ಬೆಂಗಳೂರು: ರಾಜ್ಯದಲ್ಲಿ ಬಡವರಿಗೆ ಕನಿಷ್ಠ 5 ಲಕ್ಷ ನಿವೇಶನ ಹಂಚುವ ವಿಶೇಷ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದ್ದು, ಇದಕ್ಕೆ ಪ್ರತಿ ಜಿಲ್ಲೆಯಲ್ಲೂ ಸೂಕ್ತ ಜಾಗ ಹುಡುಕುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯದ ಅಸಂಖ್ಯಾತ ಜನರಿಗೆ ವಿಳಾಸ ಹೇಳಲು ಕೂಡ ಒಂದು ಜಾಗವಿಲ್ಲ.
ಈ ಕೂಡಲೇ ನಾವು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50,000 ನಿವೇಶನಗಳಿಗೆ ಸಾಕಾಗುವಷ್ಟು ಭೂಮಿಯನ್ನು ಹುಡುಕಬೇಕು. ಆ ಜಮೀನು ಜನರ ವಾಸಕ್ಕೆ ಸೂಕ್ತವಾಗಿರಲಿ ಎಂದು ನಿರ್ದೇಶಿಸಿದ್ದಾರೆ. ಬಡವರಿಗೆ ನಿವೇಶನ ನೀಡುವುದು ಸರ್ಕಾರದ ವಿಶೇಷ ಯೋಜನೆಯಾಗಿದೆ. ಮೊದಲ ಹಂತದಲ್ಲಿ ಇದೇ ಡಿಸೆಂಬರ್‌ಗಿಂತ ಮೊದಲು ಕನಿಷ್ಠ 5 ಲಕ್ಷ ನಿವೇಶನ ಹಂಚಿಕೆ ಮಾಡಬೇಕು. ಅದಕ್ಕಾಗಿ ಸೂಕ್ತ ಜಾಗ ಗುರುತಿಸಿ ನಿವೇಶನಗಳನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ವಾಸ್ತವವಾಗಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಬೇಕು. ಅದರಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು, ಅಂಗವಿಕಲರು, ವಿಧವೆಯರು, ಲೈಂಗಿಕ ಅಲ್ಪಸಂಖ್ಯಾತರು ಮುಂತಾದವರಿಗೆ ಆದ್ಯತೆ ನೀಡಬೇಕು. ರಾಜ್ಯದಲ್ಲಿ 15,50,000 ವಸತಿ ನಿವೇಶನಗಳನ್ನು ಹಂಚುವುದಾಗಿದೆ. ಸೆಪ್ಟೆಂಬರ್ 15ರೊಳಗೆ ಭೂಮಿ ಗುರುತಿಸಬೇಕು ಎಂದು ತಿಳಿಸಿದರು.
5,768 ಪ್ರಸ್ತಾವನೆ ಡೀಸಿ ಬಳಿ ಬಾಕಿ:
ರಾಜ್ಯದಲ್ಲಿ ಈವರೆಗೆ 10,896 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕಾಗಿರುತ್ತದೆ. ಆದರೆ, ಇದುವರೆಗೆ ಕಂದಾಯ ಗ್ರಾಮಗಳೆಂದು ಘೋಷಿಸಿರುವ ಗ್ರಾಮಗಳ ಸಂಖ್ಯೆ 3,354 ಮಾತ್ರ. ಇನ್ನು ಪ್ರಾಥಮಿಕ ಅಧಿಸೂಚನೆಗಾಗಿ 5,768 ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳ ಬಳಿ ಬಾಕಿ ಇವೆ. ಅಂತಿಮ ಅಧಿಸೂಚನೆ ಮಾಡಲು 702 ಪ್ರಸ್ತಾವನೆಗಳು ಡೀಸಿಗಳ ಬಳಿ ಬಾಕಿ ಇವೆ. ಈ ಜಿಲ್ಲೆಗಳ ಡೀಸಿಗಳು ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳನ್ನು ಮುಂದಿನ 15 ದಿನಗಳ ಒಳಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಿದ್ದರೆ ಅದನ್ನು ಮಾಡಿ ಪ್ರಕ್ರಿಯೆ ಅಂತಿಮಗೊಳಿಸಬೇಕು ಎಂದು ಸೂಚಿಸಿದರು.
ಮಿಸ್ಸಿಂಗ್ ರೆಕಾರ್ಡ್ ಕಡತಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಶಾಸಕರುಗಳು ಸಭೆಗಳಲ್ಲಿ ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ಇತ್ಯರ್ಥ ಮಾಡಬಹುದಾದ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ತಿರಸ್ಕರಿಸುವ ಪ್ರಕರಣಗಳನ್ನು ತಿರಸ್ಕರಿಸಬೇಕು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಈ ಪ್ರಕರಣಗಳನ್ನು ಅಪೀಲುಗಳಿಗೆ ಕನ್ವರ್ಟ್ ಮಾಡಿ ಇತ್ಯರ್ಥ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.
ಈಗಾಗಲೇ ಕೆಎಂಎಫ್ ವತಿಯಿಂದ ಮೇವಿನ ಬೀಜದ ಕಿಟ್‌ಗಳನ್ನು ಕೊಡುತ್ತಿದ್ದೇವೆ. ರೈತರಿಗೆ ಮೇವಿನ ಬೀಜದ ಕಿಟ್ ನೀಡಲು ಈಗ 25 ಕೋಟಿ ರೂ. ನೀಡಲಾಗುವುದು. ಪಶುಸಂಗೋಪನಾ ಇಲಾಖೆಯವರು ಈ ಕೂಡಲೆ ಕಿಟ್‌ಗಳನ್ನು ವಿತರಿಸಲು ಪ್ರಾರಂಭಿಸಬೇಕು ಎಂದರು. ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಮನೋಜ್ ಕುಮಾರ್ ಮೀನಾ, ಮೀನಾ ನಾಗರಾಜ್, ವೆಂಕಟರಾಜ್, ಎಂ.ಎನ್.ಅನುಚೇತ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

