ಬೆಂಗಳೂರು: ರಾಜ್ಯ ಸರ್ಕಾರದ "ಕೇಸ್ ವಾಪಸಿ" ಟ್ರೆಂಡ್ ಗೆ ಹೈಕೋರ್ಟ್ ತಡೆ ನೀಡಿದೆ. ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ ಸೇರಿ ಕೆಲವು ಕೋಮುಗಲಭೆ ಪ್ರಕರಣಗಳ ಸೇರಿದಂತೆ ಹಲವು ರಾಜಕಾರಣಿಗಳು, ರೈತಪರ, ಕನ್ನಡಪರ ಹಾಗೂ ಸಾಮಾಜಿಕ ಹೋರಾಟಗಾರರ ವಿರುದ್ಧದ 52 ಪ್ರಕರಣಗಳನ್ನು ವಾಪಸ್ ಪಡೆದುಕೊಂಡ 2026 ಮೇ 27ರ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಗುರುವಾರ (ಜು.02) ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ರಾಜ್ಯ ಸರ್ಕಾರವು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆದಿರುವ ಆದೇಶಕ್ಕೆ ಪೀಠ ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾ. ಕೆ ಎಸ್ ಹೇಮಲೇಖಾ ಅವರ ವಿಭಾಗೀಯ ಪೀಠದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯಿತು.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ: ಮೂವರು ಹಿರಿಯ ಸಚಿವರ ಶಿಫಾರಸ್ಸಿನ ಅನ್ವಯ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪ್ರಾಸಿಕ್ಯೂಷನ್ ಹಿಂಪಡೆದಿದೆ. ಈ ಸಂಬಂಧ 2025ರಲ್ಲಿ ಇದೇ ನ್ಯಾಯಾಲಯ ಹೊರಡಿಸಿರುವ ಆದೇಶಕ್ಕೆ ವಿರುದ್ಧವಾದ ನಿಲುವನ್ನು ಸರ್ಕಾರ ತಳೆದಿದೆ.
ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರಾನಾಥ್ ಪೂಜಾರಿ: ಕಾಲಾವಕಾಶ ನೀಡಿದರೆ ಆಕ್ಷೇಪಣೆ ಸಲ್ಲಿಸಲಾಗುವುದು.
ಪೀಠ: ಸರ್ಕಾರಕ್ಕೆ ಸಮಯ ನೀಡಲಾಗುವುದು. ಅಲ್ಲಿಯವರಿಗೆ ಸರ್ಕಾರದ ಆದೇಶಕ್ಕೆ ತಡೆ ನೀಡಲಾಗುವುದು.
ಗೃಹ ಇಲಾಖೆ ಮತ್ತು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಪೀಠ, ಪ್ರಕರಣಗಳನ್ನು ಹಿಂಪಡೆದಿರುವ ಆದೇಶಕ್ಕೆ ತಡೆ ನೀಡಿದೆ.
ಮೂರನೇ ಪ್ರತಿವಾದಿಯಾಗಿರುವ ಹಾಲಿ ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ನೋಟಿಸ್ ಜಾರಿಗೊಳಿಸಲು ಕೋರ್ಟ್ ನಿರಾಕರಿಸಿದೆ. ಸದನದಲ್ಲಿ ಶಾಸಕರು ನೀಡುವ ಹೇಳಿಕೆಗೆ ವಿನಾಯಿತಿ ಇರುತ್ತದೆ. ಇದನ್ನು ಆಧರಿಸಿ ಅವರನ್ನು ಪ್ರತಿವಾದಿ ಮಾಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿತು. ಇದನ್ನು ವೆಂಕಟೇಶ್ ದಳವಾಯಿ ಸಮರ್ಥಿಸಲು ಮುಂದಾದರು. ಆದರೆ ಇದನ್ನು ಒಪ್ಪದ ಪೀಠವು ಯು.ಟಿ.ಖಾದರ್‌ಗೆ ನೋಟಿಸ್ ಜಾರಿ ಮಾಡಲು ನಿರಾಕರಿಸಿತು.
ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ ಹೈಕೋರ್ಟ್, ಸೆಪ್ಟೆಂಬರ್ 28ಕ್ಕೆ ವಿಚಾರಣೆ ಮುಂದೂಡಿದೆ.

