ಇಸ್ಲಾಮಾಬಾದ್ (ಪಾಕಿಸ್ತಾನ): ಇರಾನ್ - ಅಮೆರಿಕ, ಇಸ್ರೇಲ್ ನಡುವಿನ ಯುದ್ಧದಿಂದಾಗಿ ವಿಶ್ವದೆಲ್ಲೆಡೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆ ತಲೆದೋರಿದರೆ, ಯುದ್ಧದ ಬಿಸಿ ಪಾಕಿಸ್ತಾನಕ್ಕೆ ಇಂಧನದ ಬಿಕ್ಕಟ್ಟು ತೀವ್ರವಾಗಿ ಉಂಟಾಗಿದೆ. ಇದರಿಂದಾಗಿ ಪಾಕಿಸ್ತಾನ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ.
ಹೊರ್ಮುಜ್ ಜಲಸಂಧಿ ಮುಚ್ಚಿರುವುದೇ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಅಲ್ಲಿನ ಸರ್ಕಾರದ ಹೊಸ ಆದೇಶದಂತೆ, ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯನ್ನು ಶೇ.43ರಷ್ಟು ಏರಿಕೆ ಮಾಡಲಾಗಿದೆ. ಇದರೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯ 321.17 ಪಾಕಿಸ್ತಾನಿ ರೂಪಾಯಿಯಿಂದ 458.40 ಪಾಕಿಸ್ತಾನಿ ರೂಪಾಯಿ ಆಗಿದೆ. ಡೀಸೆಲ್ ದರದಲ್ಲೂ ಶೇ. 55ರಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 335.86 ಪಾಕಿಸ್ತಾನಿ ರೂಪಾಯಿ ಇದ್ದ ಬೆಲೆಯೂ 520.35 ಪಾಕಿಸ್ತಾನಿ ರೂಪಾಯಿ ಆಗಿದೆ. ಈ ಪರಿಷ್ಕೃತ ದರಗಳು ಶುಕ್ರವಾರದಿಂದಲೇ ತಕ್ಷಣ ಜಾರಿಗೆ ಬಂದಿದ್ದು, ಜನಸಾಮಾನ್ಯರ ಮೇಲೆ ಭಾರಿ ಹೊರೆಯಾಗಿ ಪರಿಣಮಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಇಂಧನ ಸಚಿವ ಅಲಿ ಪರ್ವೇಕ್ ಮಲಿಕ್, ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಇಂಧನ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಸಿಲಿಂಡರ್ ಬೆಲೆಯೂ ಏರಿಕೆ:
ಇಂಧನ ಬೆಲೆ ಏರಿಕೆ ವಿರೋಧಿಸಿ ಕರಾಚಿಯಲ್ಲಿ ನೂರಾರು ವಾಹನ ಸವಾರರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪೆಟ್ರೋಲ್-ಡೀಸೆಲ್ ಜತೆಗೆ ಸಿಲಿಂಡರ್ ಬೆಲೆ ಏರಿಕೆಯೂ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದ ದಿನಗೂಲಿ ಕಾರ್ಮಿಕರ ಮೇಲೆ ದುಷ್ಪರಿಣಾಮ ಬೀರಿದೆ ಎಂದು ನಾಗರಿಕರೊಬ್ಬರು ಬೇಸರ ಹೊರಹಾಕಿದ್ದಾರೆ.
ಪಾಕಿಸ್ತಾನವು ಮುಖ್ಯವಾಗಿ ಸೌದಿ ಅರೇಬಿಯಾ ಮತ್ತು ಯುಎಇಯಿಂದ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಿಸುವ ತೈಲ ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಪಾಕಿಸ್ತಾನ ಸರ್ಕಾರವು ಕಳೆದ ತಿಂಗಳಷ್ಟೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳನ್ನು ಸುಮಾರು ಶೇ.20 ರಷ್ಟು ಏರಿಕೆ ಮಾಡಿತ್ತು.
ಭಾರತದ ರೂಪಾಯಿಗೆ ಹೋಲಿಸಿದರೆ ಎಷ್ಟು ಏರಿಕೆ?
ಪ್ರಸಕ್ತ ಪಾಕಿಸ್ತಾನದ ರೂಪಾಯಿ ಮೌಲ್ಯ ಭಾರೀ ಕುಸಿತ ಕಂಡಿದ್ದು, ಭಾರತದ 1 ರೂಪಾಯಿಗೆ ಪಾಕಿಸ್ತಾನದ 3 ರೂಪಾಯಿ ಸಮ. ಆ ಲೆಕ್ಕಾಚಾರದಲ್ಲಿ ನೋಡಿದರೆ ಪಾಕಿಸ್ತಾನದಲ್ಲಿ ಪ್ರತಿ ಲೀಟರ್‌ಗೆ 106.92 ರೂ. ಇದ್ದ ಪೆಟ್ರೋಲ್ ಬೆಲೆ 45.68ರೂ. ಹೆಚ್ಚಳವಾಗಿ 152.61 ತಲುಪಿದೆ. 111.81 ರೂ. ಇದ್ದ ಡೀಸೆಲ್ ಬೆಲೆ 61.42 ರು. ಏರಿಕೆಯಾಗಿ 173.23 ರೂ.ತಲುಪಿದೆ.

