Dailyhunt Logo
  • Light mode
    Follow system
    Dark mode
    • Play Story
    • App Story
ರಕ್ಷಾಬಂಧನ ಕಾರ್ಯಕ್ರಮದಲ್ಲಿ ಸೀರೆಗಾಗಿ ನೂಕುನುಗ್ಗಲು... ಹಲವು ಮಹಿಳೆಯರು ಅಸ್ವಸ್ಥ

ರಕ್ಷಾಬಂಧನ ಕಾರ್ಯಕ್ರಮದಲ್ಲಿ ಸೀರೆಗಾಗಿ ನೂಕುನುಗ್ಗಲು... ಹಲವು ಮಹಿಳೆಯರು ಅಸ್ವಸ್ಥ

ರೇಲಿ: ಬಿಜೆಪಿ ಮೇಯರ್ ಉಮೇಶ್ ಗೌತಮ್ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿ ಹಲವು ಮಹಿಳೆಯರು ಅಸ್ವಸ್ಥಗೊಂಡ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಕಾರ್ಯಕ್ರಮದಲ್ಲಿ ಸೀರೆ ಸೇರಿದಂತೆ ಹಲವು ಉಡುಗೊರೆಗಳನ್ನು ವಿತರಿಸಲಾಗುತ್ತಿದ್ದು, 20 ಸಾವಿರಕ್ಕೂ ಹೆಚ್ಚು ಮಹಿಳೆಯರು ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಾಬಂಧನದ ಹಿಂದಿನ ದಿನ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ನಿರೀಕ್ಷೆಗಿಂತ ಅಧಿಕವಾಗಿ 20,000ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದರು. ಬೆಳಿಗ್ಗೆಯಿಂದಲೇ ಸಾವಿರಾರು ಮಹಿಳೆಯರು ತಮ್ಮ ಮಕ್ಕಳು ಹಾಗೂ ಹಿರಿಯರೊಂದಿಗೆ ಸ್ಥಳಕ್ಕೆ ಬಂದಿದ್ದರು. ಮೈದಾನದಲ್ಲಿ ಜನಸ್ತೋಮ ಮಿತಿಮೀರಿದ ಕಾರಣ, ರಕ್ಷಣೆಗಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದು ಮಹಿಳೆಯರು ವೇದಿಕೆಯತ್ತ ನುಗ್ಗಲು ಯತ್ನಿಸಿದರು.

ಪೊಲೀಸರಿಗೆ ಸಿಗದ ಮುನ್ಸೂಚನೆ:

ಅತಿಯಾದ ಬಿಸಿಲು ಮತ್ತು ಉರಿ ಸೆಖೆಯ ನಡುವೆ ಉಂಟಾದ ನೂಕುನುಗ್ಗಲಿನಿಂದ ಅನೇಕ ಮಹಿಳೆಯರು ಪ್ರಜ್ಞೆ ತಪ್ಪಿ ಬಿದ್ದರು. ಗಾಯಗೊಂಡವರನ್ನು ತಕ್ಷಣವೇ ಆಂಬುಲೆನ್ಸ್‌ಗಳ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು. ಈ ಬೃಹತ್ ಕಾರ್ಯಕ್ರಮದ ಕುರಿತು ಆಯೋಜಕರು ನಮಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅನುರಾಗ್ ಆರ್ಯ ತಿಳಿಸಿದ್ದಾರೆ.

ಸ್ಥಳದಲ್ಲಿ ಚಲ್ಲಾಪಿಲ್ಲಿಯಾದ ವಸ್ತುಗಳು, ಕಳೆದುಹೋದ ಮಕ್ಕಳು:

ಉಡುಗೊರೆ ಪಡೆದುಕೊಳ್ಳಲು ಮಹಿಳೆಯರು ಮುಗಿಬಿದ್ದಾಗ ಪರಿಸ್ಥಿತಿ ಕೈಮೀರಿ ಹೋಯಿತು. ನೂಕುನುಗ್ಗಲಿನಲ್ಲಿ ಹಲವು ಮಕ್ಕಳು ತಮ್ಮ ಪೋಷಕರಿಂದ ಬೇರ್ಪಟ್ಟಿದ್ದು, ಅವರನ್ನು ಹುಡುಕಲು ವೇದಿಕೆಯಿಂದ ಮೈಕ್ ಮೂಲಕ ನಿರಂತರವಾಗಿ ಧ್ವನಿವರ್ಧಕಗಳಲ್ಲಿ ಮನವಿ ಮಾಡಲಾಯಿತು. ಇಡೀ ಮೈದಾನದಲ್ಲಿ ಮಹಿಳೆಯರ ಚಪ್ಪಲಿಗಳು, ಒಡೆದ ಬಳೆಗಳು ಇನ್ನಿತರ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಕಾರ್ಯಕ್ರಮದ ಆಯೋಜಕರ ವಿರುದ್ಧ ಮಹಿಳೆಯರು ವ್ಯವಸ್ಥೆಗಳ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿರಾರು ಮಹಿಳೆಯರನ್ನು ಆಹ್ವಾನಿಸಿದ್ದರೂ ಜನಸಂದಣಿ ನಿಯಂತ್ರಣಕ್ಕೆ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani