Dailyhunt Logo
  • Light mode
    Follow system
    Dark mode
    • Play Story
    • App Story
Pregnancy: ವಯಸ್ಸಾದ ಮಹಿಳೆಯರಲ್ಲಿ ಗರ್ಭಧಾರಣೆಯ ಅವಕಾಶಗಳು ಇವೆಯೇ?

Pregnancy: ವಯಸ್ಸಾದ ಮಹಿಳೆಯರಲ್ಲಿ ಗರ್ಭಧಾರಣೆಯ ಅವಕಾಶಗಳು ಇವೆಯೇ?

‌ಲವತ್ತತೆಯಲ್ಲಿ ವಯಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸು ಹೆಚ್ಚಾದಂತೆ, ವಿಶೇಷವಾಗಿ 35 ವರ್ಷಗಳ ಅನಂತರ ಗರ್ಭಧರಿಸುವ ಸಾಧ್ಯತೆಗಳು ಕಡಿಮೆಯಾಗುತ್ತ ಹೋಗುತ್ತವೆ. ವಯಸ್ಸಾದಂತೆ ಫ‌ಲವತ್ತತೆ ಕಡಿಮೆಯಾಗಲು ಮುಖ್ಯ ಕಾರಣವೆಂದರೆ ಅಂಡಾಶಯದಲ್ಲಿ ಉಳಿದಿರುವ ಅಂಡಗಳ ಸಂಖ್ಯೆ ಕಡಿಮೆಯಾಗುವುದು.

ಪುರುಷರು ತಮ್ಮ ಜೀವಿತಾವಧಿಯ ಹೆಚ್ಚಿನ ಸಮಯದಲ್ಲಿ ಪ್ರತಿದಿನ ಹೊಸ ವೀರ್ಯಾಣುಗಳನ್ನು ಉತ್ಪಾದಿಸುತ್ತಾರೆ. ಆದರೆ ಮಹಿಳೆಯರು ಹುಟ್ಟುವಾಗಲೇ ತಮ್ಮ ಅಂಡಾಶಯದಲ್ಲಿ ನಿಗದಿತ ಪ್ರಮಾಣದ ಅಂಡಗಳನ್ನು ಹೊಂದಿರುತ್ತಾರೆ.

ನಿಖರವಾಗಿ ಹೇಳುವುದಾದರೆ, ಹೆಣ್ಣು ಮಗು ಹುಟ್ಟಿದಾಗ ಅಂಡಾಶಯದಲ್ಲಿ ಸುಮಾರು 1 ರಿಂದ 2 ದಶಲಕ್ಷ ಅಪಕ್ವ ಅಂಡಗಳು ಇರುತ್ತವೆ. ಪ್ರೌಢಾವಸ್ಥೆಯ ವೇಳೆಗೆ ಅವುಗಳ ಸಂಖ್ಯೆ ಸುಮಾರು 4 ಲಕ್ಷಕ್ಕೆ ಇಳಿಯುತ್ತದೆ.

ಸಾಮಾನ್ಯವಾಗಿ 45-55 ವರ್ಷದವರಿದ್ದಾಗ ಮುಟ್ಟಿನ ನಿಲ್ಲುವಿಕೆ ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ಅಂಡಾಶಯದಲ್ಲಿ ಅಂಡಗಳು ಇರುವುದೇ ಇಲ್ಲ ಅಥವಾ ತೀರ ಕಡಿಮೆಯಿರುತ್ತವೆ. ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಉಳಿದಿರುವ ಅಂಡಗಳು ಪಕ್ವಗೊಂಡು ಫ‌ಲದೀಕರಣಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ.

ಹೆಚ್ಚಿನ ಸಂತಾನ ತಜ್ಞರು 35 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ʼವಯಸ್ಸಾದ ಮಹಿಳೆ' ಎಂದು ಪರಿಗಣಿಸುತ್ತಾರೆ. ಆದರೆ ಇದೊಂದು ಅಂದಾಜು ಸಂಖ್ಯೆಯಷ್ಟೇ. ಮಹಿಳೆಯ ಫ‌ಲವತ್ತತೆಯು ನಿರ್ದಿಷ್ಟ ವಯಸ್ಸಿನಲ್ಲಿ ದಿಢೀರನೆ ಕುಸಿಯುವುದಿಲ್ಲ. ಆದರೆ 30 ವರ್ಷಗಳ ಅನಂತರ ಹಂತ ಹಂತವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. 35 ವರ್ಷಗಳ ಅನಂತರ ಈ ಕುಸಿತವು ವೇಗವಾಗಿರುತ್ತದೆ ಮತ್ತು 38 ವರ್ಷಗಳ ಬಳಿಕ ಇನ್ನೂ ಹೆಚ್ಚಿರುತ್ತದೆ. ಆದರೂ ಫ‌ಲವತ್ತತೆ ಸಂಪೂರ್ಣವಾಗಿ ಇಲ್ಲದಂತಾಗಲು ಯಾವುದೇ ನಿರ್ದಿಷ್ಟ ವಯಸ್ಸಿನ ಮಿತಿ ಇಲ್ಲ ಮತ್ತು ಈ ಕುಸಿತವು ಮರಳಿ ಪೂರ್ವಸ್ಥಿತಿಗೆ ತರಲಾಗದ ಪ್ರಕ್ರಿಯೆಯಾಗಿದೆ.

ವಯಸ್ಸಾದ ಮಹಿಳೆಯರು ಮತ್ತು ಬಂಜೆತನ

ಪ್ರಸ್ತುತ ಆಂಟಿ ಮುಲ್ಲೇರಿಯನ್‌ ಹಾರ್ಮೋನ್‌ (AMH) ಎಂಬ ರಕ್ತ ಪರೀಕ್ಷೆಯನ್ನು ಮಾಡುವ ಮೂಲಕ ಮಹಿಳೆಯಲ್ಲಿ ಉಳಿದಿರುವ ಅಂಡಗಳ ಪ್ರಮಾಣವನ್ನು ತಿಳಿಯಬಹುದು. ಕಡಿಮೆ ಮಟ್ಟದ ಎಎಂಎಚ್‌ ಇರುವುದು ಅಂಡಾಶಯದಲ್ಲಿ ಅಂಡಗಳ ಸಂಖ್ಯೆ ಕಡಿಮೆಯಿರುವುದನ್ನು ಸೂಚಿಸುತ್ತದೆ. ಆದರೆ ಈ ಪರೀಕ್ಷೆಯ ಫ‌ಲಿತಾಂಶ ಸಾಮಾನ್ಯವಾಗಿದ್ದರೂ ಕೂಡ ಉತ್ಪತ್ತಿಯಾಗುವ ಮೊಟ್ಟೆಗಳ ಗುಣಮಟ್ಟ ಅಥವಾ ಸಂಖ್ಯೆ ಉತ್ತಮವಾಗಿರುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ.

ಬಂಜೆತನ ಮತ್ತು ಮಧ್ಯವಯಸ್ಸಿನ ಸವಾಲುಗಳು

ವಯಸ್ಸಾದ ಮಹಿಳೆಯರಲ್ಲಿ ಐವಿಎಫ್ ಮೂಲಕ ಗರ್ಭಧಾರಣೆಯ ದರವನ್ನು ಹೆಚ್ಚಿಸಲು ಅನೇಕ ಸಂಶೋಧನೆಗಳು ನಡೆಯುತ್ತಿವೆ:

 ಅನ್ಯೂಪ್ಲಾಯ್ಡಿ ಸ್ಕ್ರೀನಿಂಗ್‌ (Aneuploid Screening): ಭ್ರೂಣಗಳಲ್ಲಿರುವ ವರ್ಣತಂತು (Chromosomal) ಲೋಪದೋಷಗಳನ್ನು ಪರೀಕ್ಷಿಸುವುದು. ಕೇವಲ ಆರೋಗ್ಯಕರ ಭ್ರೂಣಗಳನ್ನು ಮಾತ್ರ ಗರ್ಭಕೋಶಕ್ಕೆ ವರ್ಗಾಯಿಸಿದರೆ ಗರ್ಭಧಾರಣೆಯ ದರ ಹೆಚ್ಚಾಗುತ್ತದೆ ಎಂದು ಸಂಶೋಧಕರು ಭಾವಿಸುತ್ತಾರೆ. ಆದರೆ ಇದಕ್ಕೆ ಹೆಚ್ಚಿನ ಅಂಡಗಳು ಮತ್ತು ಭ್ರೂಣಗಳು ಬೇಕಾಗುತ್ತವೆ. ಇದು ವಯಸ್ಸಾದ ಮಹಿಳೆಯರಲ್ಲಿ ಸಾಧ್ಯವಾಗುವುದು ಕಡಿಮೆ.

 ಅಸಿಸ್ಟೆಡ್‌ ಝೋನಾ ಹ್ಯಾಚಿಂಗ್‌ (Assisted Zona Hatching): ಲೇಸರ್‌ ಬಳಸಿ ಭ್ರೂಣದ ಹೊರಪದರದಲ್ಲಿ (Shell) ಸಣ್ಣ ರಂಧ್ರವನ್ನು ಮಾಡಲಾಗುತ್ತದೆ. ಇದರಿಂದ ಭ್ರೂಣವು ಸುಲಭವಾಗಿ ಹೊರಬಂದು ಗರ್ಭಕೋಶದ ಪದರಕ್ಕೆ ಅಂಟಿಕೊಳ್ಳಲು ಸಹಾಯವಾಗುತ್ತದೆ. ಆದರೆ ಈ ವಿಧಾನಗಳ ಕ್ಲಿನಿಕಲ್‌ ಪ್ರಯೋಜನಗಳು ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ.

 ದಾನಿಯ ಅಂಡಗಳ ಬಳಕೆ: ಸ್ವಂತ ಅಂಡಗಳು ಸರಿಯಾಗಿ ಬೆಳೆಯದ ವಯಸ್ಸಾದ ಮಹಿಳೆಯರಿಗೆ ದಾನಿಗಳ ಅಂಡಗಳನ್ನು (Donor Eggs) ಬಳಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.

ನೆನಪಿಡಿ:

ಇದು ಭಾವನಾತ್ಮಕ ವಿಷಯವಾಗಿರುವುದರಿಂದ ದಂಪತಿ ಸ್ವತಃ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ದಾನಿ ಅಂಡಗಳನ್ನು ಬಳಸುವುದರಿಂದ ಗರ್ಭಧಾರಣೆಯ ಯಶಸ್ಸಿನ ದರವು ಗಣನೀಯವಾಗಿ ಹೆಚ್ಚಾಗುತ್ತದೆ.

ಅಂಡ ದಾನ ಪ್ರಕ್ರಿಯೆ ಮತ್ತು ಸಮಯದ ನಿರ್ವಹಣೆ ಹೇಗೆ?

ದಾನಿಗಳ ಆಯ್ಕೆ ಮತ್ತು ತಪಾಸಣೆ: ಸೂಕ್ತವಾದ ಅಂಡ ದಾನಿಯನ್ನು ಮಾರ್ಕ್‌ ತಂಡವು ಆಯ್ಕೆ ಮಾಡುತ್ತದೆ. ಸಾಂಕ್ರಾಮಿಕ ರೋಗಗಳು ಮತ್ತು ಆನುವಂಶಿಕ ಕಾಯಿಲೆಗಳಿಗಾಗಿ ಅವರನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗುತ್ತದೆ. ದಾನಿಗಳಿಗೆ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ ಮತ್ತು ಅವರ ವಿವರಗಳನ್ನು ರಹಸ್ಯವಾಗಿಡಲಾಗುತ್ತದೆ.

ಅಂಡಗಳ ಸಂಗ್ರಹಣೆ: ದಾನಿಗೆ ಚುಚ್ಚುಮದ್ದು ನೀಡುವ ಮೂಲಕ ಹೆಚ್ಚಿನ ಅಂಡಗಳು ಬೆಳೆಯುವಂತೆ ಮಾಡಲಾಗುತ್ತದೆ. ಅಂಡಗಳು ಪಕ್ವವಾದಾಗ, ಅಂಡಾಶಯದಿಂದ ಅವುಗಳನ್ನು ಹೊರತೆಗೆಯಲಾಗುತ್ತದೆ.

ಫ‌ಲವತ್ತತೆ: ಸಂಗ್ರಹಿಸಿದ ಅಂಡಗಳನ್ನು ಪ್ರಯೋಗಾಲಯದಲ್ಲಿ ಪತಿಯ ವೀರ್ಯಾಣುವಿನೊಂದಿಗೆ ಸೇರಿಸಿ ಭ್ರೂಣವನ್ನು ರೂಪಿಸಲಾಗುತ್ತದೆ.

ಗರ್ಭಕೋಶಕ್ಕೆ ವರ್ಗಾವಣೆ: ಭ್ರೂಣಗಳನ್ನು 3ರಿಂದ 5 ದಿನಗಳ ಕಾಲ ಪ್ರಯೋಗಾಲಯದಲ್ಲಿ ಬೆಳೆಸಲಾಗುತ್ತದೆ. ಅನಂತರ, ಗರ್ಭಕೋಶದ ಸಿದ್ಧತೆಗೆ ತಕ್ಕಂತೆ ಸರಿಯಾದ ಸಮಯದಲ್ಲಿ ಭ್ರೂಣವನ್ನು ಮಹಿಳೆಯ ಗರ್ಭಕೋಶಕ್ಕೆ ಯಶಸ್ವಿಯಾಗಿ ವರ್ಗಾಯಿಸಲಾಗುತ್ತದೆ.

ಶತ ಪ್ರತಿಶತ ಯಶಸ್ಸು ಏಕೆ ಸಾಧ್ಯವಿಲ್ಲ?

ರೋಗಿಗಳು ನನ್ನಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆ ಇದು: ನಮಗೆ ನೂರಕ್ಕೆ ನೂರು ಯಶಸ್ಸು ಏಕೆ ಸಿಗುವುದಿಲ್ಲ?

ನನ್ನ ಉತ್ತರ: ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೂ ನೂರಕ್ಕೆ ನೂರು ಯಶಸ್ವಿಯಾಗುವುದಿಲ್ಲ. ಅದರಲ್ಲೂ ಫ‌ಲವತ್ತತೆಯ ವಿಷಯದಲ್ಲಿ, ಗರ್ಭಕೋಶದಲ್ಲಿ ಭ್ರೂಣವು ಅಂಟಿಕೊಳ್ಳುವ (Implantation) ಪ್ರಕ್ರಿಯೆಯು ಸಂಪೂರ್ಣವಾಗಿ ನಮಗೆ ಅರ್ಥವಾಗಿಲ್ಲ. ನಾವು ಅತ್ಯುತ್ತಮ ಗುಣಮಟ್ಟದ ಭ್ರೂಣವನ್ನು ಗರ್ಭಕೋಶದಲ್ಲಿ ಇರಿಸಿದರೂ ಕೆಲವೊಮ್ಮೆ ವಿಫ‌ಲವಾಗಬಹುದು. ಆದರೂ ಇತ್ತೀಚೆಗಿನ ಆಧುನಿಕ ತಂತ್ರಜ್ಞಾನಗಳು ಬಂಜೆತನದಿಂದ ಬಳಲುತ್ತಿರುವ ದಂಪತಿಗೆ ನಿಜಕ್ಕೂ ಒಂದು ವರವಾಗಿದೆ.

-ಡಾ| ಪ್ರತಾಪ್‌ ಕುಮಾರ್‌

ಕನ್ಸಲ್ಟಂಟ್‌ - ರಿಪ್ರೊಡಕ್ಟಿವ್‌ ಮೆಡಿಸಿನ್‌ ಆಯಂಡ್‌ ಸರ್ಜರಿ

ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌,

ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರಿಪ್ರೊಡಕ್ಟಿವ್‌ ಮೆಡಿಸಿನ್‌ ಆಯಂಡ್‌ ಸರ್ಜರಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಾಹೆ, ಮಣಿಪಾಲ)

Dailyhunt
Disclaimer: This content has not been generated, created or edited by Dailyhunt. Publisher: Udayavani