಲ್ಲಿ ರಾಷ್ಟ್ರೀಯ ಭದ್ರತೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಗಡಿಭಾಗದಲ್ಲಿ ಭದ್ರತೆ ಹೆಚ್ಚಳ, ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಖರೀದಿ, ತಂತ್ರಜ್ಞಾನ ಆಧಾರಿತ ಸೇನಾ ಕೌಶಲ್ಯ ಹೆಚ್ಚಳವನ್ನು ಮಾಡಿದೆ. ಭಾರತ ಕೈಗೊಂಡ ಕ್ರಮಗಳ ಮಾಹಿತಿ ಇಲ್ಲಿದೆ.

2.ಗಡಿ ಮೂಲಸೌಕರ್ಯ ಹೆಚ್ಚಳ: ಪಾಕಿಸ್ತಾನದ ಗಡಿಭಾಗದಲ್ಲಿರುವ 1954ಕ್ಕೂ ಹೆಚ್ಚು ಹಳ್ಳಿಗಳನ್ನು ಗುರಿಯಾಗಿಸಿಕೊಂಡು

ಣಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಂಡಿತು. ರಸ್ತೆಗಳು, ಸುರಂಗಗಳನ್ನು ನಿರ್ಮಾಣ ಮಾಡಿತು. ಈ ಸುರಂಗಳನ್ನು ಟಿ-90 ಟ್ಯಾಂಕರ್‌ಗಳು ಹಾದು ಹೋಗುವಂತೆ ನಿರ್ಮಿಸಲಾಗಿದೆ.

2 ಆಧುನಿಕ ಶಸ್ತ್ರಾಸ್ತ್ರ ಖರೀದಿ: 2025-26ನೇ ಸಾಲಿನಲ್ಲಿ ಭಾರತ 2.38 ಲಕ್ಷಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿ ಮಾಡಿತು. ಇದರಲ್ಲಿ ಎಸ್‌-400, ಹಂಟರ್‌ ಡ್ರೋನ್‌, ಹಲವು ಮಾದರಿಯ ರೈಫಲ್‌, ಸರಕು ಸಾಗಣೆ ವಿಮಾನ, ಆರ್ಟಿಲರಿ ಗನ್‌ಗಳನ್ನು ಖರೀದಿ ಮಾಡಿತು.

3. ದೇಸೀ ಶಸ್ತ್ರಕ್ಕೆ ಮನ್ನಣೆ: ಕಳೆದೊಂದು ವರ್ಷದಲ್ಲಿ ದೇಸೀ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಭಾರತ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದೆ. ಇದಕ್ಕಾಗಿ 1.54 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಯುದ್ಧದಲ್ಲಿ ಬಳಕೆಯಾಗುವ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಸಂಪೂರ್ಣವಾಗಿ ದೇಸಿ ಕಂಪನಿಗಳಿಂದಲೇ ಖರೀದಿಸಿದೆ.

4. ತಂತ್ರಜ್ಞಾನಕ್ಕೆ ಹೆಚ್ಚು ಒತ್ತು: ಭವಿಷ್ಯದ ಯುದ್ಧಗಳಿಗಾಗಿ ತಂತ್ರಜ್ಞಾನ ಆಧಾರಿತ ಶಸ್ತ್ರಾಸ್ತ್ರಗಳಿಗೆ ಭಾರತ ಹೆಚ್ಚು ಒತ್ತು ನೀಡಿದೆ. ಎಐ ಆಧಾರಿತ ಕಣ್ಗಾವಲು, ಸೈಬರ್‌ ಭದ್ರತೆ, ಅತ್ಯಾಧುನಿಕ ಡ್ರೋನ್‌, ಎಐ ಆಧಾರಿತ ಕ್ಷಿಪಣಿಗಳನ್ನು ಖರೀದಿ ಮಾಡಲು ಮುಂದಾಗಿದೆ.

5. ಗಡಿ ಭಾಗದಲ್ಲಿ ಭದ್ರತೆ ಹೆಚ್ಚಳ: ಪಾಕಿಸ್ತಾನದ ಗಡಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಅಳವಡಿಕೆ, ನೈಟ್‌ ವಿಶನ್‌ ತಂತ್ರಜ್ಞಾನ, ತಂತ್ರಜ್ಞಾನ ಆಧರಿತ ಬೇಲಿ ನಿರ್ಮಾಣಗಳನ್ನು ಭಾರತ ಕೈಗೊಂಡಿದೆ. ಗಡಿ ಭಾಗದಲ್ಲಿನ ದಾಳಿ ತಡೆಗಟ್ಟಲು ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಭವಿಷ್ಯದ ಯುದ್ಧಕ್ಕೆ ಭಾರತ ಪೂರ್ಣ ಸಿದ್ಧ:

ಆಪರೇಷನ್‌ ಸಿಂದೂರ ಕಾರ್ಯಾಚರಣೆಯ ಬಳಿಕ ಭಾರತವು ಭವಿಷ್ಯದ ದಾಳಿಗಳನ್ನು ಎದುರಿಸುವುದಕ್ಕೆ ಸಂಬಂಧಿಸಿದಂತೆ ಪೂರ್ಣ ಸಿದ್ಧತೆಯನ್ನು ನಡೆಸಿದೆ. ಈ ಸೈನಿಕ ಕಾರ್ಯಾಚರಣೆಯ ಬಳಿಕ ಭಾರತದ ಸಿದ್ಧತೆಯ ಮಾಹಿತಿ ಇಲ್ಲಿದೆ.

1. ಸಂಯೋಜಿತ ಸೈನ್ಯ ಸಿದ್ಧತೆ: ಭವಿಷ್ಯದ ಯುದ್ಧಗಳಲ್ಲಿ ಭಾರತದ ಸೇನಾಪಡೆ, ನೌಕಾಪಡೆ ಮತ್ತು ವಾಯುದಳಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಕುರಿತಾಗಿ ಹಲವು ಅಭ್ಯಾಸಗಳನ್ನು ಭಾರತ ನಡೆಸಿತು. ಇದಕ್ಕಾಗಿ ಪ್ರತ್ಯೇಕ ಕಾರ್ಯತಂತ್ರಗಳನ್ನು ರೂಪಿಸಿತು.

2. ವಾಯು ರಕ್ಷಣಾ ವ್ಯವಸ್ಥೆ ಸುಧಾರಣೆ: ಗಡಿಭಾಗದಲ್ಲಿ ನಡೆಯುವ ಕ್ಷಿಪಣಿ ದಾಳಿಯನ್ನು ತಡೆಗಟ್ಟಲು ವಾಯು ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಿತು. ಇದಕ್ಕಾಗಿ ಎಸ್‌-400, ಆಕಾಶ್‌ ಕ್ಷಿಪಣಿಗಳ ನಿಯೋಜನೆ ಹೆಚ್ಚು ಮಾಡಿತು.

3. ನೌಕಾಪಡೆಗೂ ಸುಧಾರಿತ ಅಸ್ತ್ರ: ಅರಬ್ಬಿ ಸಮುದ್ರದಲ್ಲಿ ನಿರ್ಣಾಯಕ ಪ್ರದೇಶಗಳಲ್ಲಿ ಯುದ್ಧ ನೌಕೆಗಳನ್ನು ನಿಯೋಜನೆ ಮಾಡಿತು. ಸಮುದ್ರ ಸೀಮೆಗಳನ್ನು ಕಾವಲು ಕಾಯುವ ಕೆಲಸವನ್ನು ಹೆಚ್ಚು ಮಾಡಿತು. ನೌಕಾಪಡೆಗಾಗಿ ಸುಧಾರಿತ ಅಸ್ತ್ರಗಳನ್ನು ಪೂರೈಕೆ ಮಾಡಿತು.

4. ಆಂತರಿಕ ಭದ್ರತೆ ಹೆಚ್ಚಳ: ಭವಿಷ್ಯದಲ್ಲಿ ಯುದ್ಧವಾದರೆ ಆಂತರಿಕವಾಗಿ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳಲು ಭದ್ರತೆಯನ್ನು ಹೆಚ್ಚು ಮಾಡಲಾಯಿತು. ಯುದ್ಧದ ಸಮಯದಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಜನರಿಗೆ ಅರ್ಥಮಾಡಿಸಲು ತರಬೇತಿಗಳನ್ನು ನೀಡಲಾಯಿತು.

5. ರಾಜತಾಂತ್ರಿಕ ನಿಲುವು: ಪಾಕಿಸ್ತಾನದ ಕೃತ್ಯಕ್ಕೆ ಸಂಬಂಧಿಸಿದಂತೆ ಮಿತ್ರ ರಾಷ್ಟ್ರಗಳ ಜತೆ ತನ್ನ ನಿಲುವನ್ನು ವಿವರಿಸುವ ಮೂಲಕ ಭಾರತ ರಾಜತಾಂತ್ರಿಕವಾಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿತು. ಗಡಿಭಾಗದಲ್ಲಿ ಉಗ್ರ ಕೃತ್ಯಗಳಿಗೆ ತಡೆಯೊಡ್ಡಿತು.

-ಗಣೇಶ್‌ ಪ್ರಸಾದ್‌

Dailyhunt
Disclaimer: This content has not been generated, created or edited by Dailyhunt. Publisher: Udayavani