Dailyhunt
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು 5 ದೈನಂದಿನ ಪಾನೀಯಗಳು

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು 5 ದೈನಂದಿನ ಪಾನೀಯಗಳು

ದೀರ್ಘಕಾಲದ ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತದ ಸಕ್ಕರೆ ಮಟ್ಟವನ್ನು (Blood Sugar Levels) ಸ್ಥಿರವಾಗಿಡುವುದು ಅತ್ಯಗತ್ಯ. ಅನಿಯಂತ್ರಿತ ಸಕ್ಕರೆ ಮಟ್ಟ (Uncontrolled blood sugar) ಆಯಾಸ, ತೂಕ ಹೆಚ್ಚಳ ಹಾಗೂ ಟೈಪ್ 2 ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ.

ಆಧುನಿಕ ವೈದ್ಯಕೀಯ ಚಿಕಿತ್ಸೆಗಳ ಜೊತೆಗೆ, ಕೆಲ ನೈಸರ್ಗಿಕ ಪಾನೀಯಗಳು ಚಯಾಪಚಯ ಸಮತೋಲನವನ್ನು (metabolic balance) ಕಾಪಾಡಿಕೊಳ್ಳಲು ಉತ್ತಮ ಫಲಿತಾಂಶಗಳನ್ನು ನೀಡಿವೆ.

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH) ಸಂಶೋಧನೆಯ ಪ್ರಕಾರ, ಕೆಲ ಗಿಡಮೂಲಿಕೆ ಚಹಾಗಳು ಮತ್ತು ಪಾನೀಯಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಮತ್ತು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಸಹಾಯ ಮಾಡುವ 5 ಪ್ರಮುಖ ಪಾನೀಯಗಳು ಇಲ್ಲಿವೆ:

1. ಹಾಗಲಕಾಯಿ ರಸ (Bitter gourd juice):

ಹಾಗಲಕಾಯಿ ತನ್ನ ಮಧುಮೇಹ ವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದೆ. ಇದರಲ್ಲಿರುವ 'ಚರಾಂಟಿನ್' (charantin) ಮತ್ತು 'ಪಾಲಿಪೆಪ್ಟೈಡ್-ಪಿ' (polypeptide-p) ಎಂಬ ಸಂಯುಕ್ತಗಳು ಇನ್ಸುಲಿನ್‌ನಂತೆ ಕಾರ್ಯ ನಿರ್ವಹಿಸಿ, ದೇಹ ಗ್ಲೂಕೋಸ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಹಾಯ ಮಾಡುತ್ತದೆ.

ತಯಾರಿಸುವ ವಿಧಾನ: ಒಂದು ಮಧ್ಯಮ ಗಾತ್ರದ ಹಾಗಲಕಾಯಿಯನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಅರ್ಧ ಕಪ್ ನೀರಿನೊಂದಿಗೆ ನಯವಾಗಿ ರುಬ್ಬಿಕೊಳ್ಳಿ. ರುಚಿಗೆ ಸ್ವಲ್ಪ ನಿಂಬೆ ರಸ ಅಥವಾ ಉಪ್ಪನ್ನು ಸೇರಿಸಿ ಸೋಸಿಕೊಳ್ಳಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದು ಉತ್ತಮ.

ಹಾಗಲಕಾಯಿಯನ್ನು ಅತಿಯಾಗಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಕುಸಿತ ಉಂಟಾಗಬಹುದು, ಆದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ಸೇವಿಸಲು ಪ್ರಾರಂಭಿಸುವುದು ಒಳಿತು.

2. ಮೆಂತೆ ನೀರು ((Fenugreek Water):

ಮೆಂತೆ ಕಾಳುಗಳಲ್ಲಿ ಕರಗುವ ನಾರಿನಂಶ (Soluble fibre) ಮತ್ತು '4-ಹೈಡ್ರಾಕ್ಸಿ ಐಸೊಲ್ಯೂಸಿನ್' (4-hydroxyisoleucine) ಎಂಬ ಸಂಯುಕ್ತವಿದ್ದು, ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಊಟದ ನಂತರ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.

ತಯಾರಿಸುವ ವಿಧಾನ: 1-2 ಚಮಚ ಮೆಂತೆ ಕಾಳುಗಳನ್ನು ಒಂದು ಕಪ್ ನೀರಿನಲ್ಲಿ ರಾತ್ರಿ ನೆನೆಸಿಡಿ. ಈ ನೀರನ್ನು ಬೆಳಿಗ್ಗೆ ಸೋಸಿ ಖಾಲಿ ಹೊಟ್ಟೆಗೆ ಕುಡಿಯಿರಿ. ಇದು ರಕ್ತದಲ್ಲಿನ ಗ್ಲೂಕೋಸ್ ಏರಿಳಿತವನ್ನು ತಡೆಯುತ್ತದೆ.

3. ದಾಲ್ಚಿನ್ನಿ (Cinnamon) ಚಹಾ:

ದಾಲ್ಚಿನ್ನಿ ಕೇವಲ ಮಸಾಲೆ ಪದಾರ್ಥ ಮಾತ್ರವಲ್ಲದೇ, ಇದು ನೈಸರ್ಗಿಕ ಸಕ್ಕರೆ ಸ್ಥಿರೀಕಾರಕವೂ (stabilizer) ಹೌದು. ಇದರಲ್ಲಿರುವ 'ಸಿನಮಾಲ್ಡಿಹೈಡ್' (cinnamaldehyde) ಅಂಶ ಇನ್ಸುಲಿನ್ ಕಾರ್ಯವನ್ನು ಅನುಕರಿಸುತ್ತದೆ. ಅಧ್ಯಯನಗಳ ಪ್ರಕಾರ, ದಾಲ್ಚಿನ್ನಿ ಚಹಾ ಊಟದ ನಂತರದ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತಯಾರಿಸುವ ವಿಧಾನ: ಕುದಿಯುವ ನೀರಿಗೆ 1-2 ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ 5-10 ನಿಮಿಷಗಳ ಕಾಲ ಕುದಿಸಿ. ನಂತರ ಸೋಸಿ ಊಟದ ನಂತರ ಬಿಸಿ ಇರುವಾಗಲೇ ಕುಡಿಯಿರಿ.

4. ದಾಸವಾಳದ (Hibiscus) ಚಹಾ:

ದಾಸವಾಳದ ಒಣಗಿದ ದಳಗಳಿಂದ ತಯಾರಿಸಿದ ಈ ಚಹಾದಲ್ಲಿ ಆಂಥೋಸಯಾನಿನ್ (anthocyanins) ಎಂಬ ಉತ್ಕರ್ಷಣ ನಿರೋಧಕಗಳು (Antioxidants) ಸಮೃದ್ಧವಾಗಿವೆ. ಇದು ಉರಿಯೂತ ಕಡಿಮೆ ಮಾಡುತ್ತದೆ. ಉಪವಾಸದ ಅವಧಿಯ ರಕ್ತದ ಗ್ಲೂಕೋಸ್ ಮಟ್ಟ (Fasting blood glucose) ಮತ್ತು ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ತಯಾರಿಸುವ ವಿಧಾನ: 1 ಕಪ್ ಕುದಿಯುವ ನೀರಿಗೆ 1-2 ಚಮಚ ಒಣಗಿದ ದಾಸವಾಳದ ದಳಗಳನ್ನು ಸೇರಿಸಿ 5 ನಿಮಿಷ ಬಿಡಿ. ನಂತರ ಸೋಸಿ ಕುಡಿಯಿರಿ. ಬೇಕಿದ್ದಲ್ಲಿ ಕೆಲ ಹನಿ ಜೇನುತುಪ್ಪ ಸೇರಿಸಬಹುದು.

5. ಅಲೋವೆರಾ (Aloe Vera) ರಸ:

ಅಲೋವೆರಾ ಅಥವಾ ಲೋಳೆಸರ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವ ಮತ್ತು ಗ್ಲೂಕೋಸ್ ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿರುವ 'ಪಾಲಿಸ್ಯಾಕರೈಡ್‌ಗಳು' (polysaccharides) ಚಯಾಪಚಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.

ತಯಾರಿಸುವ ವಿಧಾನ: ಅಲೋವೆರಾ ಎಲೆಯಿಂದ 1-2 ಚಮಚ ತಾಜಾ ಜೆಲ್ ತೆಗೆದು 1 ಲೋಟ ನೀರಿನಲ್ಲಿ ಚೆನ್ನಾಗಿ ಬೆರೆಸಿ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಬಹುದು.

ಜೀವನಶೈಲಿಯ ಮಹತ್ವ ಮತ್ತು ಮುನ್ನೆಚ್ಚರಿಕೆಗಳು

ಈ ಆರೋಗ್ಯಕರ ಪಾನೀಯಗಳು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದರೊಂದಿಗೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ನಿದ್ದೆಯ (7-8) ಅಭ್ಯಾಸ ಅಳವಡಿಸಿಕೊಂಡರೆ ಮಾತ್ರ ಹೆಚ್ಚಿನ ಪ್ರಯೋಜನ ಪಡೆಯಬಹುದು.

ಗಮನಿಸಬೇಕಾದ ಅಂಶ:

ಹಾಗಲಕಾಯಿ ರಸ ಮಧುಮೇಹದ ಮಾತ್ರೆಗಳನ್ನು ತೆಗೆದುಕೊಳ್ಳುವವರಲ್ಲಿ ಸಕ್ಕರೆ ಮಟ್ಟ ಅತಿಯಾಗಿ ಕಡಿಮೆ ಮಾಡಬಹುದು (Hypoglycemia). ಹಾಗೆಯೇ, ಅಲೋವೆರಾವನ್ನು ಅತಿಯಾಗಿ ಸೇವಿಸುವುದು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ಪಾನೀಯಗಳನ್ನು ನಿಮ್ಮ ದೈನಂದಿನ ದಿನಚರಿಯಲ್ಲಿ ಸೇರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಕಡ್ಡಾಯ.

Dailyhunt
Disclaimer: This content has not been generated, created or edited by Dailyhunt. Publisher: Udayavani