ಪರ್ತಗಾಳಿ(ಗೋವಾ): ಕಾಣಕೋಣದ ಪರ್ತಗಾಳಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರ ಚಾತುರ್ಮಾಸ ವ್ರತದ ಸಮಾರೋಪ ಅಂಗವಾಗಿ ರವಿವಾರ ದಿಗ್ವಿಜಯ ಮಹೋತ್ಸವ ಸಂಪನ್ನಗೊಂಡಿತು.
ಗೋವಾದ ವೈವಿಧ್ಯಮಯ ಕಲೆ, ಸಂಸ್ಕೃತಿ, ನೃತ್ಯ ಹಾಗೂ ವೈಭವವನ್ನು ಅನಾವರಣಗೊಳಿಸಿದ ಈ ದಿಗ್ವಿಜಯ ಮಹೋತ್ಸವ ಶ್ರೀಮಠದ ಪರಂಪರೆಯಲ್ಲಿ ಐತಿಹಾಸಿಕ ಕ್ಷಣವಾಗಿ ದಾಖಲಾಯಿತು.
ಕರ್ನಾಟಕ, ಮಹಾರಾಷ್ಟ್ರ, ಕೇರಳ ಹಾಗೂ ಹೈದರಾಬಾದ್ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ಪುಷ್ಪಾಲಂಕೃತ ದಿವ್ಯರಥದಲ್ಲಿ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಶ್ರೀಪಾದರ ಮೆರವಣಿಗೆಯು ಶ್ರೀರಾಮನ ಕಂಚಿನ ಪ್ರತಿಮೆ ಇರುವ ಮಾರ್ಗದ ಮೂಲಕ ಮಾರುತಿ ಗುಡಿಯವರೆಗೆ ಸಾಗಿತು. ಅಲ್ಲಿ ನಡೆದ ಗೋವಾದ ಪಾರಂಪರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು. ಕಾಣಕೋಣದ 11 ಮಂದಿರಗಳ ವತಿಯಿಂದ 11 ವಿಶೇಷ ದ್ವಾರಗಳನ್ನು ನಿರ್ಮಿಸಲಾಗಿದ್ದು, ಪ್ರತಿಯೊಂದು ದ್ವಾರದ ಬಳಿಯೂ ಶ್ರೀಗಳಿದ್ದ ರಥ ಗೌರವ ಸ್ವೀಕರಿಸಿತು. ಈ ವೇಳೆ ಭಕ್ತರ ಜೈಘೋಷ ಮುಗಿಲು ಮುಟ್ಟಿತ್ತು.
ಈ ಮೆರವಣಿಗೆಯುದ್ದಕ್ಕೂ ರಾಮಸೇವಿಕೆಯರ ಪೂರ್ಣಕುಂಭ ಸ್ವಾಗತ, ಭಜನೆ, ಕೀರ್ತನೆ, ಗಿಂಡಿ ನೃತ್ಯ, ಕರಾವಳಿಯ ಸಾಂಸ್ಕೃತಿಕ ಮೆರಗು ಹೆಚ್ಚಿಸುವ ಹುಲಿವೇಷ, ಡೊಳ್ಳು ಕುಣಿತ, ವಾದ್ಯಗಳು ಗಮನಸೆಳೆದವು.

