ಚಿಕ್ಕೋಡಿ: "ನನಗೆ ಸಿಗದವಳು ಬೇರೆಯವರಿಗೂ ಸಿಗಬಾರದು" ಎಂಬ ಕ್ರೂರ ಮನಸ್ಥಿತಿಯಿಂದ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಅಥಣಿ ತಾಲೂಕಿನ ನಾಗನೂರು ಪಿ.ಕೆ. ಗ್ರಾಮದ ಮೂಲದ, ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ವಾಸವಾಗಿದ್ದ ಕುಟುಂಬದ 16 ವರ್ಷದ ಬಾಲಕಿ ಲಕ್ಷ್ಮಿ ಶೇಖರ್ ರುದ್ರನವರ ಕೊಲೆಯಾದವಳು. ಪ್ರಕರಣದಲ್ಲಿ ಅಮೀರ್ ಲಾಲ್ಸಾಬ್ ಜಮಾದಾರ್ (26) ಶಿಕ್ಷೆಗೆ ಗುರಿಯಾದ ಆರೋಪಿ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಅವರು ತೀರ್ಪು ಪ್ರಕಟಿಸಿದ್ದಾರೆ. ಮೃತ ಬಾಲಕಿಯ ಪರವಾಗಿ ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ಅವರು ಯಶಸ್ವಿಯಾಗಿ ವಾದ ಮಂಡಿಸಿದ್ದರು.
ಜಾತ್ರೆಯಿಂದ ಮನೆಗೆ ಮರಳುವಾಗ ಹತ್ಯೆ
ಜೀವನೋಪಾಯಕ್ಕಾಗಿ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ನೆಲೆಸಿದ್ದ ಶೇಖರ್ ರುದ್ರನವರ ಕುಟುಂಬ ಕೃಷಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಅವರ ಹಿರಿಯ ಮಗಳು ಲಕ್ಷ್ಮಿ 9ನೇ ತರಗತಿಯಲ್ಲಿ ಓದುತ್ತಿದ್ದಳು.
2021ರ ಆಗಸ್ಟ್ 1ರಂದು ಲಕ್ಷ್ಮಿ ತನ್ನ ತಂಗಿಯರು ಹಾಗೂ ಗೆಳತಿಯರೊಂದಿಗೆ ಹಾರೂಗೇರಿ ಸಮೀಪದ ಕರಿಸಿದ್ಧೇಶ್ವರ ದೇವರ ಜಾತ್ರೆಗೆ ತೆರಳಿದ್ದಳು. ಈ ವೇಳೆ ಅಲ್ಲಿಗೆ ಬಂದ ಅಮೀರ್, ತನ್ನನ್ನು ಪ್ರೀತಿಸುವಂತೆ ಬಾಲಕಿಗೆ ಒತ್ತಡ ಹೇರಿದ್ದಾನೆ. ಬಾಲಕಿ ಇದನ್ನು ನಿರಾಕರಿಸಿದಾಗ ಆರೋಪಿ ಕೋಪಗೊಂಡು ತನ್ನ ಮೊಬೈಲ್ ಅನ್ನು ನೆಲಕ್ಕೆ ಅಪ್ಪಳಿಸಿ ಅಲ್ಲಿಂದ ತೆರಳಿದ್ದ.
ಬಳಿಕ ಬಾಲಕಿಯನ್ನು ಹಿಂಬಾಲಿಸಿದ ಆರೋಪಿ, ಆಕೆ ಕಾಲ್ನಡಿಗೆಯಲ್ಲಿ ಮನೆಗೆ ಮರಳುತ್ತಿದ್ದಾಗ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನ ಅಡ್ಡಗಟ್ಟಿ ಮತ್ತೆ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಬಾಲಕಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ಆತ, ಸಣ್ಣ ಕತ್ತಿಯಿಂದ ಆಕೆಯ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.
ಕೃತ್ಯದ ಬಳಿಕ ಪೊಲೀಸರ ಭಯದಿಂದ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಹಾರೂಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಸಾಕ್ಷ್ಯಾಧಾರಗಳಿಂದ ಅಪರಾಧ ಸಾಬೀತು
ಹಾರೂಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ರಾಘವೇಂದ್ರ ಖೋತ್ ಹಾಗೂ ಸಿಪಿಐ ಕೆ.ಎಸ್. ಹಟ್ಟಿ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಚಿಕ್ಕೋಡಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ ಅವರು ಪ್ರಬಲ ಸಾಕ್ಷ್ಯಾಧಾರಗಳನ್ನು ಮಂಡಿಸಿದರು. ಮೃತ ಬಾಲಕಿಯ ತಂಗಿಯರು ಹಾಗೂ ಗೆಳತಿಯರ ಸಾಕ್ಷ್ಯ ಪ್ರಕರಣದಲ್ಲಿ ಪ್ರಮುಖ ಪುರಾವೆಯಾಯಿತು.
ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಅಮೀರ್ ಲಾಲ್ಸಾಬ್ ಜಮಾದಾರ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ. ತೀರ್ಪಿನ ಬಳಿಕ ಆರೋಪಿಯನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
"ಬಾಲಕಿಯ ಆತ್ಮಕ್ಕೆ ನ್ಯಾಯ ಸಿಕ್ಕಿದೆ
"2021ರಲ್ಲಿ ಪ್ರೇಮದ ಹಿನ್ನೆಲೆಯಲ್ಲಿ ಅತ್ಯಂತ ಕ್ರೂರವಾಗಿ ಈ ಕೊಲೆ ನಡೆದಿತ್ತು. ಘಟನೆಯಿಂದ ಕೋಮು ಸಂಘರ್ಷ ಉಂಟಾಗುವ ಭೀತಿಯೂ ಇತ್ತು. ಆದರೆ ಪೊಲೀಸರು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನಿರಪರಾಧಿ ಬಾಲಕಿಗೆ ನ್ಯಾಯ ಒದಗಿಸಲು ಅಗತ್ಯ ಸಾಕ್ಷ್ಯಗಳನ್ನು ಪ್ರಾಮಾಣಿಕವಾಗಿ ಮಂಡಿಸಲಾಗಿತ್ತು. ಇದೀಗ ಬಾಲಕಿಯ ಆತ್ಮಕ್ಕೆ ನ್ಯಾಯ ಸಿಕ್ಕಿರುವುದು ಸಮಾಧಾನ ತಂದಿದೆ. ಈ ತೀರ್ಪು ಸಮಾಜದಲ್ಲಿ ಇಂತಹ ಅಪರಾಧಗಳು ನಡೆಯದಂತೆ ತಡೆಯಲು ನೆರವಾಗಲಿದೆ."
- ವೈ.ಜಿ. ತುಂಗಳ, ಸರ್ಕಾರಿ ಅಭಿಯೋಜಕರು, ಚಿಕ್ಕೋಡಿ
"ಮಗಳು ಮರಳಿ ಬರುವುದಿಲ್ಲ ಎಂಬ ದುಃಖವಿದೆ
"ನಾವು ಹೊಟ್ಟೆಪಾಡಿಗಾಗಿ ಬೇರೆ ಗ್ರಾಮದಿಂದ ಹಾರೂಗೇರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದೆವು. ಜಾತ್ರೆಗೆ ಹೋದಾಗ ಆರೋಪಿ ನನ್ನ ಮಗಳ ಮೇಲೆ ದಾಳಿ ನಡೆಸಿದ್ದ. ಆಕೆಯನ್ನು ಉಳಿಸಿಕೊಳ್ಳಲು ಹಲವು ಆಸ್ಪತ್ರೆಗಳಿಗೆ ಅಲೆದೆವು. ಆದರೆ ಮಗಳು ಬದುಕಲಿಲ್ಲ. ಪೊಲೀಸರು, ಸರ್ಕಾರಿ ಅಭಿಯೋಜಕರು ಹಾಗೂ ನ್ಯಾಯಾಲಯ ನನ್ನ ಮಗಳಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಆದರೆ ನನ್ನ ಮಗಳು ಮತ್ತೆ ಹಿಂತಿರುಗಿ ಬರುವುದಿಲ್ಲವಲ್ಲ ಎಂಬ ದುಃಖ ಸದಾ ಇರುತ್ತದೆ."
- ಶೇಖರ್ ರುದ್ರನವರ, ಮೃತ ಬಾಲಕಿಯ ತಂದೆ

