Monday, 16 Nov, 5.45 am ಉದಯವಾಣಿ

ಟಾಪ್ 10 ಸುದ್ದಿ
ಪೆಟ್ರೋಲ್‌-ಡೀಸೆಲ್‌ ಕಾರಿಗೆ ಟಾಟಾ

2030ರಿಂದ ತಮ್ಮ ದೇಶದಲ್ಲಿ ಹೊಸ ಪೆಟ್ರೋಲ್‌-ಡೀಸೆಲ್‌ ಕಾರ್‌ಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಘೋಷಿಸಿದ್ದಾರೆ. ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಇಂಥ ಹೆಜ್ಜೆ ಅಗತ್ಯವಾಗಿದ್ದು, ವಿದ್ಯುತ್‌ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದೂ ಹೇಳಿದ್ದಾರೆ. ಈಗಾಗಲೇ ಕೆಲವು ರಾಷ್ಟ್ರಗಳು ಇಂಥ ಗುರಿ ಹಾಕಿಕೊಂಡರೆ, ಭಾರತದಂಥ ಬೃಹತ್‌ ಜನಸಂಖ್ಯೆಯ ರಾಷ್ಟ್ರಗಳಿಗೆ ಇದು ಕಡುಕಷ್ಟದ ಸವಾಲು. ಯಾವ ರಾಷ್ಟ್ರಗಳ ನಿರ್ಧಾರ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ನಾರ್ವೆ-2025: ಮುಂದಿನ 5 ವರ್ಷಗಳಲ್ಲಿ ನಾರ್ವೆ ಪೆಟ್ರೋಲ್‌-ಡೀಸೆಲ್‌ ವಾಹನಗಳಿಂದ ಮುಕ್ತವಾಗುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಾದ ನೀತಿಗಳನ್ನೂ ಜಾರಿ ಮಾಡುತ್ತಿದೆ. ಎಲೆಕ್ಟ್ರಿಕ್‌ ವಾಹನಗಳ(ಇವಿ) ಚಾರ್ಜಿಂಗ್‌ಗಾಗಿ ರಾಷ್ಟ್ರಾದ್ಯಂತ ಉಚಿತ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದೆ. ಈ ವರ್ಷಾಂತ್ಯಕ್ಕೆ ಅಲ್ಲಿನ ಇವಿಗಳ ಸಂಖ್ಯೆ 55 ಪ್ರತಿಶತ ತಲುಪುವ ನಿರೀಕ್ಷೆಯಿದೆ. ನಾರ್ವೆಯ ಜನಸಂಖ್ಯೆ ಕೇವಲ 53 ಲಕ್ಷ ಇರುವುದರಿಂದ ಇಂಧನ ವಾಹನಗಳಿಂದ ಮುಕ್ತವಾಗುವ ಅದರ ಕನಸು ಸುಲಭವಾಗಿ ಈಡೇರಬಲ್ಲದು.

ಇಸ್ರೇಲ್‌-2030: 80 ಲಕ್ಷ ಜನಸಂಖ್ಯೆಯಿರುವ ಇಸ್ರೇಲ್‌ ಹತ್ತು ವರ್ಷಗಳಲ್ಲಿ ತನ್ನ ದೇಶದಲ್ಲಿ 15 ಲಕ್ಷ ಎಲೆಕ್ಟ್ರಿಕ್‌ ವಾಹನಗಳು ಇರಬೇಕು ಎನ್ನುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ತೆರಿಗೆ ವಿನಾಯಿತಿ, ಫ್ರೀ ಚಾರ್ಜಿಂಜ್‌ ಸ್ಟೇಷನ್‌ಗಳನ್ನು ಸ್ಥಾಪಿಸುತ್ತಿದೆ. 2025ರೊಳಗೆ ಪೆಟ್ರೋಲ್‌-ಡೀಸೆಲ್‌ ಕಾರುಗಳ ಆಮದನ್ನು ಸಂಪೂರ್ಣ ನಿಲ್ಲಿಸುವ ಸಿದ್ಧತೆ ನಡೆಸಿದೆ.

ಐಸ್‌ಲ್ಯಾಂಡ್‌: 2030ರೊಳಗೆ ಇಂಗಾಲದ ಡೈಆಕ್ಸೆ„ಡ್‌ ಹೊರಸೂಸುವಿಕೆಯನ್ನು ಅರ್ಧದಷ್ಟು ಕಡಿತಗೊಳಿಸುವ ಉದ್ದೇಶ ಹೊಂದಿರುವ ಐಸ್‌ಲ್ಯಾಂಡ್‌ ಪೆಟ್ರೋಲ್‌-ಡೀಸೆಲ್‌ ಆಧರಿತ ಕಾರುಗಳನ್ನು 2030ರೊಳಗೆ ನಿಷೇಧಿಸುವುದಾಗಿ ಘೋಷಿಸಿದೆ. 2050ರೊಳಗೆ ಅನಿಲ ಚಾಲಿತ ವಾಹನಗಳನ್ನೆಲ್ಲ ಇಲ್ಲವಾಗಿಸುತ್ತೇವೆ ಎಂದೂ ಹೇಳಿದೆ.

ಭಾರತ: ಭಾರತ ಸರ್ಕಾರವು ಕೆಲ ವರ್ಷಗಳಿಂದ ವಿದ್ಯುತ್‌ಚಾಲಿತ ವಾಹನಗಳನ್ನು ಖರೀದಿಸಲು ಪ್ರೋತ್ಸಾಹ ನೀಡುತ್ತಿದೆಯಾದರೂ, ಪೆಟ್ರೋಲ್‌-ಡೀಸೆಲ್‌ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಭಾರತಕ್ಕೆ ಸಾಧ್ಯವಾಗದು ಎಂದು ಸ್ಪಷ್ಟವಾಗಿ ಹೇಳಿದೆ. ವಾಯುಮಾಲಿನ್ಯ ತಗ್ಗಿಸುವುದಕ್ಕಾಗಿ ಭಾರತ ಬಿಎಸ್‌-6 ವಾಹನಗಳನ್ನು ಕಡ್ಡಾಯಗೊಳಿಸಿದೆ.

ಬ್ಯಾನ್‌ ಅಥವಾ ನೋ ಬ್ಯಾನ್‌?
ಭವಿಷ್ಯದಲ್ಲಿ ಪೆಟ್ರೋಲ್‌ ಡೀಸೆಲ್‌ ಕಾರ್‌ಗಳನ್ನು ಬ್ಯಾನ್‌ ಮಾಡಲು ಯೋಚಿಸುತ್ತಿರುವ ಹಾಗೂ ಯೋಚಿಸದ ರಾಷ್ಟ್ರಗಳು

1) ಭಾರತ, ಚೀನಾ, ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ(ನಿಷೇಧಿಸುವ ಯೋಚನೆ ಇಲ್ಲ)
2) ಡೆನ್ಮಾರ್ಕ್‌- 2030
3) ಫ್ರಾನ್ಸ್‌- 2040
4) ಐರ್ಲೆಂಡ್‌- 2030
5)ನೆದರ್‌ಲ್ಯಾಂಡ್ಸ್‌- 2030
6) ಸಿಂಗಾಪೂರ- 2040
7)ಶ್ರೀಲಂಕಾ- 2040
8) ಸ್ವೀಡನ್‌- 2030

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top