ಪಾಟ್ನಾ: ನೇಪಾಲದಲ್ಲಿ ಸಂಭವಿಸಿದ ಜಲಪ್ರಳಯದ ನಂತರ ಬಿಹಾರಕ್ಕೆ ಹರಿದು ಬಂದಿರುವ ಪ್ರವಾಹದ ನೀರಿನಲ್ಲಿ ಸಿಗುವ ಮೀನುಗಳನ್ನು ಸೇವಿಸುವುದು ಅತ್ಯಂತ ಅಪಾಯಕಾರಿ ಎಂದು ಬಿಹಾರ ಸರ್ಕಾರ ತೀವ್ರ ಎಚ್ಚರಿಕೆ ನೀಡಿದೆ.
ಪರಿಸ್ಥಿತಿ ತಿಳಿಯಾಗುವವರೆಗೆ ಪ್ರವಾಹದ ನೀರಿನಲ್ಲಿ ಮೀನು ಹಿಡಿಯುವುದು, ಮಾರಾಟ ಮಾಡುವುದು ಅಥವಾ ಅವುಗಳನ್ನು ಅಡುಗೆ ಮಾಡಿ ತಿನ್ನುವುದನ್ನು ಸಂಪೂರ್ಣವಾಗಿ ತಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ದಿಢೀರ್ ಪ್ರವಾಹದಿಂದಾಗಿ ತ್ರಿಶೂಲಿ ನದಿಯ ನೀರು ಗಂಡಕ್ ಮತ್ತು ಕೋಸಿ ನದಿಗಳ ಮೂಲಕ ಬಿಹಾರದ ಉತ್ತರ ಭಾಗಗಳಿಗೆ ರಭಸವಾಗಿ ಹರಿದು ಬರುತ್ತಿದೆ. ನದಿಗಳ ನೀರು ಹರಿಯುವ ಮಟ್ಟ ಹೆಚ್ಚಾಗುತ್ತಿದ್ದಂತೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಿಂದೆಂದೂ ಕಾಣದ ವಿಚಿತ್ರ ರೀತಿಯ ಮೀನುಗಳು ಕಾಣಸಿಗುತ್ತಿವೆ. ಈ ಮೀನುಗಳನ್ನು ತಿಂದ ಹಲವು ಜನರು ಈಗಾಗಲೇ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆಗಳ ಬೆನ್ನಲ್ಲೇ ಬಿಹಾರದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆ ಹಾಗೂ ನೇಪಾಲ ಪೊಲೀಸರು ಜಂಟಿಯಾಗಿ ಸಾರ್ವಜನಿಕರಿಗೆ ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಪ್ರವಾಹದ ಸಮಯದಲ್ಲಿ ಕೊಳಗಳು, ನದಿಗಳು ಮತ್ತು ಜಲಾಶಯಗಳಿಂದ ಮೀನುಗಳು ಕೊಚ್ಚಿಕೊಂಡು ಬಂದು ಕಲುಷಿತ ನೀರಿನಲ್ಲಿ ಬೆರೆಯುತ್ತವೆ. ನಿರಂತರವಾಗಿ ಹರಿಯುವ ಕೊಳಚೆ ನೀರು, ಚರಂಡಿ ತ್ಯಾಜ್ಯ ಮತ್ತು ಕೊಳೆತ ಪ್ರಾಣಿಗಳ ದೇಹಗಳ ಸಂಪರ್ಕಕ್ಕೆ ಬರುವುದರಿಂದ ಈ ಮೀನುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್ ಸೇರಿದಂತೆ ವಿಷಕಾರಿ ರೋಗಾಣುಗಳು ಸೇರಿಕೊಳ್ಳುತ್ತವೆ. ಆದ್ದರಿಂದ ವಾತಾವರಣ ಮತ್ತು ಜಲಮೂಲಗಳು ಸುಧಾರಿಸುವವರೆಗೆ ಪ್ರವಾಹದ ಮೀನುಗಳ ಸೌಂದರ್ಯಕ್ಕೆ ಮರುಳಾಗಿ ಅವುಗಳನ್ನು ಆಹಾರವಾಗಿ ಬಳಸಬಾರದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಪ್ರವಾಹವು ಬಿಹಾರಕ್ಕೆ ಕೇವಲ ಮೀನುಗಳನ್ನು ಮಾತ್ರವಲ್ಲದೆ ಅಸಂಖ್ಯಾತ ತ್ಯಾಜ್ಯ ಮತ್ತು ಅಪಾಯಗಳನ್ನು ಹೊತ್ತು ತಂದಿದೆ. ನೇಪಾಲದ ಗುಡ್ಡಗಾಡು ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತ ಹಾಗೂ ಹಿಮನದಿಗಳ ಸ್ಫೋಟದಿಂದಾಗಿ ಅಪಾರ ಪ್ರಮಾಣದ ಕೆಸರು, ಮಣ್ಣು, ಕಲ್ಲುಗಳು ಮತ್ತು ದಪ್ಪನೆಯ ಮರದ ದಿಮ್ಮಿಗಳು ನದಿಯಲ್ಲಿ ತಾರಿ ಬಂದಿವೆ. ಇದರೊಂದಿಗೆ ನೇಪಾಲದಲ್ಲಿ ಕೊಚ್ಚಿಹೋದ ಸೇತುವೆಗಳು, ಜಲವಿದ್ಯುತ್ ಯೋಜನೆಯ ಭಾಗಗಳು, ವಾಹನಗಳು, ಮನೆಬಳಕೆಯ ಸಾಮಗ್ರಿಗಳು ಮತ್ತು ಅಡುಗೆ ಅನಿಲ ಸಿಲಿಂಡರ್‌ಗಳು ನದಿಯಲ್ಲಿ ತೇಲಿ ಬರುತ್ತಿವೆ. ಅತ್ಯಂತ ಕಳವಳಕಾರಿ ಸಂಗತಿಯೆಂದರೆ, ಮನುಷ್ಯರು ಮತ್ತು ಪ್ರಾಣಿಗಳ ಮೃತದೇಹಗಳು ನೀರಿನಲ್ಲಿ ತೇಲಿ ಬರುತ್ತಿದ್ದು, ಬಿಹಾರದ ನದಿಗಳಲ್ಲಿ ರೋಗಾಣುಗಳ ಸೋಂಕು ಹರಡುವ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.
ಆರೋಗ್ಯ ತಜ್ಞರ ಪ್ರಕಾರ, ಕಲುಷಿತಗೊಂಡ ಈ ಪ್ರವಾಹದ ನೀರು ಕುಡಿಯುವ ನೀರಿನ ಆಕರಗಳಾದ ಬೋರ್‌ವೆಲ್ ಮತ್ತು ಬಾವಿಗಳ ನೀರಿಗೆ ಬೆರೆತರೆ ಪರಿಸ್ಥಿತಿ ಕೈಮೀರಲಿದೆ. ಇದರಿಂದ ಅತಿಸಾರ, ಕಾಲರಾ, ಟೈಫಾಯಿಡ್ ಹಾಗೂ ಹೆಪಟೈಟಿಸ್ ಎ ಮತ್ತು ಇ ಯಂತಹ ಮಾರಕ ಯಕೃತ್ತಿನ ಕಾಯಿಲೆಗಳು ವೇಗವಾಗಿ ಹರಡುವ ಸಾಧ್ಯತೆಯಿದೆ. ಅಲ್ಲದೆ, ಮನೆಗಳ ಸುತ್ತಮುತ್ತ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ, ಚಿಕೂನ್‌ಗುನ್ಯಾ ಹಾಗೂ ಚರ್ಮ ಮತ್ತು ಕಣ್ಣಿನ ಸೋಂಕುಗಳು ಉಲ್ಬಣಗೊಳ್ಳಲಿವೆ.
ಈ ಜಲಪ್ರಳಯವು ಗಡಿ ಜಿಲ್ಲೆಗಳ ಕೃಷಿ ಭೂಮಿಯನ್ನು ಜಲಾವೃತಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಧಾನ್ಯ ಮತ್ತು ತರಕಾರಿಗಳ ಅಭಾವ ಸೃಷ್ಟಿಯಾಗುವ ಭೀತಿ ಎದುರಾಗಿದೆ.ನದಿಗಳ ನೀರಿನ ಮಟ್ಟ ತಗ್ಗುವವರೆಗೆ ಸಾರ್ವಜನಿಕರು ಪ್ರವಾಹದ ನೀರಿನ ಸಂಪರ್ಕದಿಂದ ದೂರವಿದ್ದು, ಸರ್ಕಾರದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

