ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನವದೆಹಲಿಯಲ್ಲಿ ನಡೆಸುತ್ತಿರುವ 39 ನೇ ಚಾತುರ್ಮಾಸ್ಯ ವ್ರತದ ಸಂದರ್ಭ ಶ್ರೀ ಕೃಷಾಷ್ಟಮಿ ಉತ್ಸವವನ್ನು ವಿಶೇಷವಾಗಿ ನಡೆಸಲು ಸಂಕಲ್ಪಿಸಲಾಗಿದ್ದು,ಸೆ .3 ರಂದು (ಗುರುವಾರ) ಸಂಜೆ 6 ಕ್ಕೆ ಸ್ವಾಮೀಜಿಯವರ ಸಾನಿಧ್ಯದಲ್ಲಿ ಜನ್ಮಾಷ್ಟಮಿ ಕಾರ್ಯಕ್ರಮಗಳ ಉದ್ಘಾಟನೋತ್ಸವ ನಡೆಯಲಿದೆ.
ಕೇಂದ್ರ ಸಚಿವರಾದ ಹರ್ಷ ಮಲ್ಹೋತ್ರ , ಶೋಭಾ ಕರಂದ್ಲಾಜೆ , ಸಂಸದರಾದ ಮನೋಜ್ ತಿವಾರಿ , ಮೀನಾಕ್ಷಿ ಲೇಖಿ , ಶಾಸಕ ಅನಿಲ್ ಶರ್ಮ, ಚಾತುರ್ಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಅಲೋಕ್ ಕುಮಾರ್ ಜಿ., ಪ್ರಧಾನ ಕಾರ್ಯದರ್ಶಿ ಡಾ ವರಖೇಡಿ ಶ್ರೀನಿವಾಸ ಆಚಾರ್ಯ ಮೊದಲಾದವರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಹಿರಿಯಡಕ ಮೂಲದ ಹಿರಿಯ ಐಎಎಸ್ ಅಧಿಕಾರಿ ಹಾಗೂ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಅವರಿಗೆ ಜನ್ಮಾಷ್ಟಮಿ ಪುರಸ್ಕಾರ ದೊಂದಿಗೆ ಸಮ್ಮಾನ ನಡೆಯಲಿದೆ.ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

