Dailyhunt Logo
  • Light mode
    Follow system
    Dark mode
    • Play Story
    • App Story
Ram temple donation row:ಕಾಂಗ್ರೆಸ್‌ನ 'ಡಬಲ್ ಸ್ಟ್ಯಾಂಡರ್ಡ್' ವಿರುದ್ಧ ಕಂಗನಾ ಕೆಂಡಾಮಂಡಲ!

Ram temple donation row:ಕಾಂಗ್ರೆಸ್‌ನ 'ಡಬಲ್ ಸ್ಟ್ಯಾಂಡರ್ಡ್' ವಿರುದ್ಧ ಕಂಗನಾ ಕೆಂಡಾಮಂಡಲ!

ಶಿಮ್ಲಾ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವುದನ್ನೇ ವರ್ಷಗಳ ಕಾಲ ಸತತವಾಗಿ ವಿರೋಧಿಸುತ್ತಾ ಬಂದಿದ್ದ ಕಾಂಗ್ರೆಸ್ ಪಕ್ಷ, ಈಗ ಅಲ್ಲಿನ ದೇಣಿಗೆ ಹಣ ದುರುಪಯೋಗದ ವಿಷಯವನ್ನು ಇಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಬುಧವಾರ ಗಂಭೀರವಾಗಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಈ ಡಬಲ್ ಸ್ಟ್ಯಾಂಡರ್ಡ್ಸ್ ಅಸಲಿ ಮುಖವಾಡ ಏನೆಂಬುದು ಹಿಮಾಚಲ ಪ್ರದೇಶದ ಜನತೆಗೆ ಮಾತ್ರವಲ್ಲದೆ ಇಡೀ ದೇಶದ ಜನರಿಗೂ ಚೆನ್ನಾಗಿ ಗೊತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರದ ದೇಣಿಗೆಯಲ್ಲಿ ನಡೆದಿರುವ ಅಕ್ರಮವು ಕೇವಲ ಹಣದ ಕಳ್ಳತನವಲ್ಲ, ಬದಲಿಗೆ ವಿಶ್ವದಾದ್ಯಂತ ಇರುವ ಕೋಟ್ಯಂತರ ಭಕ್ತರ ಶ್ರದ್ಧೆ ಮತ್ತು ನಂಬಿಕೆಗೆ ಎಸಗಿದ ಭೀಕರ ದ್ರೋಹ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮಂಗಳವಾರ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯದ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಕೂಡ, "ಒಂದು ವೇಳೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಮ ಮಂದಿರದ ಕಾಣಿಕೆ ಕಳ್ಳತನದಂತಹ ಘಟನೆ ನಡೆದಿದ್ದರೆ, ಇಷ್ಟೊತ್ತಿಗೆ ಬಿಜೆಪಿ ಇಡೀ ದೇಶಕ್ಕೇ ಬೆಂಕಿ ಹಚ್ಚುತ್ತಿತ್ತು" ಎಂದು ಲೇವಡಿ ಮಾಡಿದ್ದರು. ಕಾಂಗ್ರೆಸ್ ನಾಯಕರ ಈ ಹೇಳಿಕೆಗಳಿಗೆ ಬುಧವಾರ ಕಂಗನಾ ರಣಾವತ್ ಕಠಿಣ ಶಬ್ದಗಳಲ್ಲಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಕಂಗನಾ, "ವರ್ಷಗಳ ಕಾಲ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ, ಮಂದಿರ ನಿರ್ಮಾಣಕ್ಕೆ ಅಡ್ಡಗಾಲು ಹಾಕಿದ್ದ ಇದೇ ಕಾಂಗ್ರೆಸ್ ನಾಯಕರು ಇಂದು ರಾಮ ಮಂದಿರದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಶ್ರೀರಾಮನು ಕೋಟ್ಯಂತರ ಭಾರತೀಯರ ಆರಾಧ್ಯ ದೈವ ಮತ್ತು ನಂಬಿಕೆಯ ಸಂಕೇತವಾಗಿದ್ದಾನೆ. ನೂರಾರು ವರ್ಷಗಳ ನಿರಂತರ ಹೋರಾಟ, ತಪಸ್ಸು ಮತ್ತು ಬಲಿದಾನಗಳ ನಂತರವಷ್ಟೇ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣ ಸಾಧ್ಯವಾಗಿದೆ.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವು ಇಲ್ಲಿನ ಸ್ಥಳೀಯ ಹಿಂದೂ ದೇವಸ್ಥಾನಗಳ ಹಣವನ್ನು ಸರ್ಕಾರದ ಯೋಜನೆಗಳಿಗೆ ಬಳಸಿಕೊಳ್ಳಲು ಸಂಚು ರೂಪಿಸಿತ್ತು ಮತ್ತು ಧಾರ್ಮಿಕ ಸಂಸ್ಥೆಗಳ ಸಂಪನ್ಮೂಲಗಳನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಿತ್ತು. ಇಂತಹ ಇತಿಹಾಸ ಹೊಂದಿರುವ ಕಾಂಗ್ರೆಸ್ ನಾಯಕರು ಇಂದು ರಾಮ ಮಂದಿರದ ಬಗ್ಗೆ ನೀತಿಪಾಠ ಮಾತನಾಡುತ್ತಿರುವುದು ಹಾಸ್ಯಾಸ್ಪದ," ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಯು ಸದಾ ಸನಾತನ ಸಂಸ್ಕೃತಿ, ಧಾರ್ಮಿಕ ನಂಬಿಕೆ ಮತ್ತು ಭಾರತದ ಭವ್ಯ ಪರಂಪರೆಯನ್ನು ರಕ್ಷಿಸಲು ಬದ್ಧವಾಗಿದೆ ಎಂದ ಅವರು, ಬಿಜೆಪಿ ಎಂದಿಗೂ ಧರ್ಮವನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಂಡಿಲ್ಲ, ಬದಲಿಗೆ ದೇಶದ ಸಾಂಸ್ಕೃತಿಕ ಗುರುತಾಗಿ ಗೌರವಿಸಿದೆ ಎಂದಿದ್ದಾರೆ. ಹಿಮಾಚಲ ಪ್ರದೇಶದ ಜನತೆಗೆ ಈಗ ಕಾಂಗ್ರೆಸ್‌ನ ಅಸಲಿ ಚಹರೆ ಅರ್ಥವಾಗಿದೆ. ಜನರಿಗೆ ಇಂದು ಬೇಕಿರುವುದು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣವೇ ಹೊರತು, ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ತಂತ್ರಗಾರಿಕೆಯಲ್ಲ. ರಾಮ ಮಂದಿರದಂತಹ ಪವಿತ್ರ ವಿಷಯವನ್ನು ರಾಜಕೀಯಗೊಳಿಸುವ ಬದಲು, ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ತನ್ನ ವೈಫಲ್ಯಗಳಿಗೆ ಉತ್ತರಿಸಲಿ ಮತ್ತು ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಿ ಎಂದು ಸವಾಲು ಹಾಕಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani