Dailyhunt Logo
  • Light mode
    Follow system
    Dark mode
    • Play Story
    • App Story
ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಕಂದಕಕ್ಕೆ ಉರುಳಿದ ಬಸ್;  40 ಮಂದಿ ದುರ್ಮರಣ!

ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಕಂದಕಕ್ಕೆ ಉರುಳಿದ ಬಸ್; 40 ಮಂದಿ ದುರ್ಮರಣ!

ಪೇಶಾವರ: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುಂಖ್ವಾದಲ್ಲಿ ಶುಕ್ರವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಬಸ್ಸೊಂದು ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 40 ಜನರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲೂಚಿಸ್ತಾನದ ಶೇರಾನಿ ಜಿಲ್ಲೆಯನ್ನು ದಾಟಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಗುಡ್ಡಗಾಡು ಪ್ರದೇಶಕ್ಕೆ ಪ್ರವೇಶಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಬಸ್ ಪೇಶಾವರ ಕಡೆಗೆ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯ ಆಡಳಿತ ಮತ್ತು ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ.

8 ಜನರ ರಕ್ಷಣೆ; ಬ್ರೇಕ್ ವೈಫಲ್ಯದ ಶಂಕೆ
ಘಟನೆ ನಡೆದ ತಕ್ಷಣವೇ ಸ್ಥಳೀಯ ಆಡಳಿತ ಮತ್ತು ರಕ್ಷಣಾ ಪಡೆಗಳು ಧಾವಿಸಿದ್ದು, ಇದುವರೆಗೆ ಎಂಟು ಜನರನ್ನು ಸುರಕ್ಷಿತವಾಗಿ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಪ್ರದೇಶವು ಗುಡ್ಡಗಾಡು ಮತ್ತು ಕಡಿದಾದ ತಿರುವುಗಳಿಂದ ಕೂಡಿದ್ದು, ಚಲಿಸುತ್ತಿದ್ದ ಬಸ್‌ನ ಬ್ರೇಕ್ ವೈಫಲ್ಯಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ಅಪಘಾತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಘಟನೆಗೆ ನಿಖರ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದುವರಿದ ಕಂದಕದ ಕಂಟಕ!
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪರ್ವತ ಪ್ರದೇಶಗಳಲ್ಲಿ ಇಂತಹ ರಸ್ತೆ ಅಪಘಾತಗಳು ಮತ್ತು ಪ್ರಾಣಹಾನಿಗಳು ಸಾಮಾನ್ಯ ಎಂಬಂತಾಗಿದೆ. ಇಲ್ಲಿನ ಕಠಿಣ ಭೌಗೋಳಿಕ ಪರಿಸ್ಥಿತಿ, ಸತತವಾಗಿ ಬದಲಾಗುವ ಹವಾಮಾನ ವೈಪರೀತ್ಯ ಮತ್ತು ವಾಹನ ಚಾಲಕರು ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವುದರಿಂದ ಇಂತಹ ಭೀಕರ ದುರಂತಗಳು ಸಂಭವಿಸುತ್ತಲೇ ಇವೆ ಎಂದು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani