ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ನಿತ್ಯ 3 ಲಕ್ಷಕ್ಕೂ ಅಧಿಕ ಮಂದಿಗಳಲ್ಲಿ ಸೋಂಕು ಪತ್ತೆಯಾಗುತ್ತಿದೆ.
ಕೋವಿಡ್‍ನ ಎರಡನೇ ಅಲೆ ದೇಶದ ಜನತೆಯನ್ನು ಆತಂಕಕ್ಕೆ ದೂಡಿದ್ದು, ರೈಲ್ವೆ ಇಲಾಖೆಯ ಸಿಬ್ಬಂದಿಗಳಿಗೆ ಬೆಂಬಿಡದೆ ಕಾಡುತ್ತಿದೆ. ರೈಲ್ವೆ ಇಲಾಖೆಯ 93 ಸಾವಿರ ಸಿಬ್ಬಂದಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ.
'ದೇಶದಲ್ಲಿನ ಸ್ಥಿತಿಗಿಂತ ರೈಲ್ವೆ ಇಲಾಖೆಯ ಸ್ಥಿತಿ ಭಿನ್ನವಾಗಿಲ್ಲ. ಸುಮಾರು 93 ಸಾವಿರ ರೈಲ್ವೆ ಸಿಬ್ಬಂದಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಕೆಲ ಸಿಬ್ಬಂದಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕೆಲವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ರೈಲ್ವೆಯ 72 ಆಸ್ಪತ್ರೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಹಾಸಿಗೆಗಳನ್ನು ಸೋಂಕಿತರಿಗೆ ಮೀಸಲಾಗಿರಿಸಲಾಗಿದೆ' ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಸುನೀತ್ ಶರ್ಮಾ ತಿಳಿಸಿದ್ದಾರೆ.
'ಟಿಟಿಇ, ನಿರ್ವಾಹಕರು, ಸ್ಟೇಷನ್ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಮಿಕರು ಕೂಡಾ ಸೋಂಕಿಗೊಳಗಾಗಿದ್ದಾರೆ. ಆದರೂ, ರೈಲ್ವೆ ಸೇವೆಯ ಕೆಲಸಗಳು ಸುಗಮವಾಗಿ ಸಾಗಲು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ' ಎಂದೂ ಅವರು ಹೇಳಿದ್ದಾರೆ.ರೈಲ್ವೆ ಇಲಾಖೆಯಲ್ಲಿ ಒಟ್ಟು 13 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

