ನವದೆಹಲಿ:ಪಾಕಿಸ್ಥಾನ ಮೂಲದ ಹ್ಯಾಂಡ್ಲರ್ ಹಾಗೂ ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ನಿರ್ದೇಶನದ ಮೇರೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಗ್ರ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ನಾಲ್ವರನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಶುಭದೀಪ್ ಸಿಂಗ್ (23), ಗುರ್ಜಂತ್ ಸಿಂಗ್ (22), ಸಾಜನ್ ಸಿಂಗ್ (28) ಹಾಗೂ ಗಗನ್‌ಪ್ರೀತ್ (24) ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರು ಪಂಜಾಬ್ ಮೂಲದವರಾಗಿದ್ದು, ಒಬ್ಬನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ.
ವಿದೇಶಿ ಪಿಸ್ತೂಲ್,ಗುಂಡುಗಳ ವಶ
ಬಂಧಿತರಿಂದ ಎರಡು ವಿದೇಶಿ ತಯಾರಿನ ಪಿಸ್ತೂಲ್‌ಗಳು, ಒಂಬತ್ತು ಜೀವಂತ ಗುಂಡುಗಳು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಗುಂಪಿನ ಚಲನವಲನದ ಬಗ್ಗೆ ದೊರೆತ ಖಚಿತ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ. ಎಸಿಪಿ ವಿವೇಕ್ ಕುಮಾರ್ ತ್ಯಾಗಿ ಅವರ ನೇತೃತ್ವದಲ್ಲಿ ದೆಹಲಿ ಹಾಗೂ ಪಂಜಾಬ್‌ನ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಪಂಜಾಬ್ ಮತ್ತು ದೆಹಲಿಯಲ್ಲಿ ಬಂಧನ
ತನಿಖೆಯ ವೇಳೆ ಮೊದಲು ಅಮೃತಸರದಲ್ಲಿ ಶುಭದೀಪ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಆತ ನೀಡಿದ ಮಾಹಿತಿ ಪ್ರಕಾರ ವಿದೇಶಿ ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಹಲವು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ನಂತರದ ತನಿಖೆಯಲ್ಲಿ ಲಭಿಸಿದ ಮಾಹಿತಿಯ ಆಧಾರದ ಮೇಲೆ ಗುರ್ಜಂತ್ ಸಿಂಗ್ ಹಾಗೂ ಸಾಜನ್ ಸಿಂಗ್ ಅವರನ್ನು ಪಂಜಾಬ್‌ನ ವಿವಿಧ ಸ್ಥಳಗಳಲ್ಲಿ ಬಂಧಿಸಲಾಗಿದೆ. ನಾಲ್ಕನೇ ಆರೋಪಿ ಗಗನ್‌ಪ್ರೀತ್‌ನನ್ನು ಏಪ್ರಿಲ್ 24ರಂದು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ಥಾನ ಮೂಲದ ಹ್ಯಾಂಡ್ಲರ್‌ಗಳ ಸಂಪರ್ಕ
ವಿಚಾರಣೆ ವೇಳೆ ಆರೋಪಿಗಳು ಪಾಕಿಸ್ಥಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ಭದ್ರತಾ ಸಂಸ್ಥೆಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ವಿದೇಶಿ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕ ಸಾಧಿಸಲಾಗುತ್ತಿತ್ತು ಎನ್ನಲಾಗಿದೆ.
ಅಂತಾರಾಷ್ಟ್ರೀಯ ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿತ್ತು ಎಂಬ ಆರೋಪವನ್ನೂ ಪೊಲೀಸರು ಮಾಡಿದ್ದಾರೆ.
ದೆಹಲಿಯ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ
ಆರೋಪಿ ಗಗನ್‌ಪ್ರೀತ್ ದೆಹಲಿಯ ಪೊಲೀಸ್ ಠಾಣೆಗಳು ಹಾಗೂ ಧಾರ್ಮಿಕ ಸ್ಥಳಗಳ ಕುರಿತು ಪೂರ್ವ ಪರಿಶೀಲನೆ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.ರಾಜಧಾನಿಯಲ್ಲಿ ಗುಂಡಿನ ದಾಳಿ ನಡೆಸುವ ಹೊಣೆಗಾರಿಕೆಯನ್ನು ಆತನಿಗೆ ನೀಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.ಇದಲ್ಲದೆ, ಕಾರ್ಯಾಚರಣೆಯ ಯೋಜನೆಗಾಗಿ ದೆಹಲಿಯ ಪೊಲೀಸ್ ಸ್ಥಾಪನೆಗಳು ಹಾಗೂ ಇತರ ಸೂಕ್ಷ್ಮ ಪ್ರದೇಶಗಳ ವಿಡಿಯೊಗಳನ್ನು ಚಿತ್ರೀಕರಿಸುವಂತೆ ಪಾಕಿಸ್ಥಾನ ಮೂಲದ ಹ್ಯಾಂಡ್ಲರ್‌ಗಳು ಸೂಚನೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೆಯೂ ಪ್ರಕರಣಗಳು
ಶುಭದೀಪ್ ಸಿಂಗ್ ಅಲಿಯಾಸ್ ವಿಶಾಲ್ ಭಾರತ-ಪಾಕಿಸ್ಥಾನ ಗಡಿಯ ಸಮೀಪದ ತರಣ್ ತಾರಣ್ ಜಿಲ್ಲೆಯ ನಿವಾಸಿಯಾಗಿದ್ದು, ಈ ಹಿಂದೆ ಮಾದಕ ವಸ್ತುಗಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗುರ್ಜಂತ್ ಸಿಂಗ್ ಅಲಿಯಾಸ್ ರಿಷಿ ಕೂಡ ತರಣ್ ತಾರಣ್ ಜಿಲ್ಲೆಯವನಾಗಿದ್ದು, ಆತನ ಸಂಬಂಧಿ ಸಾಜನ್ ಸಿಂಗ್ ಅಲಿಯಾಸ್ ಹನಿ ಅಮೃತಸರ ನಿವಾಸಿಯಾಗಿದ್ದಾನೆ. ಇವರಿಬ್ಬರ ವಿರುದ್ಧವೂ ಈ ಹಿಂದೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.
ಪಂಜಾಬ್‌ನ ಫತೇಗಢ ಸಾಹಿಬ್ ನಿವಾಸಿಯಾಗಿರುವ ಗಗನ್‌ಪ್ರೀತ್ ಸಾಮಾಜಿಕ ಜಾಲತಾಣಗಳ ಮೂಲಕ ಪಾಕಿಸ್ಥಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

