Dailyhunt Logo
  • Light mode
    Follow system
    Dark mode
    • Play Story
    • App Story
Rabkavi Banhatti: ತೇವಾಂಶ ಕಡಿಮೆ; ಹೆಚ್ಚಿದ ಡೊಣ್ಣೆ ಹುಳುವಿನ ಕಾಟ

Rabkavi Banhatti: ತೇವಾಂಶ ಕಡಿಮೆ; ಹೆಚ್ಚಿದ ಡೊಣ್ಣೆ ಹುಳುವಿನ ಕಾಟ

ಬಕವಿ-ಬನಹಟ್ಟಿ: ಮುಂಗಾರು ಮಳೆ ಕೈಕೊಟ್ಟರೆ ಹಳ್ಳಿಯ ಜನರ ಉಸಿರೇ ನಿಂತಂತಾಗುತ್ತದೆ. ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಆಗಸದತ್ತ ಮುಖ ಮಾಡಿದ್ದಾರೆ. ತೇವಾಂಶ ಇಲ್ಲದ ಬೆಳೆಗೆ ಡೊಣ್ಣೆ ಹುಳುವಿನ ಕಾಟ ಶುರುವಾಗಿದೆ.

ಅಲ್ಪ-ಸ್ವಲ್ಪ ಸುರಿದ ಮಳೆ ಸುರಿದಿದ್ದರಿಂದ ರೈತರು ಗೋವಿನ ಜೋಳ, ಕಬ್ಬು, ಅರಿಷಿನ, ಸಜ್ಜಿ, ಸೂರ್ಯ ಕಾಂತಿ, ಹೆಸರು, ತೊಗರಿ ಹಾಗೂ ತೋಟಗಾರಿಕೆ ಬೆಳೆಗಳಾದ ಈರುಳ್ಳಿ ಸೇರಿದಂತೆ ವಿವಿಧ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ.

ತಾಲೂಕಿನಲ್ಲಿ 28 ಸಾವಿರ ಹೆಕ್ಟೇರ್‌ ಪ್ರದೇಶದ ಪೈಕಿ 25 ಸಾವಿರ ಹೆಕ್ಟೇರ್‌ಪ್ರದೇಶದಲ್ಲಿ ಒಟ್ಟು ಶೇ.87.90 ಬಿತ್ತನೆಯಾಗಿದೆ. ಮಳೆ ಕೈಕೊಟ್ಟಿದ್ದರಿಂದ ಬಿತ್ತಲಾಗಿದ್ದ ಬೆಳೆಗಳು ಒಣಗಿ ಹೋಗಿವೆ.

ತಾಲೂಕಿನ ಬಹುತೇಕ ಕಡೆ ಈ ಬಾರಿ ಮುಂಗಾರು ಕೈ ಕೊಟ್ಟಿದ್ದು, ಮುಂಗಾರು ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ಸಾಕಷ್ಟು ರೈತರಿಗೆ ತುಂಬಾ ತೊಂದರೆಯುಂಟಾಗಿದೆ. ವಾಣಿಜ್ಯ ಬೆಳೆಗಳಾದ ಕಬ್ಬು ಮತ್ತು ಅರಿಷಿಣ ಬೆಳೆಯನ್ನು ಡೊಣ್ಣೆ ಹುಳುಗಳು ಹಾಳು ಮಾಡುತ್ತಿವೆ. ಬೆಳೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿವೆ. ಡೊಣ್ಣೆ ಹುಳುವಿನ ಕಾಟದಿಂದ ಪಾರಾಗಲು ಬೆಳೆಗೆ ಔಷಧಿ ಸಿಂಪರಿಸಬೇಕಿದೆ. ಮೊದಲೇ ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರೀಗ ದುಬಾರಿ ಔಷಧಿ ಸಿಂಪರಣೆ ಮಾಡುವುದು ಮತ್ತೂಂದು ಬರೆ ಎಳೆದಂತಾಗಿದೆ. ಸರ್ಕಾರ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ಔಷಧಿ ಸುಲಭವಾಗುವ ರೀತಿಯಲ್ಲಿ ದೊರೆಯುವಂತೆ ಮಾಡಬೇಕಿದೆ. ಸರ್ಕಾರ ಬೆಳೆ ಪರಿಹಾರ ನೀಡಬೇಕೆಂಬುದು ಈ ಭಾಗದ ರೈತರು ಆಗ್ರಹವಾಗಿದೆ.

ಡೊಣ್ಣೆ ಹುಳುವಿನ ಕಾಟದಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹುಳುಗಳ ನಿಯಂತ್ರಣಕ್ಕೆ ಬೇಕಾಗುವ ಔಷಧಿ ದುಬಾರಿಯಾಗಿದ್ದು, ಸರ್ಕಾರ ಅದರ ನಿಯಂತ್ರಣಕ್ಕೆ ಸಬ್ಸಿಡಿ ದರದಲ್ಲಿ ಔಷಧಿ ವಿತರಿಸಿದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. -ಸದಾಶಿವ ಬಂಗಿ, ಕೃಷಿಕರು, ಜಗದಾಳ

ನೀರು ಕಡಿಮೆಯಾಗಿದ್ದು, ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ಬೆಳೆಗಳಿಗೆ ತೊಂದರೆಯಾಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಬರಬೇಕಿದೆ. ಡೊಣ್ಣೆ ಹುಳುವಿನ ಹಾವಳಿ ಹೆಚ್ಚಿದ್ದು, ಸರ್ಕಾರ ಬೆಳೆ ಪರಿಹಾರ ನೀಡಬೇಕು. -ಧರೆಪ್ಪ, ಕಿತ್ತೂರ ರೈತರು, ತೇರದಾಳ

ಭೂಮಿಯಲ್ಲಿ ತೇವಾಂಶ ಇಲ್ಲದೇ ಇರುವುದರಿಂದ ಡೊಣ್ಣೆ ಹುಳಗಳ ಕಾಟ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ವಾತಾವರಣ ಬದಲಾಗಿದೆ. ಆದರೂ ಡೊಣ್ಣೆ ಹುಳುವಿನ ನಿಯಂತ್ರಣಕ್ಕೆ ಸೂಕ್ತ ಕ್ರಮಗಳಿದ್ದು, ಸ್ಥಳೀಯ ಕೃಷಿ ಇಲಾಖೆ ಸಂಪರ್ಕಿಸಬಹುದು. -ಸಿದ್ದಪ್ಪ ಪಟಿಹಾಳ, ಸಹಾಯಕ ಕೃಷಿ ನಿರ್ದೇಶಕರು, ಜಮಖಂಡಿ

-ಕಿರಣ ಶ್ರೀಶೈಲ ಆಳಗಿ

Dailyhunt
Disclaimer: This content has not been generated, created or edited by Dailyhunt. Publisher: Udayavani