Dailyhunt
Pakistan: ನಿಗೂಢ ಸಾವಿನ ಸರಣಿ-ಅಪಘಾತದಲ್ಲಿ ಜೈಷ್‌ ಟಾಪ್‌ ಕಮಾಂಡರ್‌ ಸಲ್ಮಾನ್‌ ಸಾವು

Pakistan: ನಿಗೂಢ ಸಾವಿನ ಸರಣಿ-ಅಪಘಾತದಲ್ಲಿ ಜೈಷ್‌ ಟಾಪ್‌ ಕಮಾಂಡರ್‌ ಸಲ್ಮಾನ್‌ ಸಾವು

ಸ್ಲಾಮಾಬಾದ್:‌ ಕುಖ್ಯಾತ ಭಯೋತ್ಪಾದಕರು ಪಾಕಿಸ್ತಾನದಲ್ಲಿ ನಿಗೂಢವಾಗಿ ಸಾವನ್ನಪ್ಪುವ ಸರಣಿ ಪ್ರಕರಣ ಮುಂದುವರಿದಿದ್ದು, ಇದೀಗ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಕಮಾಂಡರ್‌ ಮೌಲಾನಾ ಸಲ್ಮಾನ್‌ ಅಜರ್‌ ನಿಗೂಢವಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಪಾಕಿಸ್ತಾನದ ಬಹಾವಲ್‌ ಪುರ್ ನಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜೈಷ್‌ ಟಾಪ್‌ ಕಮಾಂಡರ್‌ ಸಲ್ಮಾನ್‌ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ಜೈಷ್‌ ಭಯೋತ್ಪದಕ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ನ ನಿಕಟವರ್ತಿಯಾಗಿರುವ ಸಲ್ಮಾನ್‌ ಭಾರತದಲ್ಲಿ ನಡೆಸಿದ ಹಲವಾರು ದಾಳಿಯಲ್ಲಿ ಶಾಮೀಲಾಗಿದ್ದ.

2001ರಲ್ಲಿ ನಡೆದ ಸಂಸತ್‌ ಮೇಲಿನ ದಾಳಿ ಹಾಗೂ 2019ರ ಪುಲ್ವಾಮ್‌ ದಾಳಿಯಲ್ಲಿ ಸಲ್ಮಾನ್‌ ಶಾಮೀಲಾಗಿದ್ದ. ಭಾರತೀಯ ವೈಮಾನಿಕ ಪಡೆಯ ಆಪರೇಶನ್‌ ಸಿಂದೂರ್ ದಾಳಿಯಲ್ಲಿ ಸಲ್ಮಾನ್‌ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.

ಬಹಾವಲ್‌ ಪುರ್‌ ನಲ್ಲಿ ನಡೆದ ಉಗ್ರ ಸಲ್ಮಾನ್‌ ಅಂತ್ಯಕ್ರಿಯೆಯಲ್ಲಿ ಪಾಕ್‌ ನ ಐಎಸ್‌ ಐನ ಹಲವು ಅಧಿಕಾರಿಗಳು ಪಾಲ್ಗೊಂಡಿರುವುದಾಗಿ ವರದಿ ತಿಳಿಸಿದೆ. ಸಲ್ಮಾನ್‌ ಸಾವಿಗೂ ಎರಡೂ ದಿನದ ಮೊದಲು ಲಷ್ಕರ್‌ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕ ಶೇಕ್‌ ಯೂಸೂಫ್‌ ಅಫ್ರಿದಿಯನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಕಳೆದ ವರ್ಷ ಜೈಷ್‌ ಸಂಘಟನೆಯ ಮೌಲಾನಾ ಅಬ್ದುಲ್‌ ಅಝೀಜ್‌ ಅಜರ್‌ ಕೂಡಾ ನಿಗೂಢವಾಗಿ ಸಾವನ್ನಪ್ಪಿದ್ದ. 2026ರ ಏಪ್ರಿಲ್‌ 16ರಂದು ಲಷ್ಕರ್‌ ಸ್ಥಾಪಕ ಸದಸ್ಯ ಮೌಲಾನಾ ಅಮೀರ್‌ ಹಂಝಾ ಕೂಡಾ ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ. ಅಲ್ಲದೇ ಕಳೆದ ವರ್ಷ ಪಾಕ್‌ ನಲ್ಲಿ ಲಷ್ಕರ್‌ ಉಗ್ರ ಅಬು ನಟಾಲ್‌ ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಟ್ಟು ಹತ್ಯೆಗೈದಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani