ಮಂಗಳೂರು: ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಹಾರ ಇಲಾಖೆಯು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ಹಲವು ಆಹಾರ ತಯಾರಿಕಾ ಕೇಂದ್ರಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ತಪಾಸಣಾ ಅಭಿಯಾನವು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿರದೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.
ಖಾದರ್ ಬುಧವಾರ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಇಲಾಖೆಯು ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಅಳವಡಿಸಿದ್ದು, ಇದರ ಮೂಲಕ ಸಾರ್ವಜನಿಕರಿಂದ ಬರುವ ದೂರುಗಳನ್ನಾಧರಿಸಿ ನೇರ ತಪಾಸಣೆ ನಡೆಸಲಾಗುತ್ತಿದೆ. ಮಂಗಳೂರಿನಲ್ಲಿ ಕ್ಯೂಆರ್ ಕೋಡ್ ಮೂಲಕ ಬಂದ ದೂರಿನನ್ವಯ ಈಗಾಗಲೇ ಎರಡು ಪ್ರಮುಖ ಮಳಿಗೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆಗೊಳಪಡಿಸಿದ್ದಾರೆ ಎಂದರು.
ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಪಿಜಿಗಳಿಗೂ ಕಡ್ಡಾಯವಾಗಿ ಶುಚಿತ್ವ ಹಾಗೂ ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಇದನ್ನು ಪಾಲಿಸದಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಉಡುಪಿಯಲ್ಲಿ ಬಾಳೆಹಣ್ಣಿಗೆ ಕೆಮಿಕಲ್ ಮಿಶ್ರಣ
ಉಡುಪಿಯಲ್ಲಿ ಬಾಳೆಹಣ್ಣುಗಳನ್ನು ಶೀಘ್ರವಾಗಿ ಹಣ್ಣು ಮಾಡಲು ರಾಸಾಯನಿಕ (ಕೆಮಿಕಲ್) ಬಳಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಈಗಾಗಲೇ ಅಲ್ಲಿ ಸಹಾಯಕ ಕಮಿಷನರ್ (AC) ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ರಾಸಾಯನಿಕಗಳು ಪತ್ತೆಯಾಗಿದ್ದು, ನಿಯಮ ಉಲ್ಲಂಘಿಸಿದವರಿಗೆ ಆಹಾರ ಇಲಾಖೆಯಿಂದ ಅವರಿಗೆ ದಂಡ ಹಾಕಲಾಗಿದೆ ಎಂದರು.
ಎಸ್‌ಐಆರ್ 2ನೇ ಹಂತ: ಅರ್ಹರಿಗೆ ಮತದಾನದ ಹಕ್ಕು ನೀಡಿ
ಎಸ್‌ಐಆರ್ ನ 2ನೇ ಹಂತದ ಪ್ರಕ್ರಿಯೆ ಆರಂಭಗೊಂಡಿದ್ದು, ವೆರಿಫಿಕೇಶನ್ ಎಂದರೆ ಕೇವಲ ಅನರ್ಹರನ್ನು ಪಟ್ಟಿಯಿಂದ ತೆಗೆದುಹಾಕುವುದು ಮಾತ್ರವಲ್ಲ, ಅರ್ಹರನ್ನು ಸೇರ್ಪಡೆಗೊಳಿಸುವ ಕೆಲಸವೂ ಆಗಬೇಕು. ಅರ್ಹತೆ ಇಲ್ಲದವರನ್ನು ತೆಗೆದುಹಾಕಿ, ನಿಜವಾದ ಅರ್ಹ ಮತದಾರರಿಗೆ ಅವಕಾಶ ನೀಡಬೇಕು.
ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ನಾಗರಿಕರನ್ನು ಯಾವುದೇ ಕಾರಣಕ್ಕೂ ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಬಾರದು. ರಾಜ್ಯಾದ್ಯಂತ ಮತದಾರರ ಪರಿಷ್ಕರಣೆಗೆ ಒಂದೇ ರೀತಿಯ ವೈಜ್ಞಾನಿಕ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಉಳ್ಳಾಲದಲ್ಲಿ ದಸರಾ ವೇಳೆ 'ಯುವ ದಸರಾ ಸಂಭ್ರಮ'
ಮುಂಬರುವ ದಸರಾ ಮಹೋತ್ಸವದ ಅಂಗವಾಗಿ ಉಳ್ಳಾಲದಲ್ಲಿ ವೈಭವದ 'ಯುವ ದಸರಾ ಸಂಭ್ರಮ' ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆಗಳು ನಡೆದಿವೆ.
ಪುತ್ತೂರು ಶಾಸಕರ ಆರೋಪಕ್ಕೆ ತಿರುಗೇಟು
ಪುತ್ತೂರು ಶಾಸಕರು ನಮ್ಮ ಹಾಗೂ ಸಚಿವರ ಮೇಲೆ ಕಾಳಜಿಯಿಂದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳ ತಪ್ಪು ಕಂಡುಬಂದಲ್ಲಿ ಅವರನ್ನು ತಕ್ಷಣವೇ ಸೇವೆಯಿಂದ ಡಿಸ್ಮಿಸ್ ಮಾಡಬೇಕು. ನನಗೆ ಕೆಆರ್‌ಡಿಎಲ್ (KRDL) ಎಂಜಿನಿಯರ್ ಯಾರು ಎಂದೇ ಗೊತ್ತಿಲ್ಲ. ಶಾಸಕರು ಯಾಕೆ ಅವರಿಗೆ ಕಾಮಗಾರಿಗಳನ್ನು ನೀಡುತ್ತಾರೋ ತಿಳಿಯುತ್ತಿಲ್ಲ. ನಾನು ಯಾವುದೇ ಕಾರಣಕ್ಕೂ ಕೆಆರ್‌ಡಿಎಲ್‌ಗೆ ಕಾಮಗಾರಿ ಕೊಡುವುದಿಲ್ಲ. ಮಳೆಯಿಂದ ಹಾನಿಯಾದ ರಸ್ತೆಗಳ (ರೈನ್ ಡ್ಯಾಮೇಜ್) ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ನೀಡಿದ್ದೇನೆ. ಕೆಆರ್‌ಡಿಎಲ್ ಸಂಸ್ಥೆಯಲ್ಲಿ ಸರಿಯಾದ ಎಂಜಿನಿಯರ್‌ಗಳಾಗಲಿ, ಸಿಬ್ಬಂದಿಗಳಾಗಲಿ ಇಲ್ಲ. ಅವರಿಗೆ ಕೆಲಸ ಕೊಟ್ಟು ಮುಂದೆ ಏನಾದರೂ ಅನಾಹುತ ಅಥವಾ ಸಮಸ್ಯೆಯಾದರೆ ಯಾರು ಹೊಣೆ? ಅವರು ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎಂಬ ಕಾರಣಕ್ಕಾಗಿಯೇ ಅವರಿಗೆ ಕೆಲಸ ನೀಡುವುದನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿದೆ ಎಂದು ಹೇಳಿದರು.
ಸೆ.18ರಂದು ಕರಾವಳಿಯಲ್ಲಿ ಸಚಿವ ಸಂಪುಟ ಸಭೆ
ಕರಾವಳಿ ಭಾಗದ ಅಭಿವೃದ್ಧಿ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸಲು ಸೆ. 18ರಂದು ನಗರದ ಜಿಲ್ಲಾಧಿಕಾರಿ (DC) ಕಚೇರಿಯಲ್ಲಿ ಪ್ರಮುಖ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಯು.ಟಿ. ಖಾದರ್ ಮಾಹಿತಿ ನೀಡಿದರು.

