ರಾಮಾಯಣದ ಕಥೆಯನ್ನು ಬಾಲ್ಯದಿಂದಲೂ ಕೇಳಿಕೊಂಡು ಬೆಳೆದಿದ್ದೇವೆ. ತಂದೆ ದಶರಥನಿಗೆ ನೀಡಿದ ಮಾತಿನಂತೆ, ಶ್ರೀರಾಮನು ಸೀತೆಯೊಡನೆ ವನವಾಸಕ್ಕೆ ಹೊರಟ, ಅಣ್ಣ-ಅತ್ತಿಗೆಯ ಕಾವ ಲಿಗೆ ಲಕ್ಷ್ಮಣನೂ ಅವರೊಡನೆ ಹೋದದ್ದು, ರಾವಣ ಸೀತೆಯನ್ನು ಅಪಹರಿಸಿದ್ದು, ರಾವಣನ ವಧೆ...ಇದು ರಾಮಾಯಣದ ಬಗ್ಗೆ ನಮಗೆ ತಿಳಿದಿರುವ ಸಂಗತಿಗಳು.
ರಾಮಾಯಣದ ಕೆಲವು ಗೊತ್ತಿರದ ವಿಷಯಗಳನ್ನು ಇಲ್ಲಿ ನೀಡಲಾಗಿದೆ.
ಗಾಯತ್ರಿ ಮಂತ್ರಕ್ಕೆ ಬುನಾದಿ ರಾಮಾಯಣ
ವಾಲ್ಮೀಕಿ ರಾಮಾಯಣವು ಅತ್ಯಂತ ಹೆಚ್ಚು ಜನಪ್ರಿಯವಾದುದು. ಈ ಮಹಾಕಾವ್ಯವು ಒಟ್ಟು 24,000 ಶ್ಲೋಕಗಳನ್ನು ಒಳಗೊಂಡಿದೆ. ಪ್ರತೀ 1,000 ಶ್ಲೋಕಗಳ ಅನಂತರ ಬರುವ ಮೊದಲ ಅಕ್ಷರದಿಂದ ಗಾಯತ್ರಿ ಮಂತ್ರ ರೂಪುಗೊಂಡಿದೆ. ಅದರಂತೆ ಗಾಯತ್ರಿ ಮಂತ್ರವು 24 ಅಕ್ಷರಗಳನ್ನು ಹೊಂದಿದೆ.
"ಗುಡಾಕೇಶ'- ಲಕ್ಷ್ಮಣನ ಅನ್ವರ್ಥ ನಾಮ
ಲಕ್ಷ್ಮಣನನ್ನು "ಗುಡಾಕೇಶ' ಎಂದೂ ಕರೆಯುತ್ತಾರೆ. ರಾಮನ ವನವಾಸದ ಸಂದರ್ಭದಲ್ಲಿ ಲಕ್ಷ್ಮಣನು ತನ್ನ ಅಣ್ಣ ರಾಮ ಮತ್ತು ಅತ್ತಿಗೆ ಸೀತಾ ಮಾತೆಯನ್ನು 14 ವರ್ಷಗಳ ಕಾಲ ನಿದ್ದೆಯಿಲ್ಲದೆ ಕಾವಲು ಕಾದಿದ್ದಾನೆ. ಆದ್ದರಿಂದ ಲಕ್ಷ್ಮಣನಿಗೆ "ಗುಡಾಕೇಶ' ಎಂಬ ಅನ್ವರ್ಥನಾಮ ಲಭಿಸಿದೆ. ಗುಡಾಕೇಶ ಎಂದರೆ ನಿದ್ದೆಯನ್ನು ಜಯಿಸಿದವನು ಎಂದರ್ಥ.
ಲಕ್ಷ್ಮಣನಿಗೆ ಮರಣದಂಡನೆ ವಿಧಿಸಿದ ರಾಮ
ರಾವಣನ ವಧೆಯ ಬಳಿಕ ಅಯೋಧ್ಯೆಗೆ ಮರಳಿದ ಶ್ರೀರಾಮನಿಗೆ ಪಟ್ಟಾಭಿಷೇಕವಾಯಿತು. ಒಂದು ದಿನ ಯಮ ದೇವ, ರಾಮನಲ್ಲಿಗೆ ಬಂದು ಮುಖ್ಯವಾದ ವಿಷಯ ಚರ್ಚಿಸುವುದಿದೆ. ನಮ್ಮೀರ್ವರ ನಡುವಣ ಸಮಾಲೋಚನೆಯ ವೇಳೆ ಯಾರನ್ನೂ ಒಳಗಡೆ ಬರದಂತೆ ನೋಡಿಕೊಳ್ಳುವಂತೆ ಮತ್ತು ಬಂದರೆ ಅವರಿಗೆ ಮರಣದಂಡನೆ ನೀಡುವಂತೆ ರಾಮನಲ್ಲಿ ಹೇಳುತ್ತಾನೆ. ಅದರಂತೆ ರಾಮನು ತಮ್ಮ ಲಕ್ಷ್ಮಣನನ್ನು ಕರೆದು ಬಾಗಿಲಿನಲ್ಲಿ ನಿಲ್ಲಿಸಿ, ತಾನು ಹೇಳುವವರೆಗೆ ಯಾರನ್ನೂ ಒಳಗೆ ಬಿಡಕೂಡದು ಎಂದು ಸೂಚನೆ ನೀಡುತ್ತಾನೆ. ಈ ವೇಳೆ ರಾಮನನ್ನು ಭೇಟಿಯಾಗಲು ದೂರ್ವಾಸ ಮುನಿಗಳು ಆಗಮಿಸುತ್ತಾರೆ. ಆದರೆ ಲಕ್ಷ್ಮಣ ಅವರನ್ನು ಬಾಗಿಲಲ್ಲೇ ತಡೆಯುತ್ತಾನೆ. ಇದರಿಂದ ಕ್ರುದ್ಧರಾದ ದೂರ್ವಾಸ ಮುನಿಗಳು ಇಡೀ ಅಯೋಧ್ಯೆಗೆ ಶಾಪ ನೀಡಲು ಮುಂದಾಗುತ್ತಾರೆ. ಅಯೋಧ್ಯೆಯನ್ನು ರಕ್ಷಿಸುವ ಸಲುವಾಗಿ ಲಕ್ಷ್ಮಣ, ಅಣ್ಣನಿಗೆ ನೀಡಿದ್ದ ಮಾತನ್ನು ಮೀರಿ, ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿ ಒಳಗಡೆ ಹೋಗಿ ದೂರ್ವಾಸ ಮುನಿಗಳು ಬಂದಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಗೊಂದಲಗೊಂಡ ರಾಮನು ಮಾತು ಕೊಟ್ಟಂತೆ ನಡೆದುಕೊಳ್ಳಲು ಹಿಂಜರಿದು ಗುರುಗಳಾದ ವಸಿಷ್ಠರ ಮಾರ್ಗದರ್ಶನ ಕೇಳುತ್ತಾನೆ. ಆಗ ವಸಿಷ್ಠರು ನೀನು ಲಕ್ಷ್ಮಣನನ್ನು ಬಿಟ್ಟುಬಿಡು. ಅದು ಮರಣದಂಡನೆಗೆ ಸಮನಾಗಿರುತ್ತದೆ ಎನ್ನುತ್ತಾರೆ. ಇದನ್ನು ಕೇಳಿದ ಲಕ್ಷ್ಮಣನು ತಾನು ಅಣ್ಣನನ್ನು ಅರೆಕ್ಷಣ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಹೇಳಿ, ಅಣ್ಣನ ಮಾತನ್ನು ಉಳಿಸಲೋಸುಗ ಜಲಸಮಾಧಿಯಾಗುತ್ತಾನೆ.
ರಾಮನ ಅಕ್ಕ ಶಾಂತಾ!
ರಾಮನ ತಮ್ಮಂದಿರಾದ ಲಕ್ಷ್ಮಣ, ಭರತ, ಶತ್ರುಘ್ನರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ನಾಲ್ವರು ಸಹೋದರರಿಗೆ ಅಕ್ಕನೋರ್ವಳು ಇದ್ದಳು ಎಂಬ ಬಗ್ಗೆ ಯಾರಿಗೂ ಅಷ್ಟೇನೂ ಮಾಹಿತಿ ಇಲ್ಲ. ರಾಮನಿಗೆ ಶಾಂತಾ ಎಂಬ ಅಕ್ಕ ಇದ್ದಳು. ಆಕೆ ದಶರಥ ಮತ್ತು ಕೌಸಲ್ಯೆಯ ಹಿರಿಯ ಮಗಳು. ಒಮ್ಮೆ ಅಂಗದೇಶದ ರಾಜ ರೋಮಪದ ಮತ್ತು ಆತನ ಪತ್ನಿ ವರ್ಷಿಣಿ ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಈ ವೇಳೆ ತಮಗೆ ಮಕ್ಕಳಿಲ್ಲ ಎನ್ನುವುದರ ಬಗ್ಗೆ ದಂಪತಿ ನೋವನ್ನು ವ್ಯಕ್ತಪಡಿಸಿದಾಗ ದಶರಥನು ತನ್ನ ಮಗಳಾದ ಶಾಂತಾಳನ್ನು ಅವರಿಗೆ ಕೊಡುತ್ತಾನೆ. ಇದರಿಂದ ಸಂತಸಗೊಂಡ ರೋಮಪದ ಮತ್ತು ವರ್ಷಿಣಿ ದಂಪತಿ, ಶಾಂತಾಳನ್ನು ತಮ್ಮ ಮಗಳಾಗಿ ಸ್ವೀಕರಿಸುತ್ತಾರೆ.
ವಿಷ್ಣು ಸಹಸ್ರನಾಮದಲ್ಲಿ 394ನೇ ಹೆಸರು "ರಾಮ'
ವಿಷ್ಣುವಿನ 10 ಅವತಾರಗಳಲ್ಲಿ 7ನೇಯದ್ದು ಶ್ರೀರಾಮನ ಅವತಾರ. ವಿಷ್ಣುಸಹಸ್ರನಾಮದಲ್ಲಿ ವಿಷ್ಣುವಿನ ಒಂದು ಸಾವಿರ ಹೆಸರುಗಳನ್ನು ಹೇಳಲಾಗಿದ್ದು, ಅದರ ಪ್ರಕಾರ ರಾಮ ಎನ್ನುವುದು ವಿಷ್ಣುವಿನ 394ನೇ ಹೆಸರು. ಗುರು ಮಹರ್ಷಿ ವಸಿಷ್ಠರ ಸಲಹೆಯಂತೆ ದಶರಥ ತನ್ನ ಹಿರಿಯ ಪುತ್ರನಿಗೆ ರಾಮ ಎಂದು ನಾಮಕರಣ ಮಾಡಿದ್ದರು. ರಾಮ ಎಂಬ ಹೆಸರು ಅಗ್ನಿ ಬೀಜ ಮತ್ತು ಅಮೃತ ಬೀಜ ಎಂಬ ಎರಡು ಬೀಜಾಕ್ಷರಗಳಿಂದ ಕೂಡಿದ್ದು, ಇವು ನಮ್ಮ ದೇಹ, ಆತ್ಮ ಮತ್ತು ಮನಸ್ಸಿಗೆ ಶಕ್ತಿ, ಮೌಲ್ಯ ಮತ್ತು ಪ್ರಗತಿಯನ್ನು ತಂದುಕೊಡುತ್ತವೆ. ರಾಮನ ಬಗ್ಗೆ ಮಹಾಭಾರತದಲ್ಲೂ ಉಲ್ಲೇಖವಿದ್ದು, ರಾಮ ನಾಮವನ್ನು ಮೂರು ಬಾರಿ ಜಪಿಸಿದರೆ ಒಂದು ಸಾವಿರ ದೇವರು, ದೇವತೆಗಳ ನಾಮ ಜಪಿಸುವುದಕ್ಕೆ ಸರಿಸಮಾನ ಎಂದು ಶಿವ ದೇವರು ಒಮ್ಮೆ ಹೇಳಿದ್ದರು ಎಂಬ ಬಗ್ಗೆ ಉಲ್ಲೇಖವಿದೆ.
ಲಂಕಾದ ರಾಜ ರಾವಣ ಸಂಗೀತ ಪ್ರಿಯ
ಲಂಕೆಯ ರಾಜನಾಗಿದ್ದ ರಾವಣ ಇಡೀ ರಾಮಾಯಣ ಕಥೆಯ ಪ್ರಮುಖ ಖಳನಾಯಕ. ಅಚ್ಚರಿಯ ವಿಷಯ ಎಂದರೆ ಈತ ಓರ್ವ ಉತ್ತಮ ವೀಣಾವಾದಕ. ಆದ್ದರಿಂದಲೇ ರಾವಣನ ಧ್ವಜದಲ್ಲಿ ವೀಣೆಯ ಚಿಹ್ನೆ ಇದೆ. ಶಿವನ ಭಕ್ತನಾಗಿರುವ ಈತ ವೇದಗಳನ್ನೂ ಅಭ್ಯಸಿಸಿದ್ದನು. ಸಂಗೀತ ಪ್ರಿಯನಾಗಿರುವ ಈತ ತನ್ನ ಹಾಡುಗಳನ್ನು ಶಿವನಿಗೆ ಅರ್ಪಿಸುತ್ತಿದ್ದನು. ತನ್ನ ಅಸುರ ಗುಣಗಳ ನಡುವೆ ಈತನಿಗಿದ್ದ ಸಂಗೀತಾಸಕ್ತಿ, ದೈವಭಕ್ತಿ ಎಲ್ಲವೂ ಹಿನ್ನೆಲೆಗೆ ಸರಿಯುವಂತಾಯಿತು.
ರಾಮನಿಂದ ವಧೆಯಾಗುವುದು ರಾವಣನಿಗೆ ಮೊದಲೇ ತಿಳಿದಿತ್ತು!
ರಾಮಾಯಣ ಕಥೆಯ ಅಂತ್ಯದಲ್ಲಿ ಶ್ರೀರಾಮ ತನ್ನ ಪತ್ನಿ ಸೀತೆಯನ್ನು ಅಪಹರಣಗೈದು ತನ್ನ ಒತ್ತೆಸೆರೆಯಲ್ಲಿರಿಸಿಕೊಂಡಿದ್ದ ಲಂಕಾಧೀಶನಾದ ರಾವಣನನ್ನು ಸಂಹಾರ ಮಾಡಿ ಅಯೋಧ್ಯೆಗೆ ಮರಳಿ ಪಟ್ಟಾಭಿಷಿಕ್ತನಾದ ಕಥೆ ಎಲ್ಲರಿಗೂ ತಿಳಿದದ್ದೇ ಆಗಿದೆ. ಆದರೆ ತಾನು ರಾಮನಿಂದ ವಧಿಸಲ್ಪಡುವುದು ರಾವಣನಿಗೆ ಮೊದಲೇ ತಿಳಿದಿತ್ತು ಎಂಬ ಅಚ್ಚರಿಯ ವಿಷಯ ಬಹುತೇಕರಿಗೆ ತಿಳಿದಿಲ್ಲ. ಅತ್ಯಂತ ಕ್ರೂರಿಯಾದ ರಾವಣನನ್ನು ಪ್ರತಿಯೊಬ್ಬರೂ ದ್ವೇಷಿಸುತ್ತಿದ್ದ ನೀಚ ರಾಕ್ಷಸನಾಗಿದ್ದನು. ಸೀತಾಮಾತೆಯ ಅಪಹರಣದ ಬಳಿಕ ಶ್ರೀರಾಮ ಲಂಕೆಗೆ ದಾಳಿ ಮಾಡುತ್ತಿರುವ ಬಗೆಗೆ ಮಾಹಿತಿ ಪಡೆದ ರಾವಣನ ಸಹೋದರರು ರಾಮನಿಗೆ ಶರಣಾಗುವಂತೆ ಭಿನ್ನವಿಸಿಕೊಂಡಿದ್ದರು. ಆದರೆ ರಾವಣ ಸಹೋದರರ ಮಾತನ್ನು ತಿರಸ್ಕರಿಸಿ, ಒಂದು ವೇಳೆ ರಾಮ ಮತ್ತು ಲಕ್ಷ್ಮಣರು ಸಾಮಾನ್ಯ ಮಾನವರಾಗಿದ್ದರೆ ನಾನು ಅವರನ್ನು ಅತ್ಯಂತ ಸುಲಭವಾಗಿ ಸೋಲಿಸುತ್ತೇನೆ. ಅವರು ದೇವರಾಗಿದ್ದಲ್ಲಿ ನಾನು ಮುಕ್ತಿ ಪಡೆಯುತ್ತೇನೆ ಎಂದು ಹೇಳುವ ಮೂಲಕ ರಾವಣ ತನ್ನ ಮನದಿಚ್ಛೆಯನ್ನು ಸಹೋದರಲ್ಲಿ ತೆರೆದಿಟ್ಟಿದ್ದನು.
(ಸಂಗ್ರಹ ಮಾಹಿತಿ)

