Dailyhunt Logo
  • Light mode
    Follow system
    Dark mode
    • Play Story
    • App Story
Prisoners: ಸನ್ನಡತೆಯ 24 ಕೈದಿಗಳಿಗೆ ಅವಧಿಪೂರ್ವ ಬಿಡುಗಡೆ ಭಾಗ್ಯ!

Prisoners: ಸನ್ನಡತೆಯ 24 ಕೈದಿಗಳಿಗೆ ಅವಧಿಪೂರ್ವ ಬಿಡುಗಡೆ ಭಾಗ್ಯ!

ಬೆಂಗಳೂರು: ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಂಡ 24 ಕೈದಿಗಳು ಸಮಾಜದ ಮುಖ್ಯವಾಹಿನಿಗೆ ಮರಳಿ ಜವಾಬ್ದಾರಿಯುತ ನಾಗರಿಕರಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾದ 24 ಕೈದಿಗಳಿಗೆ ಶನಿವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಶಿಕ್ಷೆ ಎಂಬುದು ವ್ಯಕ್ತಿಯ ಜೀವನದ ಅಂತ್ಯವಲ್ಲ.

ಅದು ಜೀವನವನ್ನು ತಿದ್ದಿಕೊಳ್ಳಲು ದೊರೆಯುವ ಅವಕಾಶವಾಗಿದೆ. ಸಮಾಜಕ್ಕೆ ಮರಳಿದ ಬಳಿಕ ಕಾನೂನು ಪಾಲಿಸುವ ಪ್ರಜೆಯಾಗಿ ಬದುಕುವುದರ ಮೂಲಕ ತಮ್ಮಿಂದಾದ ಪ್ರಮಾದಕ್ಕೆ ಅರ್ಥಪೂರ್ಣ ಪ್ರಾಯಶ್ಚಿತ್ತ ಸಲ್ಲಿಸಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕಾರಾಗೃಹಗಳನ್ನು ಕೇವಲ ಶಿಕ್ಷೆ ಅನುಭವಿಸುವ ಸ್ಥಳಗಳನ್ನಾಗಿ ಅಲ್ಲ, ವ್ಯಕ್ತಿತ್ವ ಪರಿವರ್ತನೆ ಮತ್ತು ಪುನರ್ವಸತಿಯ ಕೇಂದ್ರಗಳನ್ನಾಗಿ ರೂಪಿಸಲು ಬದ್ಧವಾಗಿದೆ. ಕೈದಿಗಳಿಗೆ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯೋಗ ತರಬೇತಿ ಹಾಗೂ ಮಾನಸಿಕ ಸದೃಢತೆಗೆ ಅಗತ್ಯವಾದ ಎಲ್ಲ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಬಿಡುಗಡೆಯಾದ ನಂತರ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ ಎಂದರು.

ಕಾರಾಗೃಹ ಸಬಲಗೊಳಿಸಲು ಕಾರ್ಯಕ್ರಮ:

ಕಾರಾಗೃಹಗಳನ್ನು ತಾಂತ್ರಿಕ ಹಾಗೂ ಉದ್ಯೋಗಪರವಾಗಿ ಇನ್ನಷ್ಟು ಸಬಲಗೊಳಿಸಲು ಸಮಗ್ರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಕೌಶಲ್ಯ, ವೃತ್ತಿಪರ ತರಬೇತಿ ಮತ್ತು ಉದ್ಯೋಗಮುಖಿ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿ, ಬಿಡುಗಡೆಯಾದ ನಂತರ ಕೈದಿಗಳು ಗೌರವಯುತ ಜೀವನ ನಡೆಸಲು ಅಗತ್ಯ ಸಾಮರ್ಥ್ಯವನ್ನು ಬೆಳೆಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸನ್ನಡತೆಯಿಂದ ಬಿಡುಗಡೆಯಾದ ಎಲ್ಲರೂ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು. ಸಮಾಜದ ವಿಶ್ವಾಸವನ್ನು ಮರುಗಳಿಸಿ, ತಮ್ಮ ಜೀವನದ ಮೂಲಕವೇ ಇತರರಿಗೆ ಉತ್ತಮ ಸಂದೇಶ ನೀಡಬೇಕು ಎಂದರು.

ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಗೃಹ ಸಚಿವರಿಂದ ವಿವಿಧ ವಿಭಾಗಗಳ ಪರಿಶೀಲನೆ

ಕಾರ್ಯಕ್ರಮದ ಬಳಿಕ ಸಚಿವ ಪ್ರಿಯಾಂಕ್‌ ಖರ್ಗೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೈದಿಗಳೊಂದಿಗೆ ಮಾತುಕತೆ ನಡೆಸಿ, ಅವರಿಗೆ ನೀಡಲಾಗುತ್ತಿರುವ ತರಬೇತಿ, ಉದ್ಯೋಗ ಕೌಶಲಾಭಿವೃದ್ಧಿ ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ನಂತರ ಕಾರಾಗೃಹದ ಅಡುಗೆಮನೆಗೆ ಭೇಟಿ ನೀಡಿ ಕೈದಿಗಳಿಗೆ ತಯಾರಾಗುತ್ತಿದ್ದ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಕೈದಿಗಳು ತಯಾರಿಸಿದ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಅವರ ಕೌಶಲ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರಾಗೃಹದಲ್ಲಿರುವ ಕೈದಿಗಳ ಮಕ್ಕಳಿಗಾಗಿ ಸ್ಥಾಪಿಸಲಾಗಿರುವ ಕಲಿಕಾ ಕೇಂದ್ರಕ್ಕೂ ಭೇಟಿ ನೀಡಿ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani