ಇಂದಿನ ತಂತ್ರಜ್ಞಾನ ಆಧಾರಿತ ಜಗತ್ತಿನಲ್ಲಿ ಪ್ರತಿಯೊಬ್ಬರೂ ಯಶಸ್ಸಿನ ಬೆನ್ನೇರಿ ಓಡುತ್ತಿದ್ದಾರೆ. ಹೆಚ್ಚು ಕೆಲಸ ಮಾಡಿದರೆ ಮಾತ್ರ ಹೆಚ್ಚು ಸಾಧಿಸಬಹುದು ಎಂಬ ಭ್ರಮೆ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಆದರೆ, ಪ್ರಸಿದ್ಧ ಮನಃಶಾಸ್ತ್ರಜ್ಞರು ಹೇಳುವ ಪ್ರಕಾರ, ನಿಜವಾದ ಪ್ರಾಡಕ್ಟಿವಿಟಿ ಎಂದರೆ ಕೇವಲ ವಿಶ್ರಮಿಸದೆ ದುಡಿಯುವುದಲ್ಲ; ಬದಲಾಗಿ ಯಾವಾಗ ಮತ್ತು ಹೇಗೆ ವಿಶ್ರಾಂತಿ ಪಡೆಯಬೇಕು ಎಂದು ತಿಳಿದುಕೊಳ್ಳುವುದು.
ನಿರಂತರವಾಗಿ ಕೆಲಸ ಮಾಡುವುದರಿಂದ ದೇಹ ಮತ್ತು ಮನಸ್ಸು ತೀವ್ರ ಒತ್ತಡಕ್ಕೆ ಒಳಗಾಗುತ್ತದೆ. ಇದನ್ನು ವೈದ್ಯಕೀಯ ಜಗತ್ತಿನಲ್ಲಿ 'ಬರ್ನ್‌ಔಟ್' ಎಂದು ಕರೆಯಲಾಗುತ್ತದೆ. ಮನಸ್ಸು ಸುಸ್ತಾದಾಗ ಗಮನ ಏಕಾಗ್ರತೆ ಕಡಿಮೆಯಾಗುತ್ತದೆ, ತಪ್ಪು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ, ಹಾಗೂ ಸೃಜನಶೀಲತೆ ಕಡಿಮೆಯಾಗುತ್ತದೆ. ದೀರ್ಘಾವಧಿಯಲ್ಲಿ ಅದು ತೀವ್ರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಕಾರು ಸುಗಮವಾಗಿ ಚಲಿಸಲು ನಿರಂತರವಾಗಿ ಇಂಧನ ಮತ್ತು ಸೂಕ್ತ ನಿರ್ವಹಣೆ ಹೇಗೆ ಅಗತ್ಯವೋ, ಮಾನವ ಯಂತ್ರಕ್ಕೂ ವಿಶ್ರಾಂತಿ ಅಷ್ಟೇ ಅತ್ಯಗತ್ಯ. ನಾವು ವಿಶ್ರಾಂತಿ ಪಡೆಯುವ ಸಮಯದಲ್ಲಿ ಮೆದುಳು ದಿನವಿಡೀ ಸಂಗ್ರಹಿಸಿದ ಮಾಹಿತಿಯನ್ನು ಸರಿಯಾಗಿ ವರ್ಗೀಕರಿಸಿ, ಹೊಸ ಆಲೋಚನೆಗಳಿಗೆ ಜಾಗ ಮಾಡಿಕೊಡುತ್ತದೆ. ಪ್ರಸಿದ್ಧ ವಿಜ್ಞಾನಿಗಳು ಮತ್ತು ಬರಹಗಾರರಿಗೆ ಅತ್ಯುತ್ತಮ ಕಲ್ಪನೆಗಳು ಹೊಳೆದಿದ್ದು ಕೆಲಸದ ತೀವ್ರ ಒತ್ತಡದಲ್ಲಿದ್ದಾಗ ಅಲ್ಲ, ಬದಲಾಗಿ ಪ್ರಕೃತಿಯ ಮಡಿಲಿನಲ್ಲಿ ಅಥವಾ ಬಿಡುವಿನ ಕ್ಷಣಗಳಲ್ಲಿ ವಿಶ್ರಮಿಸುತ್ತಿದ್ದಾಗ ಎಂಬುದು ಇಲ್ಲಿ ಗಮನಾರ್ಹ.
ನಿಮ್ಮ ಪ್ರಾಡಕ್ಟಿವಿಟಿಯನ್ನು ಹೆಚ್ಚಿಸಲು ದಿನದ ವೇಳಾಪಟ್ಟಿಯಲ್ಲಿ ಸಣ್ಣ ಬಿಡುವುಗಳನ್ನು ಯೋಜಿಸುವುದು ಸೂಕ್ತ. ಪ್ರತಿದಿನ ನಿಯಮಿತವಾಗಿ ಕೆಲಸದ ನಡುವೆ ಐದು ನಿಮಿಷಗಳ ವಿರಾಮ ತೆಗೆದುಕೊಳ್ಳುವುದು, ಕೆಲಸ ಮುಗಿದ ಅನಂತರ ಡಿಜಿಟಲ್ ಡಿಟಾಕ್ಸ್ ಮಾಡುವುದು ಹಾಗೂ ಪ್ರಕೃತಿಯ ನಡುವೆ ಸ್ವಲ್ಪ ಸಮಯ ಕಳೆಯುವುದು ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಸಕಾಲಿಕ ನಿದ್ರೆ ಮತ್ತು ಬಿಡುವು ಹೃದಯದ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯನ್ನು ಕಾಪಾಡಲು ನೆರವಾಗುತ್ತವೆ.
ವಿಶ್ರಾಂತಿ ಎನ್ನುವುದು ಸೋಮಾರಿತನದ ಸಂಕೇತವಲ್ಲ, ಅದು ಮುಂದಿನ ದೊಡ್ಡ ಜಿಗಿತಕ್ಕೆ ದೇಹ ಮತ್ತು ಮನಸ್ಸನ್ನು ಸಿದ್ಧಗೊಳಿಸುವ ಇಂಧನ. ನಿಮ್ಮ ಶ್ರಮ ಮತ್ತು ಸಮಯಕ್ಕೆ ಗೌರವ ಕೊಡುವಷ್ಟೇ ಮುಖ್ಯವಾಗಿ ನಿಮ್ಮ ದೇಹ ನೀಡುವ ಆಯಾಸದ ಮುನ್ಸೂಚನೆಗಳಿಗೂ ಸ್ಪಂದಿಸಿ, ಸೂಕ್ತ ಸಮಯದಲ್ಲಿ ವಿಶ್ರಾಂತಿ ಪಡೆಯುವುದನ್ನು ಅಭ್ಯಾಸ ಮಾಡುವುದು ಅಗತ್ಯ.
-ವೈಷ್ಣವೀ
ಪುತ್ತೂರು

