Dailyhunt Logo
  • Light mode
    Follow system
    Dark mode
    • Play Story
    • App Story
Robotic Surgery in Gynecology: ಗೈನಾಕಾಲಜಿಯಲ್ಲಿ ರೋಬೋಟಿಕ್‌ ಸರ್ಜರಿ

Robotic Surgery in Gynecology: ಗೈನಾಕಾಲಜಿಯಲ್ಲಿ ರೋಬೋಟಿಕ್‌ ಸರ್ಜರಿ

ರೋಬೋಟಿಕ್‌ ಸರ್ಜರಿ ಎಂದರೆ ಏನು?

ರೋಬೋಟಿಕ್‌ ಸರ್ಜರಿ ಎಂಬುದು ಸರ್ಜನ್‌ ಒಂದು ಕಾನ್ಸೋಲ್‌ ಸಹಾಯದಿಂದ ರೋಬೋಟಿಕ್‌ ಆರ್ಮ್ಗಳನ್ನು ನಿಯಂತ್ರಿಸುವ ಮೂಲಕ ನಡೆಸುವ ಶಸ್ತ್ರಚಿಕಿತ್ಸೆಯ ವ್ಯವಸ್ಥೆ. ಈ ರೋಬೋಟಿಕ್‌ ಆರ್ಮ್ ಗಳು ಮಾನವನ ಕೈಗಳಿಗಿಂತ ಹೆಚ್ಚಿನ ನಮ್ಯತೆ (Flexibility) ಹೊಂದಿದ್ದು, ಅತ್ಯಂತ ನಿಖರ ಮತ್ತು ಸೂಕ್ಷ್ಮವಾದ ಚಲನೆಗಳನ್ನು ನಡೆಸಲು ಸಾಧ್ಯವಾಗುತ್ತದೆ.

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ (ಕೆಎಂಸಿ) ಲಭ್ಯವಿರುವ ಮೆಡ್‌ಟ್ರಾನಿಕ್‌ ಹ್ಯೂಗೋ (Medtronic HUGO) ರೋಬೋಟಿಕ್ಸ್ ವ್ಯವಸ್ಥೆಯು ಸಣ್ಣ ಗಾಯಗಳ ಮೂಲಕ ಕನಿಷ್ಠ ಗಾಯ ಗಳ ಶಸ್ತ್ರಚಿಕಿತ್ಸೆಗೆ ನೆರವಾಗುತ್ತದೆ.

ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ರೋಬೋಟಿಕ್‌ ಸರ್ಜರಿಯಲ್ಲಿ ಸಣ್ಣ ಉಪಕರಣಗಳು ಮತ್ತು ಕೆಮರಾವನ್ನು ಬಳಸಲಾಗುತ್ತದೆ. ಇದು ಶಸ್ತ್ರಚಿಕಿತ್ಸೆಯ ಸ್ಥಳವನ್ನು 3 ಡಿ ಕ್ಲೋಸ್‌ ಅಪ್‌ ಮಾದರಿಯಲ್ಲಿ ಸ್ಪಷ್ಟವಾಗಿ ತೋರಿಸುತ್ತದೆ. ಡಾ ವಿನ್ಸಿ ಸರ್ಜಿಕಲ್‌ ಸಿಸ್ಟಮ್‌ (da Vinci Surgical System) ವ್ಯಾಪಕವಾಗಿ ಬಳಸಲ್ಪಡುವ ರೋಬೋಟಿಕ್‌ ವ್ಯವಸ್ಥೆಯಾಗಿದೆ.

ಸ್ತ್ರೀರೋಗ ಶಾಸ್ತ್ರದಲ್ಲಿ (Gynaecology) ರೋಬೋಟಿಕ್‌ ಸರ್ಜರಿಯ ಪಾತ್ರವೇನು?

ಫೈಬ್ರಾಯ್ಡ್‌ಗಳು, ಎಂಡೊಮೆಟ್ರಿಯೋಸಿಸ್‌ ಮತ್ತು ಅಂಡಾಶಯದಲ್ಲಿ ಗಡ್ಡೆಗಳಂತಹ ಸಾಮಾನ್ಯ ಸ್ತ್ರೀರೋಗ ಸಮಸ್ಯೆಗಳಿಗೆ ಹಿಂದೆ ತೆರೆದ ಶಸ್ತ್ರಚಿಕಿತ್ಸೆ ಅಥವಾ ಲ್ಯಾಪರೊಸ್ಕೋಪಿ ಮಾಡಬೇಕಾಗಿತ್ತು. ಆದರೆ ಲ್ಯಾಪರೊಸ್ಕೋಪಿಯಲ್ಲಿ ನಿಖರತೆ ಮತ್ತು ವೈದ್ಯರ ದೈಹಿಕ ಶ್ರಮದ ಮಿತಿಗಳಿದ್ದವು. ಅಲ್ಲಿಗೆ ರೋಬೋಟಿಕ್‌ ಸರ್ಜರಿಯು ಸಂಪೂರ್ಣ ನಿಯಂತ್ರಣ ಮತ್ತು ನಿಖರತೆಯೊಂದಿಗೆ ಅತ್ಯಾಧುನಿಕ ಕನಿಷ್ಠ ಗಾಯ ಮತ್ತು ನೋವಿನ ಶಸ್ತ್ರಚಿಕಿತ್ಸೆಯಾಗಿ ಕಾಲಿಟ್ಟಿದೆ.

ರೋಬೋಟ್‌ ನೆರವಿನ ಶಸ್ತ್ರಚಿಕಿತ್ಸೆಯಿಂದ ಚಿಕಿತ್ಸೆ ಪಡೆಯುವ ಸಾಮಾನ್ಯ ಸಮಸ್ಯೆಗಳು

ಗರ್ಭಕೋಶದ ಫೈಬ್ರಾಯ್ಡ್‌ಗಳು: ಫೈಬ್ರಾಯ್ಡ್‌ಗಳು ಗರ್ಭಕೋಶದಲ್ಲಿ ಬೆಳೆಯುವ ಅಸಹಜ ಗಡ್ಡೆಗಳಾಗಿದ್ದು, ಅಧಿಕ ರಕ್ತಸ್ರಾವ, ಹೊಟ್ಟೆಯ ಭಾಗದಲ್ಲಿ ನೋವು ಮತ್ತು ಬಂಜೆತನಕ್ಕೆ ಕಾರಣವಾಗುತ್ತವೆ. ಸಾಂಪ್ರದಾಯಿಕ ವಿಧಾನದಲ್ಲಿ ದೊಡ್ಡ ಗಾತ್ರದ ಗಾಯವಾಗುವ ತೆರೆದ ಶಸ್ತ್ರಚಿಕಿತ್ಸೆ ನಡೆಸುವುದು (ಮೈಯೊಮೆಕ್ಟಮಿ) ಅಥವಾ ಗರ್ಭಕೋಶವನ್ನೇ ತೆಗೆದುಹಾಕುವುದು (ಹಿಸ್ಟರೆಕ್ಟಮಿ) ಮಾಡಲಾಗುತ್ತಿತ್ತು. ಆದರೆ ರೋಬೋಟಿಕ್‌ ಸರ್ಜರಿಯ ಮೂಲಕ ಗರ್ಭಕೋಶಕ್ಕೆ ಯಾವುದೇ ಹಾನಿಯಾಗದಂತೆ ಕೇವಲ ಫೈಬ್ರಾಯ್ಡ್‌ಗಳನ್ನು ಮಾತ್ರ ಅತ್ಯಂತ ನಿಖರತೆಯಿಂದ ತೆಗೆದುಹಾಕಬಹುದು.

ಎಂಡೊಮೆಟ್ರಿಯೋಸಿಸ್‌: ಗರ್ಭಕೋಶದ ಒಳಗಿರಬೇಕಾದ ಅಂಗಾಂಶವು ಹೊರಭಾಗದಲ್ಲಿ ಬೆಳೆದಾಗ ತೀವ್ರ ಕಿಬ್ಬೊಟ್ಟೆ ನೋವು, ಅಧಿಕ ರಕ್ತಸ್ರಾವ ಮತ್ತು ಬಂಜೆತನ ಉಂಟಾಗುತ್ತದೆ. ರೋಬೋಟಿಕ್‌ ಸರ್ಜರಿಯು ಸಾಮಾನ್ಯ ಅಂಗಾಂಶಗಳಿಗೆ ಕನಿಷ್ಠ ಹಾನಿ ಮಾಡುವ ಮೂಲಕ ಈ ಅಸಹಜ ಬೆಳವಣಿಗೆಯನ್ನು ಹೊರತೆಗೆಯಲು ಸಹಾಯ ಮಾಡುತ್ತದೆ. ಇದರಿಂದ ನೋವು ಕಡಿಮೆಯಾಗಿ, ಗರ್ಭ ಧರಿಸುವ ಸಾಧ್ಯತೆ ಹೆಚ್ಚಾಗುತ್ತದೆ.

ಅಂಡಾಶಯದ ಗಡ್ಡೆಗಳು: ದೊಡ್ಡ ಓವೇರಿಯನ್‌ ಗಡ್ಡೆಗಳು ನೋವನ್ನು ಉಂಟುಮಾಡಿದರೆ ಅಥವಾ ಅಂಡಾಶಯದ ಕಾರ್ಯಕ್ಕೆ ಅಡ್ಡಿಯಾದರೆ ಅವುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಬೇಕಾಗುತ್ತದೆ. ರೋಬೋಟಿಕ್‌ ಸರ್ಜರಿಯು ಅಂಡಾಶಯಗಳನ್ನು ಬಹಳ ಸೂಕ್ಷ್ಮವಾಗಿ ನಿರ್ವಹಿಸಲು ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಹಿಸ್ಟರೆಕ್ಟಮಿ (ಗರ್ಭಕೋಶ ತೆಗೆಯುವುದು): ಕ್ಯಾನ್ಸರ್‌, ತೀವ್ರ ಎಂಡೊಮೆಟ್ರಿಯೋಸಿಸ್‌ ಅಥವಾ ಫೈಬ್ರಾ ಯ್ಡ್‌ಗಳ ಸಂದರ್ಭದಲ್ಲಿ ಗರ್ಭಕೋಶ ತೆಗೆಯುವುದು ಅನಿವಾರ್ಯವಾಗಬಹುದು. ರೋಬೋಟಿಕ್‌ ಶಸ್ತ್ರಚಿಕಿತ್ಸೆಯು ರಕ್ತಸ್ರಾವ, ನೋವು ಮತ್ತು ಆಸ್ಪತ್ರೆಯಲ್ಲಿ ಉಳಿಯುವ ಅವಧಿಯನ್ನು ಕಡಿಮೆ ಮಾಡುವ ಮೂಲಕ ಇದನ್ನು ಸುರಕ್ಷಿತವಾಗಿಸುತ್ತದೆ.

ಗೈನಕಾಲಜಿಯಲ್ಲಿ ರೋಬೋಟಿಕ್‌ ಸರ್ಜರಿಯ ಪ್ರಯೋಜನಗಳು

ಮಹಿಳೆಯರು ತಮ್ಮ ಪ್ರಜನನ ಅಂಗಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಮಾನ್ಯವಾಗಿ ಭಯಪಡುತ್ತಾರೆ. ಆದರೆ ರೋಬೋಟಿಕ್‌ ಸರ್ಜರಿಯು ಅತ್ಯಂತ ಸುರಕ್ಷಿತ, ನಿಖರ ಮತ್ತು ಶೀಘ್ರ ಚೇತರಿಕೆಗೆ ಸಹಕಾರಿಯಾಗಿದೆ.

ಪ್ರಮುಖ ಪ್ರಯೋಜನಗಳು

 ಹೆಚ್ಚಿನ ನಿಖರತೆ: ಶಸ್ತ್ರಚಿಕಿತ್ಸಕರಿಗೆ ಸ್ಪಷ್ಟವಾದ, 3 ಡಿ ಆಯಾಮದ ವೀಕ್ಷಣೆ ದೊರೆಯುವುದರಿಂದ ಅಂಗಾಂಶಗಳನ್ನು ಅತ್ಯಂತ ಸೂಕ್ಷ್ಮವಾಗಿ ಹೊಲಿಯಲು ಮತ್ತು ನಿರ್ವಹಿಸಲು ಸಾಧ್ಯವಾಗುತ್ತದೆ.

 ಕನಿಷ್ಠ ಗಾಯ/ಕಿರಿಕಿರಿ: ಸಣ್ಣ ಗಾಯಗಳ ಮೂಲಕ ಸರ್ಜರಿ ಮಾಡುವುದರಿಂದ ದೇಹಕ್ಕೆ ಕನಿಷ್ಠ ಗಾಯವಾಗುತ್ತದೆ, ಆಘಾತ ಮತ್ತು ರಕ್ತಸ್ರಾವ ಕಡಿಮೆ ಇರುತ್ತವೆ ಮತ್ತು ಬೇಗನೆ ಗುಣಮುಖವಾಗುತ್ತದೆ.

 ಕಡಿಮೆ ರಕ್ತಸ್ರಾವ: ಸಣ್ಣ ಗಾಯಗಳು ಮತ್ತು ನಿಖರ ಕಾರ್ಯಾಚರಣೆಯಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವ ಕಡಿಮೆಯಾಗುತ್ತದೆ, ಇದರಿಂದ ರಕ್ತ ನೀಡುವ (Transfusion) ಅಗತ್ಯತೆ ಕಡಿಮೆಯಾಗುತ್ತದೆ.

 ಆಸ್ಪತ್ರೆಯಲ್ಲಿ ಕಡಿಮೆ ದಿನಗಳ ವಾಸ್ತವ್ಯ: ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ರೋಗಿಗಳು ಬೇಗನೆ ಮನೆಗೆ ಹಿಂದಿರುಗಬಹುದು. ಹಲವು ಕೇಂದ್ರಗಳಲ್ಲಿ ರೋಬೋಟಿಕ್‌ ಹಿಸ್ಟರೆಕ್ಟಮಿಯನ್ನು 'ಡೇ ಕೇರ್‌' (ಅಂದೇ ಮನೆಗೆ ಕಳುಹಿಸುವ) ಸರ್ಜರಿಯಾಗಿ ಮಾಡಲಾಗುತ್ತದೆ.

 ಶೀಘ್ರ ಚೇತರಿಕೆ: ರೋಗಿಗಳು ತಮ್ಮ ದೈನಂದಿನ ಚಟುವಟಿಕೆಗಳಿಗೆ ಬೇಗನೆ ಮರಳಬಹುದು.

ಶಸ್ತ್ರಚಿಕಿತ್ಸೆಯ ಅನಂತರ ಕಡಿಮೆ ನೋವು: ಸಣ್ಣ ಗಾಯ ಇರುವುದರಿಂದ ನೋವು ಕಡಿಮೆ ಇರುತ್ತದೆ ಮತ್ತು ನೋವು ನಿವಾರಕ ಮಾತ್ರೆಗಳ ಅಗತ್ಯತೆ ಕಡಿಮೆಯಿರುತ್ತದೆ.

 ಸೋಂಕಿನ ಅಪಾಯ ಕಡಿಮೆ: ಒಳಗಿನ ಅಂಗಗಳು ಹೊರಗಿನ ವಾತಾವರಣಕ್ಕೆ ತೆರೆದುಕೊಳ್ಳುವುದು ಕಡಿಮೆಯಿರುವುದರಿಂದ ಸೋಂಕಿನ ಅಪಾಯ ಕಡಿಮೆಯಿರುತ್ತದೆ.

 ಸರ್ಜನ್‌ಗಳಿಗೆ ಉತ್ತಮ ಸೌಕರ್ಯ: ವೈದ್ಯರು ಕುಳಿತುಕೊಂಡೇ ಶಸ್ತ್ರಚಿಕಿತ್ಸೆ ಮಾಡುವುದರಿಂದ ಅವರ ಆಯಾಸ ಕಡಿಮೆಯಾಗಿ, ದೀರ್ಘಾವಧಿಯ ಶಸ್ತ್ರಚಿಕಿತ್ಸೆಯನ್ನು ಹೆಚ್ಚು ನಿಖರವಾಗಿ ಮಾಡಲು ಸಾಧ್ಯವಾಗುತ್ತದೆ.

 ಕಷ್ಟಕರ ದೇಹಭಾಗಗಳನ್ನು ತಲುಪುವ ಸಾಮರ್ಥ್ಯ: ಗರ್ಭಾಶಯ, ಪ್ರಜನನ ಅಂಗದ ಸೂಕ್ಷ್ಮ ಒಳಭಾಗಗಳನ್ನು ರೋಬೋಟಿಕ್‌ ಆರ್ಮ್ ಗಳು ಸುಲಭವಾಗಿ ತಲುಪಬಲ್ಲವು.

 ಉತ್ತಮ ಫ‌ಲಿತಾಂಶಗಳು: ಜಟಿಲವಾದ ಸಮಸ್ಯೆಗಳಲ್ಲೂ ಯಶಸ್ಸಿನ ಪ್ರಮಾಣ ಹೆಚ್ಚಾಗಿರುತ್ತದೆ.

ಲ್ಯಾಪರೊಸ್ಕೋಪಿಕ್‌ ಮತ್ತು ರೋಬೋಟಿಕ್‌ ಶಸ್ತ್ರಚಿಕಿತ್ಸೆ ನಡುವಿನ ವ್ಯತ್ಯಾಸಗಳೇನು?

ಲ್ಯಾಪರೊಸ್ಕೋಪಿಕ್‌ ಮತ್ತು ರೋಬೋಟಿಕ್‌ ಎರಡೂ ಶಸ್ತ್ರಚಿಕಿತ್ಸೆಗಳು ಕನಿಷ್ಠ ದೇಹ ಗಾಯದ ವಿಧಾನಗಳಾಗಿದ್ದರೂ ಇವೆರಡರ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ:

1. ಉನ್ನತ ಮಟ್ಟದ ವೀಕ್ಷಣೆ: ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆ ಮಾನಿಟರ್‌ನಲ್ಲಿ ಕಾರ್ಯಾಚರಣೆಯ ಸ್ಥಳದ 2 ಡಿ ದೃಶ್ಯವನ್ನು ನೀಡುತ್ತದೆ. ಆದರೆ ರೋಬೋಟಿಕ್‌ ಶಸ್ತ್ರಚಿಕಿತ್ಸೆಯು ಕಾನ್ಸೋಲ್‌ ಮೂಲಕ ಸೂಕ್ಷ್ಮದರ್ಶಿ, ಹೈ ಡೆಫಿನಿಶನ್‌ನ 3 ಡಿ ವೀಕ್ಷಣೆಯನ್ನು ಒದಗಿಸುತ್ತದೆ. ಇದು ಶಸ್ತ್ರಚಿಕಿತ್ಸಕರಿಗೆ ಆಳವಾದ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡುತ್ತದೆ.

2. ಉಪಕರಣಗಳ ನಿಯಂತ್ರಣ: ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆಯಲ್ಲಿ, ವೈದ್ಯರು ನೇರವಾಗಿ ನೆಟ್ಟಗಿನ/ ಬಾಗದ ಉಪಕರಣಗಳನ್ನು ಬಳಸುತ್ತಾರೆ. ಇದು ಚಲನೆಯ ವ್ಯಾಪ್ತಿಯನ್ನು ಮಿತಿಗೊಳಿಸುತ್ತದೆ. ರೋಬೋಟಿಕ್‌ ಶಸ್ತ್ರಚಿಕಿತ್ಸೆಯು 360 ಡಿಗ್ರಿ ತಿರುಗಬಲ್ಲ ಉಪಕರಣಗಳನ್ನು ಬಳಸುತ್ತದೆ. ಇದು ವೈದ್ಯರಿಗೆ ಹೆಚ್ಚಿನ ಚಲನಶೀಲತೆ ಮತ್ತು ನಮ್ಯತೆಯನ್ನು ನೀಡುತ್ತದೆ.

3. ಸೌಕರ್ಯ/ಎರ್ಗಾನಮಿಕ್ಸ್‌: ಲ್ಯಾಪರೊಸ್ಕೋಪಿಕ್‌ ಶಸ್ತ್ರಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕರು ನಿಂತುಕೊಂಡೇ ಕೆಲಸ ಮಾಡಬೇಕಾಗುತ್ತದೆ ಮತ್ತು ಶರೀರವನ್ನು ಅಸಹಜ ಭಂಗಿಯಲ್ಲಿ ಇಡಬೇಕಾಗಬಹುದು. ಇದು ದೀರ್ಘಾವಧಿಯ ಚಿಕಿತ್ಸೆಯಲ್ಲಿ ಆಯಾಸಕ್ಕೆ ಕಾರಣವಾಗಬಹುದು. ರೋಬೋಟಿಕ್‌ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಕಾನ್ಸೋಲ್‌ನಲ್ಲಿ ಆರಾಮವಾಗಿ ಕುಳಿತು ಕಾರ್ಯನಿರ್ವಹಿಸಬಹುದು. ಇದು ದೈಹಿಕ ಆಯಾಸವನ್ನು ಕಡಿಮೆ ಮಾಡಿ, ದೀರ್ಘಾವಧಿಯ ಶಸ್ತ್ರಚಿಕಿತ್ಸೆಯಲ್ಲಿ ನಿಖರತೆಯನ್ನು ಹೆಚ್ಚಿಸುತ್ತದೆ.

-ಮುಂದಿನ ವಾರಕ್ಕೆ

-ಡಾ| ರೇಖಾ ಉಪಾಧ್ಯ

ಅಸೋಸಿಯೇಟ್‌ ಪ್ರೊಫೆಸರ್‌,

ಲ್ಯಾಪರೊಸ್ಕೊಪಿಕ್‌ ಮತ್ತು ರೊಬೊಟಿಕ್‌ ಸರ್ಜನ್‌;

ಗೈನೆಕ್‌ ಆಂಕಾಲಜಿ ಫೆಲೋಶಿಪ್‌ ಫ್ಯಾಕಲ್ಟಿ,

ಒಬಿಜಿ ವಿಭಾಗ, ಕೆಎಂಸಿ ಆಸ್ಪತ್ರೆ,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಂಗಳೂರು)

Dailyhunt
Disclaimer: This content has not been generated, created or edited by Dailyhunt. Publisher: Udayavani