ಬಾಗಲಕೋಟೆ: ನರೇಂದ್ರ ಮೋದಿ ದೇವರಾ? ಅವರನ್ನು ಪ್ರಶ್ನೆ ಮಾಡುವಂತಿಲ್ಲವೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾರನ್ನಾದರೂ ಪ್ರಶ್ನಿಸುವುದು ಸಹಜವಾದ ಹಕ್ಕು. ನರೇಂದ್ರ ಮೋದಿ ದೇವರಲ್ಲ.
ಈ ದೇಶದಲ್ಲಿ ಪ್ರತಿಯೊಬ್ಬರನ್ನೂ ಪ್ರಶ್ನಿಸಬಹುದು. ಆದರೆ, ಇಲ್ಲಿ ಪ್ರಶ್ನೆ ಮಾಡುವವರನ್ನೇ ವಿರೋಧಿಗಳಂತೆ ನೋಡಲಾಗುತ್ತಿದೆ. ಕಳೆದ 12 ವರ್ಷಗಳಿಂದ ಮೋದಿಯವರೇ ಪ್ರಚಾರದಲ್ಲಿದ್ದಾರೆ. ಗ್ರಾಪಂ, ತಾಪಂ ಹಾಗೂ ಮುನ್ಸಿಪಾಲಿಟಿ ಮಟ್ಟದ ಚುನಾವಣೆಗಳು ಬರುವ ಸಾಧ್ಯತೆ ಇದ್ದು ಪ್ರಧಾನಿಯೇ ಪ್ರಚಾರಕ್ಕೆ ಬರಬೇಕು ಎಂದರು.
ಗೋವು 2ನೇ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ:
ಬಿಜೆಪಿಗರಿಗೆ ಪಾಕಿಸ್ತಾನ್, ಮುಸಲ್ಮಾನ ಎಂಬುದೇ ಅಸ್ತ್ರ. ಗೋವನ್ನು ದೇವರೆಂದು ಪೂಜಿಸುತ್ತೇವೆ. ಆದರೆ, ಗೋ ಮಾಂಸ ರಫ್ತು ಮಾಡುವಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಗೋವಿನ ಬಗ್ಗೆ ನಿಜವಾದ ಕಾಳಜಿ ಇದ್ದರೆ 2ನೇ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಿ. ಗೋ ಮಾಂಸ ರಫ್ತು ಮಾಡುವ ಕಂಪನಿಗಳಿಗೆ ಇದೇ ನರೇಂದ್ರ ಮೋದಿ ಪ್ರಮಾಣಪತ್ರ ಕೊಟ್ಟಿದ್ದಾರೆ. ಅವರಿಂದ ವಸೂಲಿ ಮಾಡಿದ ಹಣದಲ್ಲಿ ದೇಶದ ವಿವಿಧೆಡೆ ಬಿಜೆಪಿ ಕಚೇರಿ ಕಟ್ಟಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಗೋ ಮಾಂಸದ ರಕ್ತದ ಕಲೆ ಇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

